ADVERTISEMENT

ಮತ್ತೆ ಸ್ಥಗಿತಗೊಂಡ ಕುಡಿಯುವ ನೀರಿನ ಘಟಕ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 14:05 IST
Last Updated 10 ಜುಲೈ 2024, 14:05 IST
ತೇರದಾಳ ಪುರಸಭೆ ವ್ಯಾಪ್ತಿಯ ಅಂಬೇಡ್ಕರ್ ವೃತ್ತದ ಬಳಿಯಿರುವ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿದ್ದು, ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ.
ತೇರದಾಳ ಪುರಸಭೆ ವ್ಯಾಪ್ತಿಯ ಅಂಬೇಡ್ಕರ್ ವೃತ್ತದ ಬಳಿಯಿರುವ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿದ್ದು, ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ.   

ತೇರದಾಳ: ಇಲ್ಲಿಯ ಅಂಬೇಡ್ಕರ್ ವೃತ್ತದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ದುರಸ್ತಿಗೊಳಿಸಿ ವರ್ಷ ಗತಿಸಿಲ್ಲ. ಆದರೆ ಅದು ಮತ್ತೆ ಸ್ಥಗಿತಗೊಂಡು ಎರಡ್ಮೂರು ತಿಂಗಳು ಗತಿಸಿದರೂ ಪುರಸಭೆ ದಿವ್ಯ ನಿರ್ಲಕ್ಷ್ಯ ತೋರಿದೆ.

ಪಟ್ಟಣದಲ್ಲಿ ಆಯೋಜಿಸಿದ್ದ ಜನತಾ ದರ್ಶನ ಕಾರ್ಯಕ್ರಮದ ಪೂರ್ವದಲ್ಲಿ ಬಂದಿದ್ದ ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಅಂಬೇಡ್ಕರ್ ವೃತ್ತಕ್ಕೆ ಭೇಟಿ ನೀಡಿದಾಗ ಅಲ್ಲಿಯ ನಿವಾಸಿಗಳು ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿರುವ ಬಗ್ಗೆ ಅವರ ಗಮನಕ್ಕೆ ತಂದಿದ್ದರು. ನಂತರ ಕೆಲ ದಿನಗಳ ಬಳಿಕ ಘಟಕ ಆರಂಭಗೊಂಡಿತು. ಆದರೆ ಈಗ ಮತ್ತೆ ಸ್ಥಗಿತಗೊಂಡಿದೆ.

ಸ್ಥಳೀಯ ನಿವಾಸಿ ಸುನೀಲ ಹಟ್ಟೆನ್ನವರ ಮಾತನಾಡಿ, ‘ಪರಿಶಿಷ್ಟರಿಗೆ ಅನುಕೂಲವಾಗಲು ಬಹಳ ವರ್ಷಗಳ ಹಿಂದೆ ಆರಂಭಿಸಿದ ಶುದ್ಧ ಕುಡಿಯುವ ನೀರಿನ ಘಟಕ ಹಲವು ಬಾರಿ ಬಂದ್‌ ಆಗಿರುವಂತೆ ಈಗಲೂ ಆಗಿದೆ. ಇದರಿಂದ ನಮಗೆ ಶುದ್ಧ ನೀರು ಸಮೀಪದಲ್ಲಿ ದೊರೆಯುವುದಿಲ್ಲ. ನೀರನ್ನು ದೂರದಿಂದ ತರಬೇಕಾದ ಸ್ಥಿತಿ ಇದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ದೇಸಾರ ಬಾವಿ ಹತ್ತಿರ ಇರುವ ಇನ್ನೊಂದು ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡು ವರ್ಷಗಳೇ ಗತಿಸಿವೆ. ಅದನ್ನು ಕೂಡ ಇದುವರೆಗೆ ದುರಸ್ತಿಗೊಳಿಸುವ ಕೆಲಸಕ್ಕೆ ಪುರಸಭೆ ಮುಂದಾಗಿಲ್ಲ. ಪುರಸಭೆ ಸದಸ್ಯರನ್ನು ಈ ಬಗ್ಗೆ ವಿಚಾರಿಸಿದರೆ, ‘ಪುರಸಭೆಯಲ್ಲಿ ಆಡಳಿತಾಧಿಕಾರಿಗಳ ಆಡಳಿತವಿದ್ದು, ನಮ್ಮ ಸ್ಥಾನಕ್ಕೆ ಯಾವ ಬೆಲೆಯೂ ಇಲ್ಲದಂತಾಗಿದೆ. ಅಧಿಕಾರಿಗಳ ದರ್ಬಾರ್‌ನಿಂದಾಗಿ ಪಟ್ಟಣದಲ್ಲಿ ಮೂಲ ಸೌಲಭ್ಯಗಳು ನನೆಗುದಿಗೆ ಬಿದ್ದಿವೆ’ ಎಂದು ತಮ್ಮ ಅಸಾಹಯಕತೆ ತೋಡಿಕೊಳ್ಳುತ್ತಿದ್ದಾರೆ. ಇತ್ತ ಅಧಿಕಾರಿಗಳಂತೂ ಅಭಿವೃದ್ಧಿಯ ಕಡೆ ಗಮನ ಕೊಡದೇ ತುಕ್ಕು ಹಿಡಿದ ಕಬ್ಬಿಣವಾಗಿದ್ದಾರೆ’ ಎಂದು ಸದಸ್ಯರು ದೂರಿದ್ದಾರೆ.

‘ಅಂಬೇಡ್ಕರ್ ವೃತ್ತದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕದ ದುರಸ್ತಿಗೆ ಟೆಂಡರ್ ನೀಡಲಾಗಿದೆ. ಕೆಲಸ ವಿಳಂಬ ಮಾಡಿರುವುದಕ್ಕೆ ಗುತ್ತಿಗೆದಾರನಿಗೆ ನೋಟಿಸ್ ನೀಡಲಾಗಿದ್ದು, ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗುವುದು' ಎಂದರು.ತೇರದಾಳ ಪುರಸಭೆ ಎಂಜಿನಿಯರ್‌ ಭಾಗ್ಯಶ್ರೀ ಪಾಟೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.