ಮಹಾಲಿಂಗಪುರ: ಪಟ್ಟಣದಲ್ಲಿ ಕೆಎಸ್‌ಆರ್‌ಟಿಸಿ ಡಿಪೊ ನಿರ್ಮಿಸಬೇಕೆಂಬ ಇಲ್ಲಿಯ ಸಾರ್ವಜನಿಕರ 20 ವರ್ಷಗಳ ಬೇಡಿಕೆಗೆ ಇನ್ನೂ ಮನ್ನಣೆ ದೊರೆತಿಲ್ಲ.
ನಾಗರಿಕ ಹಿತರಕ್ಷಣಾ ಸಮಿತಿ, ರಾಮಕೃಷ್ಣ ಹೆಗಡೆ ಪ್ರತಿಷ್ಠಾನ ಸೇರಿದಂತೆ ವಿವಿಧ ಸಂಘಟನೆಗಳ ಹೋರಾಟದ ಫಲವಾಗಿ 2004–05ರಲ್ಲಿ ಡಿಪೊ ನಿರ್ಮಾಣಕ್ಕೆ ಮುಂದಡಿ ಇಡಲಾಗಿತ್ತು. ಇದಕ್ಕಾಗಿ, ಬಸ್ ನಿಲ್ದಾಣಕ್ಕೆ ಅಂಟಿಕೊಂಡೇ ಇರುವ ಪುರಸಭೆ ಒಡೆತನದಲ್ಲಿರುವ ಅಂದಾಜು 4 ಎಕರೆ ಜಾಗವನ್ನು ಗುರುತಿಸಲಾಗಿತ್ತು. ಆದರೆ, ಈ ಜಾಗವನ್ನು ಉಚಿತವಾಗಿ ಸಾರಿಗೆ ಸಂಸ್ಥೆಗೆ ನೀಡುವುದಾದರೆ ಡಿಪೊ ಮಂಜೂರಾತಿ ನೀಡಲು ಸಾರಿಗೆ ಅಧಿಕಾರಿಗಳು ಮುಂದಾಗಿದ್ದರು. ಆದರೆ, ಇದಕ್ಕೆ ಪುರಸಭೆ ಒಪ್ಪದಿದ್ದಾಗ ಡಿಪೊ ಮಂಜೂರಾತಿ ನನೆಗುದಿಗೆ ಬಿದ್ದಿತ್ತು.
ಸದ್ಯ ಪುರಸಭೆ ಒಡೆತನದಲ್ಲಿರುವ ಅಂದಾಜು 4 ಎಕರೆ ಜಾಗ ಅಕ್ರಮ ಚಟುವಟಿಕೆಗಳ ತಾಣವಾಗಿ, ಬಯಲು ಶೌಚಾಲಯವಾಗಿ ಮಾರ್ಪಟ್ಟಿದೆ. ಎಲ್ಲೆಂದರಲ್ಲಿ ಕಸ ಬೆಳೆದು ಅಸಹ್ಯಕರವಾಗಿದೆ. ಈ ಜಾಗದಲ್ಲಿ ಆಲಮಟ್ಟಿ ಉದ್ಯಾನ ಮಾದರಿಯಂತೆ ಸುಂದರ ಉದ್ಯಾನ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರಿ ಕಚೇರಿಗಳ ಕಟ್ಟಡ ನಿರ್ಮಾಣ ಮಾಡಬೇಕೆಂಬ ಆಗ್ರಹ ವ್ಯಕ್ತವಾಗಿದೆ.
ಪಟ್ಟಣದಲ್ಲಿ ಬಸ್ ಡಿಪೊ ನಿರ್ಮಿಸಬೇಕೆಂಬ ಇಚ್ಛಾಶಕ್ತಿಯನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತೋರಿಲ್ಲ. ಸಾರ್ವಜನಿಕರಿಂದ ಕೆಲ ಅರ್ಜಿ ಸಲ್ಲಿಕೆ ಬಿಟ್ಟರೆ ಯಾವುದೇ ಕಡತಗಳು ಇಲ್ಲ. ಇದರಿಂದ ಮಹಾಲಿಂಗಪುರಕ್ಕೆ ಡಿಪೊ ನಿರ್ಮಾಣದ ವಿಚಾರ ಕಗ್ಗಂಟಾಗಿ ಉಳಿದಿದೆ.
ಪ್ರತಿ ತಾಲ್ಲೂಕಿಗೆ ಒಂದು ಬಸ್ ಡಿಪೊ ನಿರ್ಮಿಸಬೇಕು ಎಂಬ ಉದ್ದೇಶದ ಅಡಿ ರಬಕವಿ-ಬನಹಟ್ಟಿ ತಾಲ್ಲೂಕಿಗೆ ಬಸ್ ಡಿಪೊ ನಿರ್ಮಾಣವಾಗಿಲ್ಲ. ಮುಧೋಳ ತಾಲ್ಲೂಕಿನಲ್ಲಿದ್ದಾಗಲೇ ಮಹಾಲಿಂಗಪುರ ಪಟ್ಟಣಕ್ಕೆ ಡಿಪೊ ಬೇಡಿಕೆ ಇದೆ. ನಂತರದಲ್ಲಿ ರಬಕವಿ-ಬನಹಟ್ಟಿ ತಾಲ್ಲೂಕಿಗೆ ಸೇರಿದ ನಂತರ ಸಹಜವಾಗಿ ಡಿಪೊ ನಿರ್ಮಾಣದ ಕುರಿತು ಚರ್ಚೆ ಆಗುತ್ತಿದೆ.
‘ಮಹಾಲಿಂಗಪುರ ಪಟ್ಟಣ 38 ಸಾವಿರ ಜನಸಂಖ್ಯೆ ಹೊಂದಿದೆ. ಈಗಾಗಲೇ ಇಲ್ಲಿಯ ಅವಶ್ಯಕತೆ ಅನುಗುಣವಾಗಿ ಸಾರಿಗೆ ವ್ಯವಸ್ಥೆ ನೀಡಲು ಸಾಧ್ಯವಾಗುತ್ತಿಲ್ಲ. ಮುಂದೆ ಇನ್ನೂ ಹೆಚ್ಚಿನ ಜನಸಂಖ್ಯೆ ಹಾಗೂ ಸಾರ್ವಜನಿಕರ ಓಡಾಟ ಹೆಚ್ಚಲಿದೆ. ಮಹಿಳೆಯರ ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಬಸ್‌ಗಳ ಸಂಖ್ಯೆ ಮತ್ತಷ್ಟು ಏರಿಕೆಯಾಗಲೂಬಹುದು. ಡಿಪೊ ನಿರ್ಮಾಣವಾಗಿ ಇಲ್ಲಿಂದಲೇ ಬಸ್ ಸಂಚಾರ ಆರಂಭಿಸಿದರೆ ಅನುಕೂಲವಾಗುತ್ತದೆ. ಸಮಯಕ್ಕೆ ಸರಿಯಾಗಿ ಬಸ್ ಲಭ್ಯತೆ ಇರಲಿದೆ’ ಎಂದು ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಶೇಖರ ಅಂಗಡಿ ಅಭಿಪ್ರಾಯಪಟ್ಟರು.
‘ರಬಕವಿ-ಬನಹಟ್ಟಿ, ತೇರದಾಳ ಭಾಗದಿಂದ ಡಿಪೊಗೆ ಬೇಡಿಕೆ ಇದೆ. ಆದರೆ, ಕೇವಲ ಬೇಡಿಕೆ ಇದ್ದರೆ ಸಾಲದು. ಅದಕ್ಕೆ ಪೂರಕವಾದ ಜಾಗ ಅಗತ್ಯವಾಗಿ ಬೇಕು. ಡಿಪೊ ನಿರ್ಮಾಣಕ್ಕೆ ಉಚಿತವಾಗಿ ಜಾಗ ನೀಡಿದ್ದಾದರೆ ಪರಿಶೀಲನೆ ನಡೆಸಿ ಡಿಪೊ ಮಂಜೂರಾತಿ ನೀಡಲಾಗುವುದು’ ಎಂದು ಸಾರಿಗೆ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.