ಬಾದಾಮಿ: ವೀರಪುಲಿಕೇಶಿ ಗ್ರಾಮೀಣ ಆಯುರ್ವೇದ ಆಸ್ಪತ್ರೆಯಲ್ಲಿ ವೈದ್ಯರು ಇನ್ನೂರಕ್ಕೂ ಅಧಿಕ ಆಸ್ತಮಾ ರೋಗಿಗಳನ್ನು ತಪಾಸಣೆ ಮಾಡಿ ಉಚಿತವಾಗಿ ಔಷಧ ವಿತರಿಸಿದರು.
ವೀರಪುಲಿಕೇಶಿ ಗ್ರಾಮೀಣ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ, ಸಂಶೋಧನಾ ಕೇಂದ್ರ, ಹುಬ್ಬಳ್ಳಿ ಪ್ರಜ್ಞಾ ಶಿಕ್ಷಣ ಸಂಸ್ಥೆ ಮತ್ತು ಚೊಳಚಗುಡ್ಡ ನವಚೇತನ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಶುಕ್ರವಾರ ಗೌರಿಹುಣ್ಣಿಮೆ ದಿನ ರಾತ್ರಿ 12ಕ್ಕೆ ಅಮೃತವರ್ಷಿಣಿ ಸಮಯದಲ್ಲಿ ಆಸ್ತಮಾ ರೋಗಿಗಳ ತಪಾಸಣೆ ಔಷಧ ವಿತರಣೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
‘ಆಯುರ್ವೇದ ಆಸ್ಪತ್ರೆಯು ಡಾ.ಕೆ.ವೈ.ಕೃಷ್ಣಾಜಿ ಅವರು ತಯಾರಿಸಿದ ಅನುಭೂತಿ ಔಷಧವನ್ನು 29 ವರ್ಷಗಳಿಂದ ಉಚಿತವಾಗಿ ವಿತರಿಸುತ್ತ ಬಂದಿದೆ. ಆಯುರ್ವೇದ ಔಷಧದಿಂದ ಸಾವಿರಾರು ರೋಗಿಗಳು ಆಸ್ತಮಾ, ಅಲರ್ಜಿ ಮತ್ತು ದಮ್ಮು ರೋಗ ಗುಣಮುಖರಾಗಿದ್ದಾರೆ ’ ಎಂದು ಡಾ. ವೆಂಕಟೇಶ ಭಾಗವತ ಹೇಳಿದರು.
ಡಾ. ಸುರೇಶ ಅಂಕುಶ್ ಆಸ್ತಮಾ ರೋಗದ ಲಕ್ಷಣ ಮತ್ತು ಔಷಧ ಮಹತ್ವದ ಬಗ್ಗೆ ತಿಳಿಸಿದರು. ಡಾ. ಬಸವರಾಜ ಮುಲ್ಕಿಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಡಾ. ಗಿರೀಶ ದಾನಪ್ಪಗೌಡರ, ಡಾ. ಶಶಿಕಾಂತ ನಿಡಗುಂದಿ, ಡಾ. ಸೋಮಶೇಖರ್, ಡಾ. ಕವಿತಾ ಮಿಟ್ಟಲಕೋಡ ಮತ್ತು ಆಯುರ್ವೇದ ಮಹಾವಿದ್ಯಾಲಯದ ವೈದ್ಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.