ADVERTISEMENT

ಬಾದಾಮಿ | ಬತ್ತಿದ ಮಲಪ್ರಭೆ: ಸಂಕ್ರಾಂತಿಗಿಲ್ಲ ಪುಣ್ಯಸ್ನಾನ

ಎಸ್.ಎಂ.ಹಿರೇಮಠ
Published 15 ಜನವರಿ 2024, 4:26 IST
Last Updated 15 ಜನವರಿ 2024, 4:26 IST
ಬಾದಾಮಿ ಸಮೀಪದ ವಿಶ್ವ ಪರಂಪರೆಯ ತಾಣ ಪಟ್ಟದಕಲ್ಲು ಗ್ರಾಮದ ಸಮೀಪ ಬತ್ತಿದ ಮಲಪ್ರಭೆ ನದಿ
ಬಾದಾಮಿ ಸಮೀಪದ ವಿಶ್ವ ಪರಂಪರೆಯ ತಾಣ ಪಟ್ಟದಕಲ್ಲು ಗ್ರಾಮದ ಸಮೀಪ ಬತ್ತಿದ ಮಲಪ್ರಭೆ ನದಿ   

ಬಾದಾಮಿ: ಮಳೆ ಕೊರತೆಯಿಂದ ಮತ್ತು ನವಿಲುತೀರ್ಥ ಜಲಾಶಯದಿಂದ ನದಿಗೆ ನೀರು ಹರಿಸದ ಹಿನ್ನೆಲೆಯಲ್ಲಿ ಪಟ್ಟದಕಲ್ಲು ಗ್ರಾಮದ ಬಳಿ ಇರುವ ಮಲಪ್ರಭೆ ನದಿ ಬತ್ತಿದೆ. ಬತ್ತಿದ ಮಲಪ್ರಭೆಯಿಂದ ಭಕ್ತರಿಗೆ ಸಂಕ್ರಾಂತಿ ಪುಣ್ಯಸ್ನಾನ ಇಲ್ಲದಂತಾಗಿದೆ.

‘ಪಟ್ಟದಕಲ್ಲು ಮತ್ತು ಶಿವಯೋಗಮಂದಿರ ಸಮೀಪದ ಮಲಪ್ರಭೆ ನದಿಯಲ್ಲಿ ಪ್ರತಿ ವರ್ಷ ನೀರು ಇರುತ್ತಿತ್ತು. ಭಕ್ತರು ಸಂಕ್ರಮಣ ಹಬ್ಬಕ್ಕೆ ಪುಣ್ಯ ಸ್ನಾನಗೈದು ದೇವರ ದರ್ಶನ ಪಡೆಯುತ್ತಿದ್ದರು. ಈ ಬಾರಿ ನದಿಯಲ್ಲಿ ನೀರು ಇಲ್ಲದ್ದರಿಂದ ಜನರು ನಿರಾಶೆಯಾಗಿದ್ದಾರೆ’ ಎಂದು ಕಾಟಾಪೂರ ಗ್ರಾಮದ ಸಿದ್ದಪ್ಪ ಹೇಳಿದರು.

ನದಿ ದಂಡೆಯ ಜನರಿಗೆ, ಜಾನುವಾರುಗಳಿಗೆ ಮತ್ತು ಪ್ರಾಣಿ ಪಕ್ಷಿಗಳಿಗೂ ಕುಡಿಯಲು ನೀರು ಇಲ್ಲದಂತೆ ನದಿ ಸಂಪೂರ್ಣ ಬತ್ತಿದೆ. ನವಿಲುತೀರ್ಥ ಜಲಾಶಯದಿಂದ ನದಿಗೆ ನೀರನ್ನು ಬಿಡಬೇಕು ಎಂದು ನದಿ ದಂಡೆಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ADVERTISEMENT

ಕೂಡಲಸಂಗಮ ಶರಣ ಮೇಳದಿಂದ ಲಕ್ಷಾಂತರ ಭಕ್ತರು ಐಹೊಳೆ, ಪಟ್ಟದಕಲ್ಲು, ಮಹಾಕೂಟ, ಶಿವಯೋಗಮಂದಿರ ಮತ್ತು ಬನಶಂಕರಿ ದೇವಾಲಯಕ್ಕೆ ಬರುತ್ತಿದ್ದರು. ಈ ಬಾರಿ ನದಿಯಲ್ಲಿ ಮತ್ತು ಬನಶಂಕರಿಯ ಹರಿದ್ರಾತೀರ್ಥ ಪುಷ್ಕರಣಿ ಮತ್ತು ಸರಸ್ವತಿ ಹಳ್ಳದಲ್ಲಿ ನೀರು ಇಲ್ಲದ ಕಾರಣ ಭಕ್ತರಿಗೆ ತೊಂದರೆಯಾಗಲಿದೆ.

ಧಾರ್ಮಿಕ ಪುಣ್ಯಕ್ಷೇತ್ರ ಮಹಾಕೂಟೇಶ್ವರ ದೇವಾಲಯದಲ್ಲಿ ಕಾಶಿ ಮತ್ತು ವಿಷ್ಣು ಪುಷ್ಕರಣಿಯಲ್ಲಿ ನೀರು ಇರುವುದರಿಂದ ಹೆಚ್ಚಿನ ಭಕ್ತರು ಮಹಾಕೂಟೇಶ್ವರ ದೇವಾಲಯಕ್ಕೆ ತೆರಳುವ ನಿರೀಕ್ಷೆಯಿದೆ.

ಬನಶಂಕರಿದೇವಿ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಸಂಕ್ರಮಣಕ್ಕೆ ಮಲಪ್ರಭಾ ನದಿಗೆ ನೀರು ಬಿಡಬೇಕು ಎಂದು ಬನಶಂಕರಿ ದೇವಾಲಯದ ಟ್ರಸ್ಟ್ ಸದಸ್ಯರು ಮತ್ತು ಚೊಳಚಗುಡ್ಡ ಗ್ರಾಮ ಪಂಚಾಯ್ತಿ ಸದಸ್ಯರು ನೀರಾವರಿ ಇಲಾಖೆಯ ಅಧಿಕಾರಿಗೆ ಹೇಳಿದ್ದರು. ಆದರೆ ನೀರು ಇನ್ನೂ ಬಂದಿಲ್ಲ ಎಂದು ಬನಶಂಕರಿ ದೇವಾಲಯ ಸಮಿತಿ ಸದಸ್ಯ ಮಹೇಶ ಪೂಜಾರ ಹೇಳಿದರು.

ನೀರಾವರಿ ಇಲಾಖೆ ಅಧಿಕಾರಿಗೆ ಕಾಲುವೆಗೆ ನೀರು ಬಿಡಲು ಶಾಸಕ ಭೀಮಸೇನ ಚಿಮ್ಮನಕಟ್ಟಿ ತಿಳಿಸಿದ್ದಾರೆ. ಬನಶಂಕರಿ ಜಾತ್ರೆಯ ಮುನ್ನ ನೀರು ಬರುವುದು.
ಜೆ.ಬಿ. ಮಜ್ಜಗಿ, ತಹಶೀಲ್ದಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.