ADVERTISEMENT

ಬಾಗಲಕೋಟೆ: ಒಡಲ ಮಕ್ಕಳ ಸಂಕಟ; ಆರ್ಧ್ರಗೊಂಡ ಕೃಷ್ಣೆ!

ಮದ್ಯ ನಿಷೇಧಕ್ಕೆ ಆಗ್ರಹ; ಕೂಡಲಸಂಗಮದಲ್ಲಿ ಮಹಿಳೆಯರಿಂದ ಜಲಸತ್ಯಾಗ್ರಹ

ವೆಂಕಟೇಶ್ ಜಿ.ಎಚ್
Published 28 ಜನವರಿ 2020, 19:45 IST
Last Updated 28 ಜನವರಿ 2020, 19:45 IST
ರಾಜ್ಯದಲ್ಲಿ ಮದ್ಯಪಾನ ನಿಷೇಧಕ್ಕೆ ಆಗ್ರಹಿಸಿ ಬಾಗಲಕೋಟೆ ಜಿಲ್ಲೆ ಕೂಡಲಸಂಗಮದಲ್ಲಿ ಮಂಗಳವಾರ ನೂರಾರು ಮಹಿಳೆಯರು ಕೃಷ್ಣಾ ನದಿಯಲ್ಲಿ ನಿಂತು ಜಲಸತ್ಯಾಗ್ರಹ ನಡೆಸಿದರು.
ರಾಜ್ಯದಲ್ಲಿ ಮದ್ಯಪಾನ ನಿಷೇಧಕ್ಕೆ ಆಗ್ರಹಿಸಿ ಬಾಗಲಕೋಟೆ ಜಿಲ್ಲೆ ಕೂಡಲಸಂಗಮದಲ್ಲಿ ಮಂಗಳವಾರ ನೂರಾರು ಮಹಿಳೆಯರು ಕೃಷ್ಣಾ ನದಿಯಲ್ಲಿ ನಿಂತು ಜಲಸತ್ಯಾಗ್ರಹ ನಡೆಸಿದರು.   

ಕೂಡಲಸಂಗಮ (ಬಾಗಲಕೋಟೆ ಜಿಲ್ಲೆ): ಸಾರಾಯಿ ಚಟಕ್ಕೆ ಬಲಿಯಾದ ನಾಡಿನ ಹಲವು ಕುಟುಂಬಗಳ ಒಡಲ ಸಂಕಟ ಮಂಗಳವಾರ ಇಲ್ಲಿನ ಕೃಷ್ಣೆಯ ಒಡಲಲ್ಲಿ ಇಡೀ ದಿನ ಹಾಡಾಗಿ ಹೊರಹೊಮ್ಮಿತು.

ರಾಜ್ಯದಲ್ಲಿ ಸಂಪೂರ್ಣ ಮದ್ಯಪಾನ ನಿಷೇಧಕ್ಕೆ ಆಗ್ರಹಿಸಿ ಕೈಗೊಂಡಿರುವ ಮದ್ಯ ನಿಷೇಧ ಆಂದೋಲನದಡಿ ನಾಡಿನ ವಿವಿಧೆಡೆಯಿಂದ ಬಂದಿರುವ ಮಹಿಳೆಯರು, ಎರಡನೇ ದಿನ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆದರು.

ಎದೆಎತ್ತರ, ಸೊಂಟ ಮುಳುಗುವಷ್ಟು ನೀರಲ್ಲಿ ನಿಂತ ನೂರಾರು ಮಹಿಳೆಯರು ಜಲಸತ್ಯಾಗ್ರಹ ನಡೆಸಿದರು. ಈ ವೇಳೆ ತಮ್ಮ ದುಖಃ–ದುಮ್ಮಾನಗಳನ್ನು ಪದ ಕಟ್ಟಿ ಹಾಡಿದರು. ಕೈಗೆ ಬಂದ ಮಗ, ಮನೆಯ ಆಧಾರಸ್ತಂಭವಾಗಿದ್ದ ಅಪ್ಪ, ಅಣ್ಣ, ಅಜ್ಜ, ಸಂಬಂಧಿ.. ಹೀಗೆ ಸಾರಾಯಿ ಮೋಹಕ್ಕೆ ತಮ್ಮವರು ಬಲಿಯಾದ ಬಗೆಯನ್ನು ಹಾಡಿಕೊಂಡು ಹಗುರಾದರು. ಸರ್ಕಾರಕ್ಕೂ ಹಿಡಿಶಾಪ ಹಾಕಿದರು. ಒಂದಲ್ಲಾ ಒಂದು ದಿನ ಈ ನೆಲವನ್ನು ಸಾರಾಯಿ ಮುಕ್ತವಾಗಿಸುವುದಾಗಿ ಶಪಥ ಕೂಡ ಮಾಡಿದರು.ತಮಟೆ ಸದ್ದಿನ ಹಿಮ್ಮೇಳದಲ್ಲಿ ಮಹಿಳೆಯರು ಹೇಳಿದ ದುರಂತ ಕಥನಗಳನ್ನು ಕೇಳಿ ಕೃಷ್ಣೆಯೂ ಆರ್ಧ್ರಗೊಂಡಂತೆ ಭಾಸವಾಯಿತು.

ADVERTISEMENT

ಸರದಿಯಲ್ಲಿ ಪಾಲ್ಗೊಂಡರು:ಎರಡನೇ ದಿನ ಇನ್ನಷ್ಟು ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ತಲಾ 100 ಮಂದಿ ಸರದಿಯಲ್ಲಿ ನೀರೊಳಗೆ ನಿಂತರು. ಉಳಿದವರು ದಂಡೆಯಲ್ಲಿ ಕುಳಿತು ಘೋಷಣೆಗಳ ಕೂಗುತ್ತಾ ಬೆಂಬಲ ವ್ಯಕ್ತಪಡಿಸಿದರು. ವಿಶೇಷವೆಂದರೆ ಕೂಡಲಸಂಗಮ ಗ್ರಾಮದ ಮಹಿಳೆಯರೂ ಸ್ವಯಂಪ್ರೇರಿತವಾಗಿ ಬಂದಿದ್ದರು. ಬಸವಣ್ಣನ ಗೌರವಾರ್ಥ ನಮ್ಮೂರಲ್ಲಿ ಸರ್ಕಾರವೇ ಮದ್ಯಮಾರಾಟ ನಿಷೇಧಿಸಿದೆ. ಆದರೂ ಇಲ್ಲಿ ಕದ್ದು ಮಾರಲಾಗುತ್ತಿದೆ ಎಂದು ಆರೋಪಿಸಿದರು. ಹಸಿರು ಶಾಲು ಹೊದ್ದ ಕೆಲ ಮಹಿಳೆಯರು ಜಲಸತ್ಯಾಗ್ರಹದಲ್ಲಿ ಪಾಲ್ಗೊಂಡರು.

ಸಹಿ ಸಂಗ್ರಹಣೆ:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕಳುಹಿಸಲು ಸಂಘಟಕರು ದೊಡ್ಡ ಬಟ್ಟೆಯ ಮೇಲೆ ಸಹಿ ಸಂಗ್ರಹ ಮಾಡಿದರು. ಅನಕ್ಷರಸ್ಥ ಮಹಿಳೆಯರೂ ಹೆಬ್ಬೆಟ್ಟು ಒತ್ತಿ ಬೆಂಬಲ ವ್ಯಕ್ತಪಡಿಸಿದ್ದು ಗಮನ ಸೆಳೆಯಿತು. ’20 ಸಾವಿರ ಮಹಿಳೆಯರು ಸಹಿ ಮಾಡಿದ ಬಟ್ಟೆಯನ್ನು ಸಿಎಂಗೆ ಕಳುಹಿಸಿಕೊಡುವುದಾಗಿ’ ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆಯ (ಗ್ರಾಕೂಸ್) ಸ್ವರ್ಣಾಭಟ್ ತಿಳಿಸಿದರು.

ನೀರಿನಲ್ಲಿ ನಿಂತವರು ಹೆಂಡಬೇಡ ತುಂಡು ಭೂಮಿ ಕೊಡಿ, ಬೀರು ಬೇಡ ನೀರು ಕೊಡಿ, ಅಮಲಿನ ಕೇಂದ್ರ ಬೇಡ, ಆರೋಗ್ಯ ಕೇಂದ್ರ ಬೇಕು, ಸಾರಾಯಿ ತೆರಿಗೆ ಕೋಟಿ ಕೋಟಿ, ಬಡವರ ಹಣ ಲೂಟಿ ಲೂಟಿ ಎಂಬ ಘೋಷಣೆಯುಳ್ಳ ಫಲಕಗಳ ಪ್ರದರ್ಶಿಸಿದರು.

ಕಿರಾಣಿ ಅಂಗಡಿಗಳಲ್ಲೂ ಮದ್ಯ!
’ಮದ್ಯ ಮಾರಾಟಕ್ಕೆ ಅಬಕಾರಿ ಇಲಾಖೆ ನೀಡುವ ಗುರಿ ಮುಟ್ಟಲು ರಾಯಚೂರು ಜಿಲ್ಲೆಯಲ್ಲಿ ಕಿರಾಣಿ ಅಂಗಡಿಗಳಲ್ಲೂ ಅಕ್ರಮವಾಗಿ ಶೆರೆ ಮಾರಲಾಗುತ್ತಿದೆ. ಹಳ್ಳಿಗಳಲ್ಲಿ ಯುವ ಪೀಳಿಗೆ ಉಳಿಯುತ್ತಿಲ್ಲ. 35ರಿಂದ 40 ವರ್ಷದೊಳಗಿನ ವಿಧವೆಯರು ಹೆಚ್ಚುತ್ತಿದ್ದಾರೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿ‘ ಎಂದು ಅಲ್ಲಿನ ನವಜೀವನ ಸಂಸ್ಥೆಯ ವಿದ್ಯಾ ಪಾಟೀಲ ’ಪ್ರಜಾವಾಣಿ‘ಗೆ ತಿಳಿಸಿದರು.

ಪ್ರತಿಭಟನೆ ಹಿಂದೆ ಬಿಹಾರಿ ಬಾಬು..
ಮದ್ಯ ನಿಷೇಧ ಆಂದೋಲನದ ಹಿಂದಿನ ಪ್ರೇರಕ ಶಕ್ತಿ ಬಿಹಾರ ಮೂಲದ ಅಭಯ್‌ಕುಮಾರ. ಹೈದರಾಬಾದ್‌ನಲ್ಲಿ ಎಂಜಿನಿಯರಿಂಗ್ ಓದಿದ್ದಾರೆ. 20 ವರ್ಷಗಳ ಹಿಂದೆ ಬಿಪಿಎಲ್ ಕಂಪೆನಿಯ ದೊಡ್ಡ ಸಂಬಳದ ಹುದ್ದೆ ಬಿಟ್ಟು ರಾಯಚೂರಿಗೆ ಬಂದ ಅಭಯ್, ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆಯ ಮೂಲಕ ಮಹಿಳೆಯರನ್ನು ಸಂಘಟಿಸಿದ್ದಾರೆ. ಆಂದೋಲನಕ್ಕೆ ಬೆಂಬಲ ಸೂಚಿಸಿ ಕೂಡಲಸಂಗಮದಲ್ಲಿ ಕಳೆದ ಎರಡು ದಿನಗಳಿಂದ ಉಪವಾಸ ಸತ್ಯಾಗ್ರಹ ಕೂಡ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.