ADVERTISEMENT

ಲೋಕಾಪುರ | ದನ, ನಾಯಿ ಕಾಟ: ಜನ ಹೈರಾಣ

ಸಮಸ್ಯೆ ಕುರಿತು ನಿರ್ಲಕ್ಷ್ಯ ತೋರುತ್ತಿರುವ ಪಟ್ಟಣ ಪಂಚಾಯಿತಿ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 6:33 IST
Last Updated 24 ಅಕ್ಟೋಬರ್ 2024, 6:33 IST
ಲೋಕಾಪುರ ರಾಜ್ಯ ಹೆದ್ದಾರಿ ಸಂಪರ್ಕಿಸುವ ಬಸವೇಶ್ವರ ವೃತ್ತದಲ್ಲಿ ಬಿಡಾಡಿ ದನಗಳು ಮಲಗಿವೆ
ಲೋಕಾಪುರ ರಾಜ್ಯ ಹೆದ್ದಾರಿ ಸಂಪರ್ಕಿಸುವ ಬಸವೇಶ್ವರ ವೃತ್ತದಲ್ಲಿ ಬಿಡಾಡಿ ದನಗಳು ಮಲಗಿವೆ   

ಲೋಕಾಪುರ: ಪಟ್ಟಣದ ಜನತೆ ನಾಯಿ, ಬಿಡಾಡಿ ದನಗಳ ಕಾಟಕ್ಕೆ ಹೈರಾಣಾಗಿದ್ದಾರೆ. ಬೀಡಾಡಿ ದನಗಳ ಹಾವಳಿ ಇಲ್ಲಿನ ಜನರಿಗೆ ಪ್ರತಿದಿನ ಸಮಸ್ಯೆಯಾಗಿದೆ.

ಬಸ್ ನಿಲ್ದಾಣ, ಬಸವೇಶ್ವರ ವೃತ್ತ, ಬಾಗಲಕೋಟೆ ರಸ್ತೆಯ ಎಪಿಎಂಸಿ ಕ್ರಾಸ್ ವರೆಗೆ ಮುಧೋಳ ರಸ್ತೆಯ ಪಟ್ಟಣ ಪಂಚಾಯಿತಿ ಕ್ರಾಸ್ ವರೆಗೆ ರಸ್ತೆಯ ಮೇಲೆ ದನಗಳು ಮಲಗುತ್ತವೆ. ಇದರಿಂದ ಬೈಕ್ ಸವಾರರು, ಪಾದಚಾರಿಗಳು ರೋಸಿ ಹೋಗಿದ್ದಾರೆ. ಮಹಿಳೆಯರು, ವೃದ್ಧರು ಇವುಗಳ ಕಾಟದಿಂದ ಬೇಸತ್ತಿದ್ದಾರೆ. ದನಗಳ ಕಾದಾಟದಿಂದ ಜನರಿಗೆ ಗಾಯಗಳಾದ ಉದಾಹರಣೆಗಳು ಸಾಕಷ್ಟಿವೆ.

ಬೈಕ್ ಸವಾರರ ಕಥೆ ಹೇಳತೀರದಾಗಿದೆ. ಅನೇಕ ಬೈಕ್ ಅಪಘಾತಗಳು ಸಂಭವಿಸಿವೆ. ಬೀಡಾಡಿ ದನಗಳಷ್ಟೇ ಅಲ್ಲದೆ, ಮಾಲೀಕರು ದನಗಳನ್ನು ಕಟ್ಟದ ಅವುಗಳೂ ಸೇರಿ ರಸ್ತೆಯ ಮೇಲೆ ತಮ್ಮ ಸಾಮ್ರಾಜ್ಯ ಸ್ಥಾಪಿಸುತ್ತಿವೆ. ಕಾಯಿಪಲ್ಲೆ ಮಾರುಕಟ್ಟೆಗೆ ಲಗ್ಗೆ ಇಡುವ ದನಗಳು ಎಲ್ಲೆಂದರೆಲ್ಲಿ ಓಡಾಡುತ್ತ ಜನರಿಗೆ ತೊಂದರೆ ಕೊಡುತ್ತಿವೆ.

ADVERTISEMENT

ಕೆಲವು ದಿನಗಳ ಹಿಂದೆ ಮನೆಯ ಅಂಗಳದ ಮುಂದೆ ಆಟವಾಡುತ್ತಿದ್ದ ರಚನಾ ಎಂಬ ಬಾಲಕಿಯ ಕಿವಿಯ ಪಕ್ಕಕ್ಕೆ ದನದ ಕೋಡಿನಿಂದ ತಿವಿದು ಗಾಯಗೊಳಿಸಿದೆ. ಬೆಳಿಗ್ಗೆಯಿಂದ ಸಂಜೆಯ ವರೆಗೆ ರಸ್ತೆಯಲ್ಲಿ ಇವುಗಳ ದರ್ಬಾರ್ ನಡೆದು, ರಾತ್ರಿ ಬಸ್ ನಿಲ್ದಾಣ ಆಶ್ರಯ ಪಡೆಯುತ್ತವೆ. ನಾಯಿಗಳು ಗುಂಪು ಕೂಡ ಹುಚ್ಚಾಟದಲ್ಲಿ ತೊಡಗಿ ಜನರಿಗೆ ತೊಂದರೆ ಕೊಡುತ್ತಿವೆ.

ಮುಧೋಳ ರಸ್ತೆಯ ಬಾಲಕಿಯರ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿ ನಾಯಿಗಳು ಮತ್ತು ದನಗಳ ತಂಡ ಬೀಡುಬಿಟ್ಟಿರುತ್ತವೆ. ಇದರಿಂದ ಶಾಲೆಗೆ ಹೋಗುವ ಮಕ್ಕಳಿಗೆ ಆತಂಕ ಉಂಟಾಗಿದೆ. ಹಲವು ಬಾರಿ ಪಟ್ಟಣ ಪಂಚಾಯಿತಿಯವರಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.

‘ಬೀಡಾಡಿ ದನಗಳಿಂದ ಜನರಿಗೆ ತೊಂದರೆಯಾಗುತ್ತಿದ್ದು ಅವುಗಳನ್ನು ಗೋಶಾಲೆಗೆ ಕಳಿಸಬೇಕು’ ಎಂದು ಪಟ್ಟಣದ ನಿವಾಸಿ ರಾಘವೇಂದ್ರ ಬಾಗಲೆ ಒತ್ತಾಯಿಸಿದ್ದಾರೆ.

ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಿದಾಗ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಜ್ಯೋತಿ ಉಪ್ಪಾರ ಕರೆ ಸ್ವೀಕರಿಸಲಿಲ್ಲ.

ಬೀಡಾಡಿ ದನಗಳ ಜೊತೆ ಸಾರ್ವಜನಿಕರ ದನಗಳೂ ಇವೆ. ಪ್ರಕಟಣೆ ಮೂಲಕ ಜನರಿಗೆ ಮಾಹಿತಿ ನೀಡಲಾಗುವುದು. ನಂತರವೂ ರಸ್ತೆಯ ಮೇಲೆ ಇರುವ ದನಗಳನ್ನು ಗೋಶಾಲೆಗೆ ಕಳಿಸಲಾಗುವುದು
ಮಹಾದೇವ ಸಣಮುರಿ ತಹಶೀಲ್ದಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.