ADVERTISEMENT

ಹುನಗುಂದ | ಮಳೆ ಕೊರತೆ: ತೊಗರಿ ಇಳುವರಿ ಕುಂಠಿತ ಭೀತಿ

ಹುನಗುಂದ, ಇಳಕಲ್ ಭಾಗದ ಜಮೀನಿನಲ್ಲಿ ತೇವಾಂಶ ಕಡಿಮೆ, ಬಾಡುತ್ತಿರುವ ಬೆಳೆ

ಸಂಗಮೇಶ ಹೂಗಾರ
Published 20 ಸೆಪ್ಟೆಂಬರ್ 2024, 5:32 IST
Last Updated 20 ಸೆಪ್ಟೆಂಬರ್ 2024, 5:32 IST
ಮಳೆ ಕೊರತೆಯಿಂದಾಗಿ ಹುನಗುಂದ ತಾಲ್ಲೂಕಿನ ಮರೋಳ ಗ್ರಾಮದ ಜಮೀನಿನಲ್ಲಿ ತೊಗರಿ ಬೆಳೆ ಬಾಡಿರುವುದು
ಮಳೆ ಕೊರತೆಯಿಂದಾಗಿ ಹುನಗುಂದ ತಾಲ್ಲೂಕಿನ ಮರೋಳ ಗ್ರಾಮದ ಜಮೀನಿನಲ್ಲಿ ತೊಗರಿ ಬೆಳೆ ಬಾಡಿರುವುದು   

ಹುನಗುಂದ: ಹುನಗುಂದ ಮತ್ತು ಇಳಕಲ್ ತಾಲ್ಲೂಕಿನಾದ್ಯಂತ ಮಳೆ ಕೊರತೆಯಿಂದ ತೊಗರಿ ಇಳುವರಿ ಕುಂಠಿತಗೊಳ್ಳುವ ಭೀತಿ ರೈತರನ್ನು ಕಾಡುತ್ತಿದೆ.

ಕಳೆದ ಹದಿನೈದು ದಿನಗಳಿಂದ ಇಳಕಲ್ ಮತ್ತು ಹುನಗುಂದ ತಾಲ್ಲೂಕುಗಳಲ್ಲಿ ಮಳೆ ಸುರಿದಿಲ್ಲ. ಹೀಗಾಗಿ ಭೂಮಿಯಲ್ಲಿ ತೇವಾಂಶ ಕಡಿಮೆಯಾಗಿ ಎರೆಬಿಡಿ (ಬಿರುಕುಗಳು) ಕಾಣತೊಡಗಿವೆ. ಇದು ರೈತರನ್ನು ಮತ್ತಷ್ಟು ಚಿಂತಗೀಡು ಮಾಡಿದೆ.

ಮುಂಗಾರು ಪೂರ್ವ ಮತ್ತು ಮುಂಗಾರು ಮಳೆ ಉತ್ತಮವಾಗಿ ಸುರಿದ ಪರಿಣಾಮ ಜೊತಗೆ ತೊಗರಿ ಬಿತ್ತನೆಗೆ ಪೂರಕ ವಾತಾವರಣದಿಂದಾಗಿ ಎರಡು ತಾಲ್ಲೂಕಿನ ರೈತರು ಹೆಚ್ಚಿನ ಪ್ರಮಾಣದ ತೊಗರಿ ಬಿತ್ತನೆ ಮಾಡಿದ್ದಾರೆ.

ADVERTISEMENT

ಬಿತ್ತನೆ ಹೆಚ್ಚಳ:

ಇದೇ ಮೊದಲ ಬಾರಿಗೆ ಹುನಗುಂದ ತಾಲ್ಲೂಕಿನಲ್ಲಿ 16,685 ಹೆಕ್ಟೇರ್ ಮತ್ತು ಇಳಕಲ್ ತಾಲ್ಲೂಕಿನಲ್ಲಿ 17,636 ಹೆಕ್ಟೇರ್ ಸೇರಿದಂತೆ ಒಟ್ಟು 34,321 ಹಕ್ಟೇರ್ ಪ್ರದೇಶದಲ್ಲಿ ದಾಖಲೆ ಪ್ರಮಾಣದಲ್ಲಿ ತೊಗರಿ ಬಿತ್ತನೆ ಮಾಡಲಾಗಿದೆ. ಹೆಚ್ಚಿಗೆ ತೊಗರಿ ಬಿತ್ತನೆಗೆ ಪ್ರಮುಖ ಕಾರಣ ಕಳೆದ ವರ್ಷ ತೊಗರಿಗೆ ಬಂಪರ್ (ಕ್ವಿಂಟಲ್ ತೊಗರಿ 12 ಸಾವಿರ (ಆಸುಪಾಸು) ಬೆಲೆ ದೊರೆಕಿತ್ತು. ಹೀಗಾಗಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡಲಾಗಿದೆ.

ತೊಗರಿ ಬಿತ್ತನೆ ಮಾಡಿ ಅಂದಾಜು 90 ರಿಂದ 120 ದಿನ ಕಳೆದಿವೆ. ಬಿತ್ತನೆ ಮಾಡಿದ ಆರಂಭದಿಂದ ಉತ್ತಮ ಮಳೆ ಆಗಿ ಸಮೃದ್ಧವಾಗಿ ಬೆಳೆದಿದ್ದ ತೊಗರಿ ಬೆಳೆಗೆ ಈಗ ಮಳೆಯಿಲ್ಲದ್ದರಿಂದ ತೇವಾಂಶ ಕೊರತೆ ಆಗಿದೆ. ಸೆಪ್ಪೆಂಬರ್  ಆರಂಭದಿಂದ ಇಲ್ಲಿಯ ವರೆಗೂ ಮಳೆ ಸುರಿದಿಲ್ಲ. ಬಿಸಿಲಿನ ತಾಪ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಗಿಡಗಳ ಎಲೆಗಳು ಹಳದಿ ಬಣ್ಣದ ರೋಗದಿಂದ ಕೂಡಿದ್ದು, ಗಿಡಗಳ ಕೆಳಗಡೆ ಎಲೆಗಳು ಬಿದ್ದಿವೆ.

ತೇವಾಂಶ ಕೊರತೆಯಿಂದ ತಿಮ್ಮಾಪೂರ ಗ್ರಾಮದ ಜಮೀನಿನಲ್ಲಿ ತೊಗರಿ ಬೆಳೆ ಎರೆಬಿಡಿ (ಬಿರುಕು) ಬಿಟ್ಟಿರುವುದು

ಹೂವು ಬಿಡುವ ಹಂತ:

ತೊಗರಿ ಬಿತ್ತನೆ ಮಾಡಿದ 100 ರಿಂದ 110 ದಿನಕ್ಕೆ ಗಿಡಗಳಲ್ಲಿ ಮೊಗ್ಗು, ಹೂಬವು ಕಾಣಿಸಿಕೊಳ್ಳಬೇಕಿತ್ತು. ಆದರೆ ಮಳೆ ಕೊರತೆಯಿಂದಾಗಿ ತೊಗರಿ ಗಿಡಗಳಲ್ಲಿ ಮೊಗ್ಗು ಮತ್ತು ಹೂವುಗಳು ಸಹ ಕಾಣುತ್ತಿಲ್ಲ. ರೈತರು ಆಕಾಶದತ್ತ ಮುಖ ಮಾಡುವಂತಾಗಿದೆ.

ಕಳೆದ ವರ್ಷ ಬರಗಾಲದಿಂದ ರೈತರು ಸಂಕಷ್ಟದಲ್ಲಿದ್ದರು. ಈ ಬಾರಿ ಉತ್ತಮ ಬೆಳೆ ಬರಬಹುದು ಎಂದು ಸಾಲ ಮಾಡಿ ಬಿತ್ತನೆ ಮಾಡಿದ್ದರು. ಆದರೆ, ಮಳೆ ಕೊರತೆಯಿಂದಾಗಿ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ಧಾರೆ.

ಹುನಗುಂದ: ತೇವಾಂಶ ಕೊರತೆಯಿಂದ ತಾಲ್ಲೂಕಿನ ತಿಮ್ಮಾಪೂರ ಗ್ರಾಮದ ರೈತರೊಬ್ಬರ ತೊಗರಿ ಹೊಲದ ಎರೆಬಿಡಿ (ಬಿರುಕು) ಬಿಟ್ಟಿರುವುದು
ನಾಲ್ಕು ಎಕರೆಯಲ್ಲಿ ತೊಗರಿ ಬಿತ್ತನೆ ಮಾಡಲಾಗಿದೆ. ಬೆಳೆ ಸಮೃದ್ಧವಾಗಿತ್ತು. ಆದರೆ, ಮಳೆ ಕೊರತೆಯಿಂದಾಗಿ ಎಲೆಗಳು ಉದುರುತ್ತಿದ್ದು, ಏನು ಮಾಡಬೇಕು ಎಂಬುದು ತಿಳಿಯದಾಗಿದೆ
ಮಹಾಂತೇಶ ಪಾಟೀಲ, ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.