ADVERTISEMENT

ಮಧ್ಯಾಹ್ನವರೆಗೆ ಕಚೇರಿಯಲ್ಲಿರಲು ಡಿ.ಸಿ ಸೂಚನೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 14:58 IST
Last Updated 3 ಜುಲೈ 2024, 14:58 IST
ಕೆ.ಎಂ. ಜಾನಕಿ
ಕೆ.ಎಂ. ಜಾನಕಿ   

ಬಾಗಲಕೋಟೆ: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಚೇರಿ ಸಮಯದಲ್ಲಿ ಪೌರಾಯುಕ್ತ, ಮುಖ್ಯಾಧಿಕಾರಿ ಲಭ್ಯವಿರುವುದಿಲ್ಲ ಎಂದು ಸಾರ್ವಜನಿಕರಿಂದ ದೂರು ಬಂದಿರುವ ಹಿನ್ನಲೆಯಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30ರವರೆಗೆ ಲಭ್ಯರಿರಬೇಕು ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಸೂಚಿಸಿದ್ದಾರೆ.

ಈ ಕುರಿತು ಸುತ್ತೋಲೆ ಹೊರಡಿಸಿರುವ ಅವರು, ಬೆಳಿಗ್ಗೆ ಸಮಯದಲ್ಲಿ ವಾರ್ಡ್‌ಗಳಿಗೆ ಸ್ವಚ್ಛ ಕಾರ್ಯದ ಪರಿವೀಕ್ಷಣೆಯ ನಂತರ ಮಧ್ಯಾಹ್ನದವರೆಗೆ ಸಾರ್ವಜನಿಕರಿಗೆ ಕಚೇರಿಯಲ್ಲಿ ಲಭ್ಯವಿರಬೇಕು ಎಂದಿದ್ದಾರೆ.

ಸಾರ್ವಜನಿಕರು ನೀಡಿದ ಕುಂದು ಕೊರತೆಗಳನ್ನು ಆಲಿಸಿ ಸ್ಥಳದಲ್ಲಿಯೇ ಇತ್ಯರ್ಥ ಪಡಿಸಬೇಕು. ಊಟದ ಸಮಯದ ನಂತರ ಸ್ಥಾನಿಕ ಭೇಟಿ, ಚೌಕಾಸಿ ಇದ್ದ ಪ್ರಕರಣಗಳಲ್ಲಿ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

ADVERTISEMENT

ಮೇಲಧಿಕಾರಿಗಳ ಸಭೆ, ನ್ಯಾಯಾಲಯದ ಪ್ರಕರಣಗಳಿಗೆ ಹಾಜರಾಗಬೇಕಾದಲ್ಲಿ ಪೂರ್ವಭಾವಿಯಾಗಿ ಅನುಮತಿ ಪಡೆಯಬೇಕು. ಸ್ಥಳೀಯವಾಗಿ ನೀವು ಲಭ್ಯ ಇರದಿದ್ದ ಸಮಯದಲ್ಲಿ ಈ ವಿಷಯವನ್ನು ನಿಮ್ಮ ಕಾರ್ಯಾಲಯದ ಸೂಚನಾ ಫಲಕದ ಮೇಲೆ ಕಾರಣದೊಂದಿಗೆ ಪ್ರಕಟಿಸಬೇಕು. ಸಕಾರಣ ಇಲ್ಲದೇ, ಪೂರ್ವಾನುಮತಿ ಇಲ್ಲದೇ ಕೇಂದ್ರ ಸ್ಥಾನದಲ್ಲಿ ಲಭ್ಯವಿರದಿದ್ದರೆ, ಗಂಭೀರವಾಗಿ ಪರಿಗಣಿಸಲಾಗುವುದು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.