ಬಾಗಲಕೋಟೆ: ‘ಪ್ರತಿಯೊಂದು ಸಭೆಯಲ್ಲಿ ವಿವಿಧ ಯೋಜನೆಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕು’ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಪ್ರತಿಯೊಂದು ಯೋಜನೆಗಳಿಗೆ ಬಿಡುಗಡೆಯಾದ ಅನುದಾನ, ಖರ್ಚು ಮತ್ತು ಬಾಕಿ ಉಳಿದ ಅನುದಾನ ಎಷ್ಟು, ಸದ್ಯದ ಪರಿಸ್ಥಿತಿ ಬಗ್ಗೆ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕು. ಈ ಬಗ್ಗೆ ಮುಂಚಿತವಾಗಿಯೇ ಇಲಾಖೆಯಲ್ಲಿ ಸಭೆ ಮಾಡಿಕೊಂಡು ತಯಾರಿಯಲ್ಲಿ ಬರಬೇಕು’ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸದಾಶಿವ ಬಡಿಗೇರ ಅವರಿಗೆ ಸೂಚಿಸಿದರು.
‘ಬಿಡುಗಡೆಯಾದ ಅನುದಾನವನ್ನು ಸಂಪೂರ್ಣ ವಿನಿಯೋಗಿಸಬೇಕು. ಪ್ರಗತಿಯಲ್ಲಿ ವಿಳಂಬಕ್ಕೆ ಅವಕಾಶ ನೀಡಬಾರದು. ನಿಮಗೆ ನೀಡಿರುವ ಗುರಿಗೆ ಅನುಗುಣವಾಗಿ ಕೆಲಸ ಆಗಬೇಕು’ ಎಂದರು.
ಅನುಮತಿ ಪಡೆಯದೇ ಸಭೆಗೆ ಗೈರು ಹಾಜರಾದ ಶಿಕ್ಷಣ, ಸಹಾಕಾರ ಇಲಾಖೆ, ಪ್ರವಾಸೋದ್ಯಮ, ಮೀನುಗಾರಿಕೆ, ಆರೋಗ್ಯ ಹಾಗೂ ಕೈಗಾರಿಕೆ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಸೂಚಿಸಿದರು.
ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು. ಸಮಗ್ರ ಕೃಷಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕು. ಈ ಯೋಜನೆಯಿಂದ ಲಾಭ ಪಡೆದುಕೊಂಡವರ ಬಳಿ ಇತರೆ ರೈತರನ್ನು ಕರೆದುಕೊಂಡು ಹೋಗಿ ತೋರಿಸಬೇಕು ಎಂದರು.
ವಿಷೇಶ ಘಟಕ ಯೋಜನೆಯಡಿ ನಿಗದಿ ಪಡಿಸಿದ ₹119.34 ಕೋಟಿ ಪೈಕಿ ₹32.65 ಕೋಟಿ ಬಿಡುಗಡೆಯಾಗಿದ್ದು, ₹22.77 ಕೋಟಿ ಖರ್ಚು ಮಾಡುವ ಮೂಲಕ ಆರ್ಥಿಕ ಶೇ69.73ರಷ್ಟು, ಭೌತಿಕ ಶೇ71.72ರಷ್ಟು ಪ್ರಗತಿ ಸಾಧಿಸಲಾಗಿದೆ. ಗಿರಿಜನ ಉಪಯೋಜನೆಯಡಿ ನಿಗದಿಪಡಿಸಿದ ₹21.90 ಕೋಟಿ ಪೈಕಿ ₹5.60 ಕೋಟಿ ಬಿಡುಗಡೆಯಾಗಿದೆ. ₹2.62 ಕೋಟಿ ಖರ್ಚು ಮಾಡುವ ಮೂಲಕ ಆರ್ಥಿಕ ಶೇ46 ಮತ್ತು ಭೌತಿಕ ಶೇ70 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸದಾಶಿವ ಬಡಿಗೇರ ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಕೃಷಿ ಇಲಾಖೆಯ ಉಪನಿರ್ದೇಶಕ ರೂಢಗಿ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರವೀಂದ್ರ ಹಕಾಟೆ, ಲೋಕೋಪಯೋಗಿ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್ ರಾಜಶೇಖರ ಕಡಿವಾಲರ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ಅಧಿಕಾರಿ ರಮೇಶ ಚವ್ಹಾಣ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.