ADVERTISEMENT

ಬಾದಾಮಿ | ನವಿಲುತೀರ್ಥ ಜಲಾಶಯದಿಂದ ನೀರು ಹರಿಸಲು ವಿಳಂಬ: ಬಾಡುತ್ತಿದೆ ಬೆಳೆ

​ಪ್ರಜಾವಾಣಿ ವಾರ್ತೆ
ಎಸ್.ಎಂ ಹಿರೇಮಠ
Published 23 ನವೆಂಬರ್ 2024, 5:44 IST
Last Updated 23 ನವೆಂಬರ್ 2024, 5:44 IST
ಬಾದಾಮಿ ಹೊರವಲಯದ ಹೊಲವೊಂದರಲ್ಲಿ ಶೇಂಗಾ ಬೆಳೆ ಬಾಡಿದ್ದನ್ನು ರೈತರು ತೋರಿಸಿದರು
ಬಾದಾಮಿ ಹೊರವಲಯದ ಹೊಲವೊಂದರಲ್ಲಿ ಶೇಂಗಾ ಬೆಳೆ ಬಾಡಿದ್ದನ್ನು ರೈತರು ತೋರಿಸಿದರು    

ಬಾದಾಮಿ: ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ಎಡದಂಡೆ ಕಾಲುವೆಗೆ ನೀರು ಹರಿಸದ ಕಾರಣ ಈ ಭಾಗದ ಹಿಂಗಾರು ಹಂಗಾಮಿನ ಶೇಂಗಾ ಸೇರಿದಂತೆ ಮತ್ತಿತರ ಬೆಳೆಗಳು ಬಾಡುತ್ತಿವೆ.

ನವಿಲುತೀರ್ಥ ಜಲಾಶಯ ಭರ್ತಿಯಾಗಿದ್ದರಿಂದ ಜಲಾಶಯದ ನೀರನ್ನೇ ನಂಬಿದ್ದ ರೈತರು ಅಧಿಕ ಪ್ರಮಾಣದಲ್ಲಿ ಶೇಂಗಾ, ಸೂರ್ಯಕಾಂತಿ ಮತ್ತು ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ. ಬಿತ್ತನೆ ಮಾಡಿ ಒಂದೂವರೆ ತಿಂಗಳಾದರೂ ಕಾಲುವೆಗೆ ನೀರು ಹರಿದಿಲ್ಲ.

ಅಂತರ್ಜಲಮಟ್ಟ ಕುಸಿದಿರುವ ಪರಿಣಾಮ ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾಗಿದೆ. ಕಾಲುವೆಗೂ ನೀರು ಬಾರದ್ದರಿಂದ ಭೂಮಿಯ ತೇವಾಂಶ ಕಡಿಮೆಯಾಗಿ ಬೆಳೆಗಳು ಬಾಡುತ್ತಿವೆ. ಇದರಿಂದ ಬೆಳೆಹಾನಿಯಾಗುವ ಆತಂಕ ರೈತರನ್ನು ಕಾಡುತ್ತಿದೆ.

ADVERTISEMENT

ಪಟ್ಟಣದ ಹೊರವಲಯದ ಕರೆಕಲ್ ಗುಡ್ಡದ ಸಮೀಪ ಕೆಂಪು ಮಸಾರಿ ಭೂಮಿಯಲ್ಲಿ ಬಿತ್ತನೆಯಾದ ಶೇಂಗಾ ಬೆಳೆ ಈಗಾಗಲೇ ಬಾಡಿದೆ. ರೈತರು ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ನವಿಲುತೀರ್ಥ ಜಲಾಶಯದಿಂದ ನೀರು ಹರಿಸಲು ಬಾದಾಮಿ ಪಟ್ಟಣ ಸೇರಿದಂತೆ ಮುತ್ತಲಗೇರಿ, ಆಡಗಲ್ ಗ್ರಾಮಗಳ ರೈತರು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಆಗ್ರಹಿಸಿದ್ದರೂ ಪ್ರಯೋಜನವಾಗಿಲ್ಲ.

ಬಿತ್ತನೆ ಪ್ರಮಾಣ: ತಾಲ್ಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಒಟ್ಟು 43,400 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.  4,865 ಹೆಕ್ಟೇರ್‌ನಲ್ಲಿ ಶೇಂಗಾ, 2,940 ಹೆಕ್ಟೇರ್ ಮೆಕ್ಕೆಜೋಳ , 1,420 ಹೆಕ್ಟೇರ್ ಗೋಧಿ, 855 ಹೆಕ್ಟೇರ್‌ನಲ್ಲಿ ಸೂರ್ಯಕಾಂತಿ ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.ರಾಜು ಬಿಸನಾಳ ಸಹಾಯಕ ಎಂಜಿನಿಯರ್ ನೀರಾವರಿ ಇಲಾಖೆ

ಬಾದಾಮಿಯಲ್ಲಿ ಶೇಂಗಾ ಬೆಳೆ ಬಾಡಿದ್ದನ್ನು ರೈತ ಅಡಿವೆಪ್ಪ ಕಮಾಟರ ತೋರಿಸಿದರು
ಹಿಂಗಾರಿನಲ್ಲಿ 43,400 ಹೆಕ್ಟೇರ್‌ನಲ್ಲಿ ಬಿತ್ತನೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಇಲ್ಲ ಪ್ರಯೋಜನ ಬೆಳೆನಷ್ಟ ಆತಂಕದಲ್ಲಿ ರೈತ
ಸೋಮವಾರದಿಂದ ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ಎಡದಂಡೆ ಕಾಲುವೆಗೆ ನೀರು ಹರಿಸಲಾಗುವುದು
ರಾಜು ಬಿಸನಾಳ ಸಹಾಯಕ ಎಂಜಿನಿಯರ್ ನೀರಾವರಿ ಇಲಾಖೆ
ರೈತರ ಕಣ್ಣೀರು
‘ಈ ಸಲ ಮಳಿ ಆಗಿ ನವಿಲುತೀರ್ಥ ಡ್ಯಾಂ ತುಂಬೈತಂತ ನಂಬಿ ಶೇಂಗಾ ಬಿತ್ತಿ ದೀಡತಿಂಗಳಾತರಿ. ಎಕರೆ ಹೊಲಕ ಒಂದು ಕ್ವಿಂಟಲ್ ಬೀಜ ಗೊಬ್ಬರ ಹಾಕೀನಿ. ಗಳೇವು ಆಳು-ಕಾಳು ಸೇರಿ ₹25 ಸಾವಿರ ಖರ್ಚು ಮಾಡೀನಿ. ಬೆಳಿ ಕೊಂಡಿ ಬಿಡಾಕ ಹತ್ತೈತಿ ಹಸಿ ಕಡಿಮೆ ಇದ್ದದ್ದಕ ಕೊಂಡಿ ಒಣಗಾಕ ಹತ್ಯಾವು ’ ಎಂದು ರೈತ ಅಡಿವೆಪ್ಪ ಕಮಾಟರ ಹೇಳಿದರು. ‘ನವೆಂಬರ್ ಮೊದಲ ವಾರದಲ್ಲೇ ಜಲಾಶಯದಿಂದ ನೀರು ಬಿಡಬೇಕಿತ್ತು. ರಾಮದುರ್ಗ ಮತ್ತು ಸವದತ್ತಿ ತಾಲ್ಲೂಕಿನಲ್ಲಿ ರೈತರು ಕಬ್ಬು ಕಟಾವು ನಡೆಸಿದ್ದಾರೆ. ಕಾಲುವೆಗೆ ನೀರು ಬಿಟ್ಟರೆ ಹೊಲದಲ್ಲಿ ಟ್ರ್ಯಾಕ್ಟರ್ ಹೋಗದ ಕಾರಣಕ್ಕೆ ನೀರು ಹರಿಸಿಲ್ಲ. ಇದರಿಂದ ಬಾದಾಮಿ ತಾಲ್ಲೂಕಿನ ರೈತರಿಗೆ ನಷ್ಟವಾಗುತ್ತಿದೆ’ ಎಂದು ಮುತ್ತಲಗೇರಿ ರೈತ ಗೌಡಪ್ಪಗೌಡ ಕಳವಳ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.