ಬಾಗಲಕೋಟೆ: ಇದು ಕಂಪ್ಯೂಟರ್ ಯುಗ. ಮಕ್ಕಳು ಕೌಶಲ ಬೆಳೆಸಿಕೊಳ್ಳಬೇಕು. ಕಂಪ್ಯೂಟರ್ ಕ್ಷೇತ್ರದಲ್ಲಿ ಜಗತ್ತಿನ ಗಮನ ಸೆಳೆಯುವಂತಹ ಸಾಧನೆಯನ್ನು ರಾಜ್ಯ ಮಾಡಿದೆ. ಆದರೆ, ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ದೊರೆಯುತ್ತಿಲ್ಲ.
ಪಠ್ಯದಲ್ಲಿ ಕಂಪ್ಯೂಟರ್ ಪಾಠವಿದೆ. ಆದರೆ, ಕಲಿಸಲಿಕ್ಕೆ ಕಂಪ್ಯೂಟರ್ ಇಲ್ಲ. ಕೆಲವು ಕಡೆಗಳಲ್ಲಿ ಕಂಪ್ಯೂಟರ್ ಇದೆ. ಆದರೆ, ಅಲ್ಲಿ ಕಲಿಸಲು ಶಿಕ್ಷಕರಿಲ್ಲ. ಇನ್ನೂ ಕೆಲವು ಕಡೆಗಳಲ್ಲಿ ಕಂಪ್ಯೂಟರ್ ಇದ್ದರೂ, ಅವುಗಳನ್ನಿಡಲು ಸೂಕ್ತ ಕೊಠಡಿ, ಅವುಗಳನ್ನು ಆನ್ ಮಾಡಲು ಬೇಕಾದ ವಿದ್ಯುತ್ ಸಂಪರ್ಕವಿಲ್ಲ.
ರಾಜ್ಯ ಸರ್ಕಾರ ಮಾಹಿತಿ ಸಿಂಧು ಯೋಜನೆಯಡಿ ಹಲವಾರು ಶಾಲೆಗಳಿಗೆ ಕಂಪ್ಯೂಟರ್ ನೀಡಿತ್ತು. ಶಿಕ್ಷಕರನ್ನೂ ನೇಮಕ ಮಾಡಲಾಗಿತ್ತು. ಯೋಜನೆ ಅವಧಿ ಪೂರ್ಣಗೊಂಡ ನಂತರ ಗುತ್ತಿಗೆ ಆಧಾರದ ಮೇಲಿದ್ದ ಶಿಕ್ಷಕರನ್ನು ಮುಂದುವರೆಸಿಲ್ಲ. ಕಂಪ್ಯೂಟರ್‌ಗಳು ಒಂದೊಂದಾಗಿ ಮೂಲೆ ಸೇರತೊಡಗಿದವು.
ಇನ್ಫೊಸಿಸ್, ಅಜೀಂ ಪ್ರೇಮಜಿ ಫೌಂಡೇಷನ್, ಡೆಲ್ ಸೇರಿದಂತೆ ಹಲವಾರು ಕಂಪನಿಗಳು ಶಾಲೆಗಳಿಗೆ ಕಂಪ್ಯೂಟರ್‌ಗಳನ್ನು ನೀಡಿದ್ದಾರೆ. ಆದರೆ, ಅವುಗಳ ಸದುಪಯೋಗ ಸರಿಯಾಗಿ ಆಗುತ್ತಿಲ್ಲ. ಪ್ರಾಥಮಿಕ ಕಂಪ್ಯೂಟರ್ ಜ್ಞಾನದಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲಾಗುತ್ತಿದೆ. ಮಕ್ಕಳಲ್ಲಿ ಕೌಶಲ ಬೆಳೆಸುವುದೇ ಇದರ ಗುರಿಯಾಗಿದೆ ಎಂದು ಹೇಳಲಾಗುತ್ತಿದೆ. ಹಲವಾರು ಗ್ರಾಮೀಣ ಉದ್ಯೋಗಗಳ ಬಗ್ಗೆ ಶಾಲಾ ಹಂತದಲ್ಲಿಯೇ ಕಲಿಸುವ ಪಠ್ಯ ಸೇರ್ಪಡೆ ಮಾಡಲಾಗಿದೆ. ಆದರೆ, ನಿತ್ಯ ಬಳಕೆಗೆ ಬೇಕಾಗಿರುವ ಕಂಪ್ಯೂಟರ್ ಶಿಕ್ಷಣ ನೀಡುವ ಬಗ್ಗೆ ಸರ್ಕಾರ ಗಮನ ಹರಿಸಿಲ್ಲ ಎಂಬ ಅಸಮಾಧಾನ ಶಿಕ್ಷಣ ವಲಯದಲ್ಲಿದೆ.
ಕೆಲವು ಕಡೆಗಳಲ್ಲಿ ಕಂಪ್ಯೂಟರ್‌ಗಳನ್ನಿಡಲು ಕೊಠಡಿಗಳ ಕೊರತೆ ಇದೆ. ಕೆಲ ಉತ್ಸಾಹಿ ಶಿಕ್ಷಕರು ತಾವೂ ಕಲಿತು, ಮಕ್ಕಳಿಗೂ ಕಲಿಸುತ್ತಿದ್ದಾರೆ. ಇನ್ನು ಕೆಲವು ಕಡೆಗಳಲ್ಲಿ ಈಗಿರುವ ಹೊರೆಯನ್ನೇ ನಿಭಾಯಿಸಲು ಹೆಣಗಾಡುತ್ತಿರುವುದರಿಂದ ಕಂಪ್ಯೂಟರ್‌ನ ಹೆಚ್ಚುವರಿ ಹೊರುವ ಗೋಜಿಗೆ ಹೋಗಿಲ್ಲ.
ನಿರ್ವಹಣೆ, ಶಿಕ್ಷಕರ ಕೊರತೆ
ರಾಂಪುರ: ತರಬೇತಿ ಪಡೆದ ಶಿಕ್ಷಕರ ಕೊರತೆ, ನಿರ್ವಹಣೆಯ ವ್ಯವಸ್ಥೆ ಇರದಿರುವುದರಿಂದಾಗಿ ಸರ್ಕಾರಿ ಶಾಲೆಗಳಲ್ಲಿನ ಕಂಪ್ಯೂಟರ್‌ಗಳ ಪ್ರಯೋಜನ ಮಕ್ಕಳಿಗಾಗುತ್ತಿಲ್ಲ.
ಬಾಗಲಕೋಟೆ ತಾಲ್ಲೂಕಿನ ಕೆಲವೇ ಕೆಲವು ಸರಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಉಪಯೋಗ ಮಾಡಿಕೊಂಡಿದ್ದು, ಬಹುತೇಕ ಶಾಲೆಗಳಲ್ಲಿ ಇರುವ ಕಂಪ್ಯೂಟರ್‌ಗಳು ಮೂಲೆ ಸೇರಿವೆ.
ಬಹಳಷ್ಟು ಶಾಲೆಗಳಿಗೆ ಸರ್ಕಾರದಿಂದ ಕಂಪ್ಯೂಟರ್ ಸಿಗದಿದ್ದರೂ, ಬೆಂಗಳೂರಿನ ಇನ್ಫೊಸಿಸ್, ಡೆಲ್ ಕಂಪನಿಯಿಂದ ಕಂಪ್ಯೂಟರ್ ಸಿಕ್ಕಿವೆ. ಆದರೆ, ಮಕ್ಕಳಿಗೆ ಇದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. 10-12 ವರ್ಷಗಳ ಹಿಂದೆ ಬಂದಿರುವ ಕಂಪ್ಯೂಟರ್ ಸರಿಯಾದ ನಿರ್ವಹಣೆಯಿಲ್ಲದ್ದರಿಂದ ದೂಳು ತಿನ್ನುತ್ತಿವೆ.
ಯುವ ಶಿಕ್ಷಕರು ಇರುವ ಶಾಲೆಗಳಲ್ಲಿನ ಕಂಪ್ಯೂಟರ್ ಸ್ಪಲ್ಪಮಟ್ಟಿಗೆ ಉಪಯೋಗವಾಗುತ್ತಿವೆ. ಕಚೇರಿಯ ಕೆಲಸಕ್ಕೆ ಮಾತ್ರ ಒಂದೋ ಅಥವಾ ಎರಡು ಕಂಪ್ಯೂಟರ್ ಬಳಕೆಯಾಗಿದ್ದು, ಉಳಿದವುಗಳು ಬಟ್ಟೆಯಲ್ಲಿ ಬೆಚ್ಚಗೆ ಕುಳಿತಿವೆ.
ಮಕ್ಕಳಿಗೆ ಪಾಠ ಮಾಡುವುದು, ಇಲಾಖೆಗೆ ಮಾಹಿತಿ ಕಳುಹಿಸುವುದೇ ಶಿಕ್ಷಕರಿಗೆ ದೊಡ್ಡ ಕೆಲಸವಾಗಿರುವಾಗ ಕಂಪ್ಯೂಟರ್ ಗೋಜಿಗೆ ಹೋಗುತ್ತಿಲ್ಲ. ಕಂಪ್ಯೂಟರ್ ಕಲಿಸಲು ಇರುವ ಪ್ರತ್ಯೇಕ ಕೊಠಡಿಗಳು ಸದಾ ಬಾಗಿಲು ಮುಚ್ಚಿರುತ್ತವೆ.
10 ವರ್ಷಗಳಿಗಿಂತ ಹಳೆಯದಾದ ಹಾಗೂ ಕೆಟ್ಟಿರುವ ಕಂಪ್ಯೂಟರ್‌ಗಳನ್ನು ಇಲಾಖೆಗೆ ಮರಳಿಸುವಂತೆ ಶಾಲಾ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ. ಉಪಯೋಗಕ್ಕೆ ಬಾರದಿರುವ ಎಲ್ಲ ಕಂಪ್ಯೂಟರ್‌ಗಳನ್ನು ಸಂಗ್ರಹಿಸಿ ಇಲಾಖೆಗೆ ಮಾಹಿತಿ ನೀಡಲಾಗುವುದು ಎಂದು ಬಾಗಲಕೋಟೆ ಕ್ಷೇತ್ರ ಶಿಕ್ಷಣಾಧಿಕಾರಿಸಾವಿತ್ರಿ ಕೊಂಡಗೂಳಿ ತಿಳಿಸಿದರು.
ಮೂಲೆ ಸೇರಿದ ಕಂಪ್ಯೂಟರ್‌ಗಳು
ಹುನಗುಂದ: ಸರ್ಕಾರವು ವಿವಿಧ ಯೋಜನೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ನೀಡುವ ಉದ್ದೇಶದಿಂದ ಕಂಪ್ಯೂಟರ್ ಮತ್ತು ಲ್ಯಾಬ್ ವ್ಯವಸ್ಥೆ ಕಲ್ಪಿಸಿದ್ದರೂ ಸೂಕ್ತ ನಿರ್ವಹಣೆ ಜತಗೆ ವಿಷಯ ಪರಿಣಿತ ಶಿಕ್ಷಕರು ಇಲ್ಲದಿರುವುದರಿಂದ ಕಂಪ್ಯೂಟರ್‌ಗಳು ಶಾಲಾ ಕೊಠಡಿಯ ಮೂಲೆ ಸೇರಿವೆ.
ಸರ್ಕಾರ ಐಸಿಟಿ, ಕ್ಲಾಸ್ ಪ್ರೊಜೆಕ್ಟ್, ಟಾಲ್ಪ ಯೋಜನೆಯ ಮೂರು ಹಂತಗಳಲ್ಲಿ ಶಾಲೆಗಳಿಗೆ ಕಂಪ್ಯೂಟರ್ ಮತ್ತು ಲ್ಯಾಬ್‌ಗಳ ವ್ಯವಸ್ಥೆ ಕಲ್ಪಿಸಿದೆ.
ತಾಲ್ಲೂಕಿನ 32 ಸರ್ಕಾರಿ ಪ್ರೌಢಶಾಲೆಗಳ ಪೈಕಿ ಇಳಕಲ್ಲದ ಬಾಲಕ ಮತ್ತು ಬಾಲಕಿಯರ ಸರ್ಕಾರಿ ಜ್ಯೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗ, ಹುನಗುಂದದ ವಿದ್ಯಾನಗರ, ಮುರುಡಿ, ಕರಡಿ, ಗುಡೂರು ಉರ್ದು ಪ್ರೌಢಶಾಲೆ ಗಳಲ್ಲಿ ಮಾತ್ರ ಟಾಲ್ಪ್ ಯೋಜನೆಯಲ್ಲಿ ತರಬೇತಿ ಪಡೆದ ಶಿಕ್ಷಕರು ಕಂಪ್ಯೂಟರ್ ಶಿಕ್ಷಣ ಬೋಧಿಸುತ್ತಿದ್ದು, ಇನ್ನುಳಿದ ಶಾಲೆಗಳಲ್ಲಿ ಬೋಧನೆ ನಡೆಯುತ್ತಿಲ್ಲ.
ಸರ್ಕಾರ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಕಂಪ್ಯೂಟರ್ ಶಿಕ್ಷಣ ಅನುಷ್ಠಾನಗೊಳಿಸಿದ ಆರಂಭದ ವರ್ಷಗಳಲ್ಲಿ ಕಂಪ್ಯೂಟರ್ ಮತ್ತು ಲ್ಯಾಬ್ ಗಳ ವ್ಯವಸ್ಥೆ ಕಲ್ಪಿಸಿದೆ. ನಂತರದ ವರ್ಷಗಳಲ್ಲಿ ಸರ್ಕಾರದಿಂದ ಯಾವುದೇ ರೀತಿ ಅನುದಾನ ಬಂದಿಲ್ಲ ಎನ್ನುತ್ತಾರೆ ಹುನಗುಂದ ಕ್ಷೇತ್ರ ಸಮನ್ವಯ ಅಧಿಕಾರಿಎಸ್.ವಿ.ಕಾರಿಕಲ್.
ಕಂಪ್ಯೂಟರ್ ಲ್ಯಾಬ್‌ನಲ್ಲಿಯೇ ಪಡಿತರ ಸಂಗ್ರಹ
ಮಹಾಲಿಂಗಪುರ: ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಕೊಠಡಿಗಳ ಕೊರತೆಯಿಂದಾಗಿ ಸುಸಜ್ಜಿತ ಕಂಪ್ಯೂಟರ್ ಲ್ಯಾಬ್ ಪಡಿತರ ಪದಾರ್ಥಗಳನ್ನು ಸಂಗ್ರಹಿಸಿಡಲು ಬಳಕೆಯಾಗುತ್ತಿದೆ.
ಶಾಲೆಯಲ್ಲಿ 600 ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದು, ಕಲಿಕೆಗೆ 6 ಕೊಠಡಿಗಳಿವೆ. ಕಚೇರಿ, ಕಂಪ್ಯೂಟರ್ ಲ್ಯಾಬ್‌ಗೆ ತಲಾ ಒಂದು ಕೊಠಡಿಯಿದ್ದು, ಇತ್ತೀಚೆಗಷ್ಟೇ ಮತ್ತೊಂದು ಕೊಠಡಿ ಉದ್ಘಾಟನೆಗೊಂಡಿದೆ. ಇನ್ನು ಮೂರು ಕೊಠಡಿಗಳು ನಿರ್ಮಾಣ ಹಂತದಲ್ಲಿವೆ.
ಕಂಪ್ಯೂಟರ್ ಲ್ಯಾಬ್‌ನಲ್ಲಿ 21 ಕಂಪ್ಯೂಟರ್‌ಗಳಿವೆ. ಏಜಿನ್ಸಿಯವರು ದುರಸ್ತಿ, ನಿರ್ವಹಣೆ ಮಾಡುತ್ತಿದ್ದಾರೆ. ಆದರೆ, ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಕಂಪ್ಯೂಟರ್ ಶಿಕ್ಷಕರೇ ಇಲ್ಲ. ಇರುವ ಶಿಕ್ಷಕರೇ ವಿದ್ಯಾರ್ಥಿಗಳಿಗೆ ವಾರದಲ್ಲಿ ಮೂರು ದಿನದ ಒಂದು ಅವಧಿಗೆ ಕಂಪ್ಯೂಟರ್ ಬೋಧನೆ ಮಾಡುತ್ತಾರೆ.
ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ಪಡಿತರ ಅಕ್ಕಿ, ಬೇಳೆ ಹೆಚ್ಚಿಗೆ ತರಿಸಬೇಕಾಗಿದ್ದು, ಅವುಗಳನ್ನು ಸಂಗ್ರಹಿಡಲು ಅಡುಗೆ ಕೊಠಡಿ ಸಾಕಾಗದೆ ಈ ಕಂಪ್ಯೂಟರ್ ಲ್ಯಾಬ್‌ನಲ್ಲಿ ಸಂಗ್ರಹಿಸಿಡಲಾಗುತ್ತಿದೆ. ಪಡಿತರ ಖಾಲಿಯಾದಂತೆ ವಿದ್ಯಾರ್ಥಿಗಳಿಗೂ ಕಂಪ್ಯೂಟರ್ ಬಳಕೆ ಮಾಡಲು ಅನುಕೂಲವಾಗುತ್ತದೆ. ಆದರೆ, ಖಾಲಿಯಾಗುತ್ತಿದ್ದಂತೆ ಮತ್ತೆ ಪಡಿತರ ಬರುವುದರಿಂದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಬೋಧನೆ ಸಮರ್ಪಕವಾಗಿಲ್ಲ.ಶಿಕ್ಷಕರ ಮೊಬೈಲ್‌ನಿಂದ ಇಂಟರ್‌ನೆಟ್ ಸಂಪರ್ಕ ಪಡೆದುಕೊಂಡು ಬೋಧಿಸಲಾಗುತ್ತಿದೆ.
2019ರಲ್ಲಿ ಶಾಲೆಗೆ ಮೂರು ಲ್ಯಾಪ್‌ಟಾಪ್ ಬಂದಿದ್ದು, ಈ ಪೈಕಿ ಎರಡು ಕಚೇರಿಯಲ್ಲಿವೆ. ಆದರೆ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ದಾಖಲು ಮಾಡಲೆಂದು ಮುಧೋಳ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯವರು ಒಂದು ಲ್ಯಾಪ್‌ಟಾಪ್ ತೆಗೆದುಕೊಂಡಿದ್ದಾರೆ. ಆದರೆ, ಇನ್ನುವರೆಗೂ ನೀಡಿಲ್ಲ ಎಂದು ಮುಖ್ಯಶಿಕ್ಷಕ ಎಸ್.ಜಿ.ಚಿಪ್ಪಾಡಿ ಹೇಳಿದರು.
ಪ್ರಜಾವಾಣಿ ತಂಡ: ಬಸವರಾಜ ಹವಾಲ್ದಾರ, ಪ್ರಕಾಶ ಬಾಳಕ್ಕನವರ, ಮಹೇಶ ಬೋಳಿಶೆಟ್ಟಿ,ಮಹೇಶ ಮನ್ನಯ್ಯನವರಮಠ, ಸಂಗಮೇಶ ಹೂಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.