ADVERTISEMENT

ತೇರದಾಳ | ನೀರು ಪೂರೈಸಲು ತಾತ್ಸಾರ; ಅಧಿಕಾರಿಗಳ ವಿರುದ್ಧ ಶಾಸಕ ಸಿದ್ದು ಸವದಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 27 ಜೂನ್ 2023, 14:19 IST
Last Updated 27 ಜೂನ್ 2023, 14:19 IST
ತೇರದಾಳದ ಪುರಸಭೆಯಲ್ಲಿ ಜರುಗಿದ ಸಭೆಯಲ್ಲಿ ಶಾಸಕ ಸಿದ್ದು ಸವದಿ ಮಾತನಾಡಿದರು
ತೇರದಾಳದ ಪುರಸಭೆಯಲ್ಲಿ ಜರುಗಿದ ಸಭೆಯಲ್ಲಿ ಶಾಸಕ ಸಿದ್ದು ಸವದಿ ಮಾತನಾಡಿದರು   

ತೇರದಾಳ: ‘ಕೃಷ್ಣಾ ನದಿಯಲ್ಲಿ ಒಂದು ತಿಂಗಳಿಗೆ ಆಗುವಷ್ಟು ನೀರಿದ್ದರೂ ಪಟ್ಟಣಕ್ಕೆ ನೀರು ಪೂರೈಕೆ ಮಾಡುತ್ತಿಲ್ಲ’ ಎಂದು ಶಾಸಕ ಸಿದ್ದು ಸವದಿ ಮುಖ್ಯಾಧಿಕಾರಿ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ಪುರಸಭೆಯಲ್ಲಿ ಮಂಗಳವಾರ ಬರ ನಿರ್ವಹಣೆ ಕುರಿತು ಜರುಗಿದ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದರು.

‘ಕೊಳವೆಬಾವಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದರೂ, ಅವುಗಳಿಗೆ ಅಳವಡಿಸಿದ ಪಂಪ್‌ಸೆಟ್‌ಗಳ ದುರಸ್ತಿಗೆ ಅಧಿಕಾರಿಗಳು ಮುಂದಾಗುತ್ತಿಲ್ಲ. ನೀರು ಸರಬರಾಜು ವಿಭಾಗವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ವಿಫಲವಾಗಿದ್ದಾರೆ’ ಎಂದು ತರಾಟೆಗೆ ತೆಗೆದುಕೊಂಡರು.

ADVERTISEMENT

‘ಚುನಾವಣೆ ವೇಳೆ ರಬಕವಿ-ಬನಹಟ್ಟಿ ನಗರಸಭೆಗೆ ನಿಯೋಜನೆಗೊಂಡ ಅಧಿಕಾರಿಯನ್ನು ಕೂಡಲೇ ತೇರದಾಳಕ್ಕೆ ಮರಳಿ ಕಳುಹಿಸಬೇಕು’ ಎಂದು  ಜಿಲ್ಲಾ ಯೋಜನಾಧಿಕಾರಿಗೆ ಕರೆ ತಿಳಿಸಿದರು.

ನೀರು ಸರಬರಾಜು, ಬೀದಿ ದೀಪ ನಿರ್ವಹಣೆ ಮಾಡುವವರ ಮೂರು ತಿಂಗಳ ಬಾಕಿ ವೇತನ ಪಾವತಿಸುವ ವಿಚಾರದಲ್ಲೂ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಸದಸ್ಯರು ಗಮನ ಸೆಳೆದರು.

‘300ಕ್ಕೂ ಹೆಚ್ಚು ಅನಧಿಕೃತ ಕಟ್ಟಡಗಳನ್ನು ಪುರಸಭೆ ವ್ಯಾಪ್ತಿಯಲ್ಲಿ ನಿರ್ಮಿಸಲಾಗುತ್ತಿದೆ. ಮುಖ್ಯಾಧಿಕಾರಿ ಕಚೇರಿಯಲ್ಲಿ ಕುಳಿತು ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದಾರೆ. ಉತಾರೆ ಪಡೆಯಲು ಜನರು ಅಲೆದಾಡುತ್ತಿದ್ದಾರೆ. ಜನರ ಕಷ್ಟಗಳಿಗೆ ಸ್ಪಂದಿಸದಿದ್ದರೆ ಎಲ್ಲರಿಗೂ ನೋಟಿಸ್ ನೀಡಲಾಗುವುದು, ಜನಹಿತಕ್ಕೆ ಶ್ರಮಿಸಲಾಗದಿದ್ದರೆ ಪುರಸಭೆಗೆ ಬೀಗ ಹಾಕಿ ಮನೆಗೆ ತೆರಳಿ’ ಎಂದು ಖಡಕ್‌ ಸೂಚನೆ ನೀಡಿದರು.

ತೇರದಾಳ ವಿಶೇಷ ತಹಶೀಲ್ದಾರ್ ಕಿರಣ ಬೆಳವಿ, ಉಪತಹಶೀಲ್ದಾರ್ ಶ್ರೀಕಾಂತ ಮಾಯನ್ನವರ, ಪುರಸಭೆ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ, ಕಚೇರಿ ವ್ಯವಸ್ಥಾಪಕ ಮಲ್ಲಿಕಾರ್ಜುನ ಬಿರಾದಾರ ಪಾಟೀಲ, ಜೆ.ಇ. ಎಸ್.ಬಿ.ಮಾತಾಳಿ, ಕಂದಾಯ ನಿರೀಕ್ಷಕ ಪ್ರಕಾಶ ಮಠಪತಿ, ಪುರಸಭೆ ಕಂದಾಯ ಅಧಿಕಾರಿ ಎಫ್.ಬಿ.ಗಿಡ್ಡಿ, ಗ್ರಾಮ ಆಡಳಿತ ಅಧಿಕಾರಿಗಳಾದ ಮಲ್ಲಿಕಾರ್ಜುನ ಖವಟಗೊಪ್ಪ, ಎಸ್.ಎಂ.ಕುಂಬಾರ, ಎಂ.ಎಸ್.ನೀಲಣ್ಣವರ, ಆರ್.ಎಂ.ಮಠಪತಿ, ಎ.ಐ.ಜಮಖಂಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.