ನವಲಗುಂದ: ‘ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ನೇತೃತ್ವದ ಗ್ಯಾರಂಟಿ ಸರ್ಕಾರ ನುಡಿದಂತೆ ನಡೆದಿದೆ. ಬಿಜೆಪಿ ಈ ಗ್ಯಾರಂಟಿ ಯೋಜನೆಗಳ ವಿರುದ್ಧ ಅಪಪ್ರಚಾರ ಮಾಡುತ್ತಿವೆ. ಈ ಅಪಪ್ರಚಾರಕ್ಕೆ ಕಿವಿಗೊಡಬೇಡಿ. ಈ ಗ್ಯಾರಂಟಿಗಳು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿ ಆಗಲಿವೆ. ಗೃಹಲಕ್ಷ್ಮಿ ಹಣದಿಂದ ಸಾವಿರಾರು ಕುಟುಂಬಗಳು ನಾನಾ ರೀತಿಯ ಅನುಕೂಲಗಳನ್ನು ಒದಗಿಸಿಕೊಳ್ಳುತ್ತಿರುವ ಬಗ್ಗೆ ಪ್ರತಿದಿನ ಮಾಧ್ಯಮಗಳು ತೋರಿಸುತ್ತಿವೆ. ನುಡಿದಂತೆ ನಡೆದ ಸರ್ಕಾರ ನಮ್ಮದು’ ಎಂದು ಶಾಸಕ ಎನ್.ಎಚ್.ಕೋನರಡ್ಡಿ ಸಂತಸ ವ್ಯಕ್ತಪಡಿಸಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಸಾರಿಗೆ ಇಲಾಖೆಯ ಮೂರು ನೂತನ ಬಸ್ ಗಳಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದ ಬಹುಸಂಖ್ಯಾತ ಜನಸಮುದಾಯವನ್ನು ತಲುಪುವ ‘ಗ್ಯಾರಂಟಿ’ ಯೋಜನೆಗಳು ಸಂಪೂರ್ಣ ಯಶಸ್ವಿಯಾಗಿವೆ ಎಂದರು.
‘ಇನ್ನುಮುಂದೆ ಈ ಭಾಗದ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹಾಗೂ ಸಾರ್ವಜನಿಕರು ತಮ್ಮ ದೈನಂದಿನ ವ್ಯಾಪಾರ ವಹಿವಾಟು, ಆಸ್ಪತ್ರೆ ಇನ್ನಿತರ ಕೆಲಸ ಕಾರ್ಯಗಳಿಗೆ ತೆರಳಲು ಬಸ್ಸಿಗಾಗಿ ಕಾಯುವ ಅವಶ್ಯಕತೆಯಿಲ್ಲ. ಸಮಯಕ್ಕೆ ಸರಿಯಾಗಿ ಬಸ್‌ಗಳನ್ನು ಬಿಡುವಂತೆ ಸೂಚಿಸಲಾಗಿದೆ. ಸಾರ್ವಜನಿಕರು ನೂತನ ಬಸ್ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಬಸ್ ಗಳು ಬರುವ ನಿರೀಕ್ಷೆ ಇದೆ’ ಎಂದರು.
ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಕುರಿತು ಸರಿಯಾದ ರೀತಿಯಲ್ಲಿ ನೋಡಿಕೊಳ್ಳಿ ಎಂದು ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪುರಸಭೆ ಅಧ್ಯಕ್ಷ ಶಿವಾನಂದ ತಡಸಿ, ಉಪಾಧ್ಯಕ್ಷೆ ಫರೀದಾಬೇಗಂ ಬಾಬರ್ಚಿ, ಘಟಕದ ವ್ಯವಸ್ಥಾಪಕ ಅಶೋಕ ಎಂ.ಕ್ಯಾಡರಕೊಪ್ಪ, ಸಾರಿಗೆ ನಿಯಂತ್ರಕರಾದ ಎಂ.ಎಸ್.ಕಳಸದ, ಎಸ್.ಎಂ ಬರಮಗೌಡ, ಪುರಸಭೆ ಸದಸ್ಯರಾದ ಮಂಜು ಜಾದವ, ಪವಾರ, ಉಸ್ಮಾನ ಬಬರ್ಚಿ, ಲಕ್ಷ್ಮಣ ಹಳ್ಳದ, ಮದರಸಾಬ ಉಗರಗೋಳ ಸೇರಿ ಸಾರಿಗೆ ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.