ಬಾಗಲಕೋಟೆ: ಜಿಲ್ಲೆಯಲ್ಲಿ ತಿಂಗಳ ಅವಧಿಯಲ್ಲಿ ಸೈಬರ್ ವಂಚಕರು ಮೂವರನ್ನು ತಮ್ಮ ಬಲೆಗೆ ಬೀಳಿಸಿಕೊಂಡು, ಅವರಿಗೆ ₹1.26 ಕೋಟಿ ವಂಚನೆ ಮಾಡಿದ್ದಾರೆ. ಪ್ರಕರಣಗಳ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ಜಾಗೃತಿ ಮೂಡಿಸುತ್ತಿದ್ದರೂ, ಶೀಘ್ರ ಹಣ ಮಾಡುವ ದುರಾಸೆಗೆ ವಾರದಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ.
ನಗರದ ವ್ಯಾಪಾರಿಯೊಬ್ಬರ ಟೆಲಿಗ್ರಾಂಗೆ ಲಿಂಕ್ ಕಳುಹಿಸಿ, ಹೋಟೆಲ್‌ಗಳಿಗೆ ರೇಟಿಂಗ್ ನೀಡಿದರೆ ಕಮಿಷನ್ ನೀಡುವುದಾಗಿ ಆಮಿಷ ಒಡ್ಡಿದ್ದಾರೆ. ಆರಂಭದಲ್ಲಿ ಅವರ ರೇಟಿಂಗ್ ನೀಡಿದ್ದಕ್ಕೆ ವಿವಿಧ ಹಂತಗಳಲ್ಲಿ ₹84,645 ಜಮಾ ಮಾಡಿದ್ದಾರೆ. ನಂತರ ಹೆಚ್ಚಿನ ನೀಡುವ ಆಮಿಷವೊಡ್ಡಿ ಹತ್ತು ದಿನಗಳಲ್ಲಿ ₹42.35 ಲಕ್ಷ ಪಾವತಿಸಿಕೊಂಡು, ಮರಳಿ ಹಣ ಪಾವತಿಸಿಲ್ಲ.
ಖಾಸಗಿ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞೆ ಮಹಿಳಾ ವೈದ್ಯರೊಬ್ಬರಿಗೂ ಟೆಲಿಗ್ರಾಂ ಮೂಲಕ ಚಾಟ್ ಮಾಡಿ ಮಿಂಟ್ ಎಂಬ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ, ಹೆಚ್ಚಿನ ಕಮಿಷನ್ ನೀಡುವುದಾಗಿ ಭರವಸೆ ನೀಡಿದ್ದಾರೆ. ಆರಂಭದಲ್ಲಿ ₹3,400 ಹಣವನ್ನು ವೈದ್ಯರ ಖಾತೆಗೆ ಜಮಾ ಮಾಡಿದ್ದಾರೆ. ನಂತರ ಐದೇ ದಿನಗಳಲ್ಲಿ ₹53.67 ಲಕ್ಷ ವಂಚಿಸಿದ್ದಾರೆ.
ಮುಧೋಳದ ನಿವೃತ್ತ ಬ್ಯಾಂಕ್ ಉದ್ಯೋಗಿಯೊಬ್ಬರಿಗೆ ಟೆಲಿಗ್ರಾಂ ಮೂಲಕ ಚಾಟ್ ಆರಂಭಿಸಿ ಸ್ನೇಹ ಬೆಳೆಸಿಕೊಂಡಿದ್ದಾರೆ. ನಂತರ ರೆಸ್ಟೋರೆಂಟ್‌ಗಳಿಗೆ ರೇಟಿಂಗ್ ನೀಡಿದರೆ, ಕಮಿಷನ್ ನೀಡುತ್ತೇವೆ ಎಂದಿದ್ದಾರೆ.
ರೇಟಿಂಗ್ ನೀಡಿದ ಮೇಲೆ ಹಂತ, ಹಂತವಾಗಿ 4,230 ಪಾವತಿಸಿದ್ದಾರೆ. ನಂಬಿಕೆ ಗಳಿಸಿದ ಮೇಲೆ ಕ್ವಾಯಿನ್ ಡಿಸಿಎಕ್ಸ್‌ನಲ್ಲಿ ಹಣ ಹೂಡಿಕೆ ಮಾಡಿದರೆ, ಶೇ 30ರಷ್ಟು ಕಮಿಷನ್ ನೀಡುವುದಾಗಿ ನಂಬಿಸಿದ್ದಾರೆ. 23 ದಿನಗಳ ಅವಧಿಯಲ್ಲಿ ವಿವಿಧ ಖಾತೆಗಳಿಗೆ ₹30.03 ಜಮಾ ಮಾಡಿಸಿಕೊಂಡು, ಮರಳಿ ಪಾವತಿಸದೇ ವಂಚನೆ ಮಾಡಿದ್ದಾರೆ.
ಟೆಲಿಗ್ರಾಂ ಮೂಲಕ ಚಾಟಿಂಗ್ ಆರಂಭಿಸುವ ವಂಚಕರು ಸಾವಿರಾರು ರೂಪಾಯಿಯನ್ನು ಕಮಿಷನ್ ರೂಪದಲ್ಲಿ ನೀಡಿದಂತೆ ಮಾಡಿ, ಲಕ್ಷಾಂತರ ರೂಪಾಯಿ ಪಾವತಿಸಿ ಮಾಡಿಸಿಕೊಳ್ಳುತ್ತಿದ್ದಾರೆ.
ಒಂದಷ್ಟು ಹಣ ಹಾಕಿದ ಮೇಲೆ ತಮ್ಮ ಬಳಿ ಹಣವಿಲ್ಲ ಎಂದು ದೂರುದಾರರು ಹೇಳಿದರೂ, ವಂಚಕರು ಹೆಚ್ಚಿನ ಆಮಿಷ ತೋರಿಸುತ್ತಾರೆ. ಆಗ ದೂರುದಾರರು ಸಾಲ ಮಾಡಿ ತಂದು ಹಣ ಪಾವತಿಸಿದ್ದಾರೆ. ಕೊನೆಗೆ ಕಮಿಷನ್ ಹೋಗಲಿ, ಸಾಲಗಾರರು ಆಗುತ್ತಿದ್ದಾರೆ. ಜೀವನ ಪೂರ್ತಿ ದುಡಿದ ಹಣವನ್ನೆಲ್ಲ ವಾರದಲ್ಲಿಯೇ ಕಳೆದುಕೊಳ್ಳುತ್ತಿದ್ದಾರೆ.
ಸೈಬರ್ ವಂಚಕರ ಬಗ್ಗೆ ಪೊಲೀಸ್ ಇಲಾಖೆಯಿಂದ ಜಾಗೃತಿ ಮೂಡಿಸಿಕೊಂಡೇ ಬರಲಾಗುತ್ತಿದೆ. ಅಪರಿಚಿತರ ಆಸಕ್ತಿಕರ ಸಂದೇಶಗಳಿಗೆ ಪ್ರತಿಕ್ರಿಯಿಸಿ ಕಷ್ಟಪಟ್ಟು ದುಡಿದ ಹಣ ಕಳೆದುಕೊಳ್ಳಬೇಡಿಅಮರನಾಥ ರೆಡ್ಡಿ ಜಿಲ್ಲಾ ಪೊಲೀಸ್ ವರಿಷ್ಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.