ಮಹಾಲಿಂಗಪುರ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಗ್ರಾಮ ಲೆಕ್ಕಾಧಿಕಾರಿಗಳ ಕಾರ್ಯಾಲಯಗಳಲ್ಲಿ ಪಹಣಿ (ಉತಾರ್)ಗೆ ಆಧಾರ್ ಜೋಡಣೆ ಕಾರ್ಯ ನಡೆಯುತ್ತಿದೆ. ಆದರೆ ಅದು ವಿಳಂಬವಾಗುತ್ತಿರುವ ಪರಿಣಾಮ ರೈತರು ಪರದಾಡುತ್ತಿದ್ದಾರೆ.
ಕಂದಾಯ ಇಲಾಖೆಯು ‘ನನ್ನ ಆಧಾರನೊಂದಿಗೆ ನನ್ನ ಆಸ್ತಿ ಸುಭದ್ರ’ ಯೋಜನೆ ಆರಂಭಿಸಿದ್ದು, ಯೋಜನೆಯನ್ವಯ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನಗಳನ್ನು ನೇರವಾಗಿ ಪಡೆಯಲು ಪಹಣಿಗೆ ಆಧಾರ್ ಜೋಡಣೆ ಕಡ್ಡಾಯವಾಗಿ ಮಾಡಬೇಕೆಂದು ಆದೇಶ ಹೊರಡಿಸಿದೆ. ಆದ್ದರಿಂದ ರೈತರು ಪಹಣಿಗೆ ಆಧಾರ್ ಕಾರ್ಡ್ ಜೋಡಣೆ ಮಾಡಲು ಮುಂದಾಗಿದ್ದಾರೆ.
ಪಹಣಿಗೆ ಆಧಾರ್ ಜೋಡಿಸಬೇಕಾದರೆ ಬಳಕೆಯಲ್ಲಿರುವ ಮೊಬೈಲ್ ಸಂಖ್ಯೆ ಆಧಾರ್‌ಗೆ ಜೋಡಣೆಯಾಗಿರಬೇಕು. ಪ್ರಕ್ರಿಯೆಯಲ್ಲಿ ಎರಡು ಪ್ರತ್ಯೇಕ ಒಟಿಪಿ ಬರುತ್ತವೆ. ಸ್ಥಳದಲ್ಲಿಯೇ ರೈತರ ನೈಜ ಚಿತ್ರ ಅಪ್‌ಲೋಡ್ ಮಾಡುವ ಮೂಲಕ ಆಧಾರ್ ಜೋಡಣೆ ಪ್ರಕ್ರಿಯೆ ನಡೆಯುತ್ತದೆ. ಒಟಿಪಿ ವಿಳಂಬ, ಆಧಾರ್ ಕಾರ್ಡ್‌ಗೆ ಮೊಬೈಲ್ ಸಂಖ್ಯೆ ಜೋಡಣೆ ಆಗದಿರುವುದು ಮತ್ತಿತ್ತರ ಸಮಸ್ಯೆಗಳಿಂದ ಇಡೀ ಪ್ರಕ್ರಿಯೆ ವಿಳಂಬವಾಗುತ್ತಿದೆ.
ಬರ ಪರಿಹಾರ ಬ್ಯಾಂಕ್ ಖಾತೆಗೆ ಜಮಾ ಆಗದಿರುವ ಮತ್ತಿತ್ತರ ಕಾರಣಗಳಿಂದ ಪಹಣಿಗೆ ಆಧಾರ್ ಜೋಡಣೆಗೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಆದರೆ, ಪ್ರಕ್ರಿಯೆ ವಿಳಂಬವಾಗುತ್ತಿದ್ದು ರೈತರು ಕೆಲಸ ಬಿಟ್ಟು ಕಾಯುತ್ತಾ ನಿಲ್ಲುವಂತಾಗಿದೆ.
ಆನ್‌ಲೈನ್ ಕೇಂದ್ರಗಳ ಮೂಲಕ ದಾಖಲಿಸಲು ಸೌಲಭ್ಯ ಇದ್ದರೂ ಆಧಾರ್‌ನಲ್ಲಿರುವ ಹೆಸರು ಹಾಗೂ ಪಹಣಿಯಲ್ಲಿರುವ ಹೆಸರಿಗೆ ವ್ಯತ್ಯಾಸ ಇದ್ದರೆ ಜೋಡಣೆಯಾಗುತ್ತಿಲ್ಲ. ಆದರೆ, ಗ್ರಾಮ ಲೆಕ್ಕಾಧಿಕಾರಿಗಳ ಕಾರ್ಯಾಲಯದಲ್ಲಿ ಜೋಡಣೆ ಆಗುತ್ತಿದೆ. ಕೆಲ ಗ್ರಾಮಗಳಲ್ಲಿ ನೆಟ್‌ವರ್ಕ್ ಸಮಸ್ಯೆಯೂ ಕಾಡುತ್ತಿದೆ. ಅಲ್ಲದೆ, ಕೆಲ ರೈತರ ಮೊಬೈಲ್ ಸಂಖ್ಯೆ ಚಾಲ್ತಿಯಲ್ಲಿ ಇಲ್ಲದಿರುವುದು ಸಹ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೂ ಮೊದಲೇ ಈ ಪಕ್ರಿಯೆ ಚಾಲನೆಯಲ್ಲಿದೆ. ಆದರೆ, ಕಾರ್ಯಾಲಯದ ಸಿಬ್ಬಂದಿ ಚುನಾವಣೆ ಕಾರ್ಯದಲ್ಲಿ ತೊಡಗಿದ್ದರಿಂದ ಪ್ರಕ್ರಿಯೆ ಅಷ್ಟೆನೋ ಚುರುಕಾಗಿರಲಿಲ್ಲ. ಈಗ ಚುನಾವಣೆ ಮುಗಿದಿದ್ದರಿಂದ ಈ ಕಾರ್ಯ ಮತ್ತೆ ಆರಂಭವಾಗಿದೆ.
ಒಬ್ಬ ರೈತ ಬೇರೆ ಬೇರೆ ಸರ್ವೆ ಸಂಖ್ಯೆಯ ಭೂಮಿ ಹೊಂದಿದ್ದರೆ ಆಧಾರ್ ಜೋಡಣೆಯಿಂದ ಒಂದೇ ದಾಖಲೆಯಲ್ಲಿ ಎಲ್ಲ ಮಾಹಿತಿ ಸಿಗಲಿದೆ. ಭೂ ವಂಚನೆಗಳೂ ತಪ್ಪುತ್ತವೆ. ಪ್ರಕ್ರಿಯೆಯಲ್ಲಿ ಒಟಿಪಿ ಸಮಸ್ಯೆ ಸರಿಯಾದರೆ ಯಾವುದೇ ಸಮಸ್ಯೆ ಇರುವುದಿಲ್ಲ.–ಎಂ.ಎಸ್.ನೀಲನ್ನವರ ಪ್ರಭಾರಿ ಗ್ರಾಮ ಆಡಳಿತಾಧಿಕಾರಿ ಮಹಾಲಿಂಗಪುರ
ಕೃಷಿ ಕೆಲಸ ಬಿಟ್ಟು ಇಲ್ಲಿಗೆ ಬಂದಿದ್ದೇನೆ. ಒಟಿಪಿ ಬರುತ್ತಿಲ್ಲ ಬಂದರೂ ಸರಿಯಾಗಿ ಜೋಡಣೆಯೂ ಆಗುತ್ತಿಲ್ಲ. ಕಾದು ಕಾದು ಸಾಕಾಗಿದೆ.–ಲಕ್ಷ್ಮಣ ರಾಮಪ್ಪ ಹವಾಲ್ದಾರ ರೈತ ಢವಲೇಶ್ವರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.