ADVERTISEMENT

ಬರ ಪರಿಸ್ಥಿತಿ: ಪ್ರಧಾನಿ ವಿರುದ್ಧ ಹರಿಹಾಯ್ದ ಸಚಿವ ಆರ್.ಬಿ.ತಿಮ್ಮಾಪುರ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2023, 15:55 IST
Last Updated 27 ನವೆಂಬರ್ 2023, 15:55 IST
ಆರ್.ಬಿ.ತಿಮ್ಮಾಪುರ
ಆರ್.ಬಿ.ತಿಮ್ಮಾಪುರ   

ರಬಕವಿ ಬನಹಟ್ಟಿ: ‘ಬರ ಪರಿಸ್ಥಿತಿಯ ಬಗ್ಗೆ ಪ್ರಧಾನಿ ಮೋದಿ ಅವರಿಗೆ ತಿಳಿಸಲು ನಾಲ್ಕು ಬಾರಿ ಹೋದರೂ ಅವರು ನಮ್ಮ ಸಚಿವರ ಭೇಟಿಗೆ ಅವಕಾಶ ನೀಡಲಿಲ್ಲ. ಬಿಜೆಪಿ ನಾಯಕರು ಅಂಕಿ ಸಂಖ್ಯೆಗಳು ಸರಿಯಿಲ್ಲ ಎಂಬ ಸಣ್ಣತನದ ಮಾತುಗಳನ್ನು ಆಡುತ್ತಿದ್ಧಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹರಿ ಹಾಯ್ದರು.

ಇಲ್ಲಿನ ನಗರಸಭೆಯ ಸಭಾ ಭವನದಲ್ಲಿ ಸೋಮವಾರ ಬರ ಪರಿಸ್ಥಿತಿ ಅಧ್ಯಯನ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ನಮ್ಮ ಸಂಸದರು ಬರ ಪರಿಸ್ಥಿತಿಯ ಬಗ್ಗೆ ಪ್ರಧಾನಿಗೆ ಮನವರಿಕೆ ಮಾಡುತ್ತಿಲ್ಲ. ರಾಜ್ಯದ ರೈತರ ಪರಿಸ್ಥಿತಿಯ ಕುರಿತು ಅವರ ಹತ್ತಿರ ಮಾತನಾಡುವ ಶಕ್ತಿ ಇಲ್ಲದಂತಾಗಿದೆ. ಇಷ್ಟು ಅಶಕ್ತ ಸಂಸದರನ್ನು ಮತ್ತು ರಾಜ್ಯ ಬಿಜೆಪಿ ನಾಯಕರನ್ನು ನಾನು ಇದುವರೆಗೆ ನೋಡಿಲ್ಲ ಎಂದು ಹೇಳಿದರು.

ADVERTISEMENT

120 ವರ್ಷಗಳ ಹಿಂದಿನ ಬರಗಾಲ ಪರಿಸ್ಥಿತಿ ಈಗ ಬಂದಿದೆ. ಬರದ ಸಂದರ್ಭದಲ್ಲಿ ರಾಜಕಾರಣದ ಮಾತುಗಳನ್ನು ಆಡುತ್ತಿರುವುದು ಉತ್ತಮ ಬೆಳವಣಿಗೆ ಅಲ್ಲ. ದೇಶದ ಪ್ರಧಾನಿ ಮಹಾನಗರ ಪಾಲಿಕೆಗಳ ಚುನಾವಣೆಯ ಪ್ರಚಾರಕ್ಕೂ ಹೋಗುತ್ತಿದ್ದಾರೆ. ತಾವು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಪ್ರಧಾನಿ ಹೇಳುತ್ತಿಲ್ಲ. ಕೇವಲ ಕಾಂಗ್ರೆಸ್ ಸರ್ಕಾರವನ್ನು ತೆಗಳುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಧಾನಿಗೆ ಇಂಥ ಭೀಕರ ಬರಗಾಲದಲ್ಲಿ ಚುನಾವಣೆ ಮತ್ತು ಅಧಿಕಾರ ಮುಖ್ಯವಾಗಿದೆ. ಕೇಂದ್ರ ಸರ್ಕಾರ ರಾಜ್ಯದ ವಿರುದ್ಧ ವಿಮುಖ ಧೋರಣೆಯನ್ನು ತೋರುತ್ತಿದೆ. ನಾವು ಜಿಎಸ್‌ಟಿ ಹಣ ನೀಡುತ್ತಿಲ್ಲವೆ. ನಮ್ಮ ಪಾಲಿನ ಹಣವನ್ನು ನಮಗೆ ನೀಡಿ.  ರಾಜ್ಯದ ಸಚಿವರ ಭೇಟಿಗೆ ಅವಕಾಶ ನೀಡಿ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.