ADVERTISEMENT

ಸಮುದಾಯ ಕೇಂದ್ರಕ್ಕೆ ಬೇಕಿವೆ ಸೌಲಭ್ಯಗಳು

ತಾಲ್ಲೂಕು ಕೇಂದ್ರವಾಗಿ ಘೋಷಿಸಿದರು ಸಿಗದ ಸೌಕರ್ಯಗಳು

ವಿಶ್ವಜ ಕಾಡದೇವರ
Published 13 ಸೆಪ್ಟೆಂಬರ್ 2024, 5:17 IST
Last Updated 13 ಸೆಪ್ಟೆಂಬರ್ 2024, 5:17 IST
ರಬಕವಿ ಬನಹಟ್ಟಿ ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ಬಾಣಂತಿಯರ ವಾರ್ಡ್
ರಬಕವಿ ಬನಹಟ್ಟಿ ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ಬಾಣಂತಿಯರ ವಾರ್ಡ್   

ರಬಕವಿ ಬನಹಟ್ಟಿ: ರಬಕವಿ ಬನಹಟ್ಟಿ ನಗರಗಳನ್ನು ಸರ್ಕಾರ ತಾಲ್ಲೂಕೆಂದು ಘೋಷಿಸಿದರೂ, ತಾಲ್ಲೂಕು ಮಟ್ಟದ ಕಾರ್ಯಾಲಯಗಳನ್ನು ನೀಡದೆ ಇರುವುದರಿಂದ ಇಲ್ಲಿಯ ಜನರು ತೊಂದರೆ ಅನುಭವಿಸುವಂತಾಗಿದೆ.

ಅದೇ ರೀತಿಯಾಗಿ ರಬಕವಿ ಬನಹಟ್ಟಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಾಲ್ಲೂಕು ಮಟ್ಟದಲ್ಲಿಯ ಆಸ್ಪತ್ರೆಗೆ ಬೇಕಾಗುವ ಸೌಲಭ್ಯಗಳನ್ನು ನೀಡಬೇಕಾದ ಅಗತ್ಯವಿದೆ. ಈ ಆಸ್ಪತ್ರೆಯನ್ನು ಕೂಡಾ ಮೇಲ್ದರ್ಜೆಗೇರಿಸಬೇಕಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಆಸ್ಪತ್ರೆಗೆ ಸ್ಥಳದ ಅವಶ್ಯಕತೆ ಇದೆ.

ಈಚೆಗೆ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ ಆರಂಭಿಸಲಾಯಿತು. ಇದು ಈ ಭಾಗದ ಜನರಿಗೆ ಅಗತ್ಯವಾಗಿತ್ತು. ಆದರೆ ಡಯಾಲಿಸಿಸ್ ಕೇಂದ್ರವನ್ನು ಹತ್ತು ಬೆಡ್‌ಗಳ ವಾರ್ಡ್ ನಲ್ಲಿ ನಿರ್ಮಿಸಲಾಯಿತು. ಮೂವತ್ತು ಬೆಡ್ ಗಳ ಆಸ್ಪತ್ರೆಯಲ್ಲಿ ಈಗ ಇಪ್ಪತ್ತು ಬೆಡ್ ಗಳು ಮಾತ್ರ ಲಭ್ಯವಿವೆ. ಇದರಿಂದಾಗಿ ಒಳ ರೋಗಿಗಳಿಗೆ ಬೆಡ್ ಇಲ್ಲದೆ ಇರುವುದರಿಂದ ಸಮಸ್ಯೆಯಾಗಿದೆ.

ADVERTISEMENT

ಆಸ್ಪತ್ರೆಯಲ್ಲಿ ದಿನನಿತ್ಯ 350 ರಿಂದ 400 ಹೊರ ರೋಗಿಗಳು ಬರುತ್ತಾರೆ. ಸೋಮವಾರ ಮತ್ತು ಗುರುವಾರ ಆಸ್ಪತ್ರೆಗೆ ಬರುವವರ ಸಂಖ್ಯೆ ಹೆಚ್ಚಿರುತ್ತದೆ. ಇನ್ನೂ ರೋಗಿಗಳಿಗೆ ಚುಚ್ಚು ಮದ್ದು ನೀಡಲು ಒಬ್ಬರೆ ಶುಶ್ರೂಷಕ ಅಧಿಕಾರಿಗಳು ಇರುವುದರಿಂದ ನಿತ್ಯ ನೂರಾರು ರೋಗಿಗಳಿಗೆ ಬಿಡುವಿಲ್ಲದೆ ಅವರೇ ಚುಚ್ಚುಮದ್ದು ನೀಡಬೇಕಾಗುತ್ತದೆ.

ಆಸ್ಪತ್ರೆಯಲ್ಲಿ ಮೂವರು ಕಾಯಂ ವೈದ್ಯರು, ಒಬ್ಬರು ಹೊರಗುತ್ತಿಗೆ ಆಧಾರದ ಮೇಲಿದ್ದರೆ, ಆರು ಜನ ಕಾಯಂ ದಾದಿಯರು ಇದ್ದು, ನಾಲ್ವರನ್ನು ಹೊರಗುತ್ತಿಗೆ ಆಧಾರ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ಇಲ್ಲಿ ಎಲ್ಲ ವಿಭಾಗಗಳ ತಜ್ಞ ವೈದ್ಯರು ಮತ್ತು ಮೂವತ್ತಕ್ಕೂ ಹೆಚ್ಚು ದಾದಿಯರ ಅವಶ್ಯಕತೆ ಇದೆ. ತಜ್ಞ ವೈದ್ಯರು ಇಲ್ಲದೆ ಇರುವುದರಿಂದ ಈ ಭಾಗದ ಬಡ ಜನರು ಬೇರೆ ಕಡೆಗೆ, ಇಲ್ಲವೆ ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ. ತುರ್ತು ಚಿಕಿತ್ಸಾ ಘಟಕಗಳನ್ನು ಆರಂಭಿಸಬೇಕಾಗಿದೆ.

ಇನ್ನೂ ಆಸ್ಪತ್ರೆಯ ಆವರಣದಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ಮತ್ತು ಮೂತ್ರಾಲಯಗಳು ಇಲ್ಲದೆ ಇರುವುದರಿಂದ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಆಸ್ಪತ್ರೆಗೆ ಆವರಣದಲ್ಲಿಯೇ, ಆಸ್ಪತ್ರೆಯ ಮುಂಭಾಗದಲ್ಲಿಇಂದಿರಾ ಕ್ಯಾಂಟಿನ್ ಕಟ್ಟಡ ಕಾಮಗಾರಿ ನಡೆದಿದೆ. ಇಲ್ಲಿ ಬೇರೆ ವಿಭಾಗಗಳನ್ನು ಸ್ಥಾಪನೆ ಮಾಡಬೇಕಾದರೆ ಮುಖ್ಯವಾಗಿ ಸ್ಥಳದ ಕೊರತೆ ಇರುವುದರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಪ್ರಯೋಗಾಲಯದಲ್ಲಿ ಶೌಚಾಲಯಗಳು ಇಲ್ಲದೆ ಇರುವುದರಿಂದ ರೋಗಿಗಳು ವಾರ್ಡ್ ಗಳಲ್ಲಿರುವ ಶೌಚಾಲಯಕ್ಕೆ ಹೋಗಬೇಕಾಗಿದೆ. ಚಿಕ್ಕದಾದ ಕೋಣೆಗಳಲ್ಲಿ ನಾಲ್ಕಾರು ಜನ ಸಲಹೆಗಾರರು ಕುಳಿತುಕೊಳ‍್ಳಬೇಕಾಗಿದೆ.

ಆಸ್ಪತ್ರೆಗೆ ಬರುವ ಜನರಿಗೆ ವಾಹನ ಪಾರ್ಕ್ ಮಾಡಲು ಸ್ಥಳ ಇಲ್ಲದಿರುವುದರಿಂದ ಬೇಕಾಬಿಟ್ಟಿಯಾಗಿ ವಾಹನಗಳನ್ನು ನಿಲುಗಡೆ ಮಾಡುತ್ತಿದ್ದಾರೆ.

ಆದಷ್ಟು ಬೇಗನೆ ಒಳ ರೋಗಿಗಳಿಗಾಗಿ ಇನ್ನಷ್ಟು ಬೆಡ್ ಗಳನ್ನು ಒದಗಿಸುವ ಮತ್ತು ತಜ್ಞ ವೈದ್ಯರು ಮತ್ತು ದಾದಿಯರನ್ನು ನೀಡುವ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಮೇಲಾಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕಾಗಿದೆ.

ಆಸ್ಪತ್ರೆಯ ಮುಂಭಾಗದಲ್ಲಿ ಇಂದಿರಾ ಕ್ಯಾಂಟಿನ್ ಕಾಮಗಾರಿ ನಡೆದಿದೆ
ಆಸ್ಪತ್ರೆಯಲ್ಲಿ ಚುಚ್ಚುಮದ್ದು ಪಡೆದುಕೊಳ್ಳಲು ಜನರು ಸರತಿಯಲ್ಲಿ ನಿಂತಿರುವುದು
ಆಸ್ಪತ್ರೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಇರುವುದರಿಂದ ಜನರು ವಾಹನಗಳನ್ನು ಬೇಕಾಬಿಟ್ಟಿಯಾಗಿ ನಿಲ್ಲಿಸಿರುವುದು
ಆಸ್ಪತ್ರೆಯಲ್ಲಿ ಡಯಾಲಿಸಿಸ್ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದು
ನೂರು ಬೆಡ್ ಗಳ ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕೆ ಸಮೀಪದ ಮದನಮಟ್ಟಿ ಬಳಿಯಿರುವ ಸ್ಥಳ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ
ಡಾ.ಎನ್.ಎಂ. ನದಾಫ್ ವೈದ್ಯಾಧಿಕಾರಿ ರಬಕವಿ ಬನಹಟ್ಟಿ ಸಮುದಾಯ ಆರೋಗ್ಯ ಕೇಂದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.