ADVERTISEMENT

ಹುನಗುಂದ: ₹5.53 ಲಕ್ಷ ಹಣ ಕಿತ್ತು ಪರಾರಿಯಾದ ಕಳ್ಳರು

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2023, 14:32 IST
Last Updated 9 ಆಗಸ್ಟ್ 2023, 14:32 IST
ಹುನಗುಂದ ತಾಲ್ಲೂಕಿನ ಕೂಡಲಸಂಗಮ ಕಳಸದ ಮಾರ್ಗದಲ್ಲಿ ಕಳವು ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು
ಹುನಗುಂದ ತಾಲ್ಲೂಕಿನ ಕೂಡಲಸಂಗಮ ಕಳಸದ ಮಾರ್ಗದಲ್ಲಿ ಕಳವು ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು   

ಹುನಗುಂದ: ಬೈಕ್‌ಗಳಲ್ಲಿ ಬಂದ ನಾಲ್ವರು ಕಳ್ಳರು ಕ್ಯಾಂಟರ್ ವಾಹನವನ್ನು ಅಡ್ಡಗಟ್ಟಿ ಚಾಲಕನ್ನು ಬೆದರಿಸಿ ಗಾಡಿಯಲ್ಲಿ ಕುಳಿತಿದ್ದ ಇನ್ನೊಬ್ಬ ವ್ಯಕ್ತಿ ಹತ್ತಿರವಿದ್ದ ₹ 5.53 ಲಕ್ಷ ಹಣವಿದ್ದ ಬ್ಯಾಗ್ ಅನ್ನು ಕಿತ್ತುಕೊಂಡು ಪರಾರಿಯಾದ ಘಟನೆ ತಾಲ್ಲೂಕಿನ ಕೂಡಲಸಂಗಮ ಕಳಸದ ಮಾರ್ಗದಲ್ಲಿ ಮಂಗಳವಾರ ಸಂಜೆ ನಡೆದಿದೆ.

ತಾಲ್ಲೂಕಿನ ಧನ್ನೂರು ಗ್ರಾಮದ ಕಿರಾಣಿ ಅಂಗಡಿ ಮಾಲೀಕ ಬಸವರಾಜ ಹುದ್ದಾರ ಹಣ ಕಳೆದುಕೊಂಡ ವ್ಯಕ್ತಿ. ಇವರು ಪ್ರತಿ ಬಾರಿ ತಾಲ್ಲೂಕಿನ ಮರೋಳ ಗ್ರಾಮದ ಕ್ಯಾಂಟರ್ ವಾಹನವನ್ನು ತೆಗೆದುಕೊಂಡು ವಿಜಯಪುರಕ್ಕೆ ಹೋಗಿ ಕಿರಾಣಿ ಸಾಮಾನು ಖರೀದಿಸಿ ತರುತ್ತಿದ್ದರು.

ಕಳಸದ ಮಾರ್ಗದ ಮೂಲಕ ವಿಜಯಪುರಕ್ಕೆ ಹೋಗುತ್ತಿದ್ದ ಕ್ಯಾಂಟರ್ ವಾಹನವನ್ನು ಎರಡು ಪಲ್ಸರ್ ಬೈಕ್‌ಗಳಲ್ಲಿ ನಾಲ್ವರು ಕಳ್ಳರು ಹಿಂಬಾಲಿಸಿದ್ದರು. ಕ್ಯಾಂಟರ್ ವಾಹನ ನಿಲ್ಲಿಸಿ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ವಾಹನದಿಂದ ಕೆಳಗಿಳಿಸಿದರು. ಅವರಲ್ಲೊಬ್ಬ ಚಾಲಕನ ಕಣ್ಣಿಗೆ ಖಾರದ ಪುಡಿ ಎರಚಿ ಕ್ಯಾಂಟರ್ ವಾಹನದ ಹಿಂಬದಿಗೆ ಕರೆದುಕೊಂಡು ಹೋದ. ಉಳಿದ ಮೂರು ಕಳ್ಳರು ಗಾಡಿಯಲ್ಲಿ ಕುಳಿತಿದ್ದ ಕಿರಾಣಿ ಅಂಗಡಿ ಮಾಲೀಕ ಬಸವರಾಜ ಹುದ್ದಾರ ಅವರಿಗೆ ಮಾರಾಕಾಸ್ತ್ರ ತೋರಿಸಿ ಕೆಳಗೆ ಇಳಿಸಿ ಕಣ್ಣಿಗೆ ಖಾರದ ಪುಡಿ ಎರಚಿ ₹ 5,53,300 ನಗದು ಇದ್ದ ಬ್ಯಾಗ್‌ ಅನ್ನು ಕಿತ್ತುಕೊಂಡು ರಾಷ್ಟ್ರೀಯ ಹೆದ್ದಾರಿ ಕಡೆ ಪರಾರಿಯಾಗಿದ್ದಾರೆ.

ADVERTISEMENT

ಹೆಚ್ಚುವರಿ ಪೋಲಿಸ್ ಅಧೀಕ್ಷಕ ಪ್ರಸನ್ನ ದೇಸಾಯಿ, ಡಿಎಸ್‌ಪಿ ಮಪ್ರಭುಗೌಡ ಕಿರೇದಳ್ಳಿ, ಸಿಪಿಐ ಸುರೇಶ ಬೆಂಡಗುಂಬಳ, ಪಿಎಸ್ಐ ಚನ್ನಯ್ಯ ದೇವೂರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.