ADVERTISEMENT

ಶಾಸನ ಚರಿತ್ರೆ ಸೃಷ್ಠಿಸುವ ಆಕರ: ಡಿ.ವಿ.ಪರಮಶಿವಮೂರ್ತಿ

ಹುನಗುಂದ ತಾಲ್ಲೂಕಿನ ಶಾಸನಗಳ ವೈಶಿಷ್ಟ್ಯ: ಉಪನ್ಯಾಸ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2024, 14:37 IST
Last Updated 29 ಅಕ್ಟೋಬರ್ 2024, 14:37 IST
ಹುನಗುಂದದ ವಿ.ಎಂ.ಎಸ್.ಆರ್.ವಸ್ತ್ರದ ಕಲಾ, ವಿಜ್ಞಾನ ಹಾಗೂ ವಿ.ಎಸ್.ಬೆಳ್ಳಿಹಾಳ ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಿ.ವಿ.ಪರಮಶಿವಮೂರ್ತಿ ಉದ್ಘಾಟಿಸಿದರು
ಹುನಗುಂದದ ವಿ.ಎಂ.ಎಸ್.ಆರ್.ವಸ್ತ್ರದ ಕಲಾ, ವಿಜ್ಞಾನ ಹಾಗೂ ವಿ.ಎಸ್.ಬೆಳ್ಳಿಹಾಳ ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಿ.ವಿ.ಪರಮಶಿವಮೂರ್ತಿ ಉದ್ಘಾಟಿಸಿದರು   

ಹುನಗುಂದ: ಶಾಸನಗಳು ಚರಿತ್ರೆಯನ್ನು ಸೃಷ್ಠಿಸುವ ಆಕರಗಳಾಗಿವೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಿ.ವಿ.ಪರಮಶಿವಮೂರ್ತಿ ಹೇಳಿದರು.

ಮಂಗಳವಾರ ಪಟ್ಟಣದ ವಿ.ಎಂ.ಎಸ್.ಆರ್.ವಸ್ತ್ರದ ಕಲಾ, ವಿಜ್ಞಾನ ಹಾಗೂ ವಿ.ಎಸ್.ಬೆಳ್ಳಿಹಾಳ ವಾಣಿಜ್ಯ ಕಾಲೇಜಿನ ಇತಿಹಾಸ ವಿಭಾಗ ಮತ್ತು ಕನ್ನಡ ವಿಶ್ವವಿದ್ಯಾಲಯದ ಶಾಸನಶಾಸ್ತ್ರ ವಿಭಾಗಗಳ ಆಶ್ರಯದಲ್ಲಿ ಹುನಗುಂದ ತಾಲ್ಲೂಕಿನ ಶಾಸನಗಳ ವೈಶಿಷ್ಟ್ಯಗಳು ಎಂಬ ವಿಷಯದ ಕುರಿತು ಆಯೋಜಿಸಿದ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಉನ್ನತ ಶಿಕ್ಷಣವನ್ನು ಹೇಗೆ ಕಲಿಸಬೇಕು ಎಂಬುದು ಮುಖ್ಯವಲ್ಲ. ಎಂತಹ ಪರಿಸರದಲ್ಲಿ ಕಲಿಸಬೇಕು ಎಂಬುದು ಮುಖ್ಯ. ಸಮಾಜಕ್ಕೆ ಒಳ್ಳೆ ಕೆಲಸ ಮಾಡುವ ಸಾಧಕರು ಮಾದರಿಯಾಗಬೇಕು. ಅದನ್ನು ವಿದ್ಯಾರ್ಥಿಗಳು ಅರಿತುಕೊಂಡು ಬದುಕಬೇಕು ಹಾಗೂ ನಾವು ಮಾಡುವ ತಪ್ಪುಗಳನ್ನು ತಿದ್ದಿಕೊಳ್ಳಬೇಕು ಎಂಬುದನ್ನು ಕಲಿಸುವುದೇ ಚರಿತ್ರೆ ಎಂದು ಹೇಳಿದರು.

ADVERTISEMENT

ಧಾರವಾಡದ ಶಿಕ್ಷಣ ತಜ್ಞ ಎಸ್.ಕೆ.ಕೊಪ್ಪ ಉಪನ್ಯಾಸ ನೀಡಿ, ಶಾಸನಗಳು ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ ಮೌಲ್ಯಗಳನ್ನು ತಿಳಿಸುವ ಆಕರಗಳು ಅವುಗಳನ್ನು ಸರಿಯಾಗಿ ಕಾಪಾಡಿಕೊಂಡು ಬರುವ ಜವಾಬ್ದಾರಿ ಪ್ರತಿಯೊಬ್ಬರದಾಗಿರಬೇಕು. ಹುನಗುಂದ ತಾಲ್ಲೂಕಿನ 19 ಗ್ರಾಮಗಳಲ್ಲಿ ಶಾಸನಗಳು ಲಭ್ಯವಾಗಿದ್ದು, ಪ್ರತಿಯೊಂದು ಶಾಸನವು ತನ್ನದೇ ಆದ ವೈವಿಧ್ಯತೆ ಒಳಗೊಂಡಿವೆ. ಅವುಗಳನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಸಾನಿಧ್ಯ ವಹಿಸಿದ್ದ ಇಳಕಲ್‌ದ ಚಿತ್ತರಗಿ ಸಂಸ್ಥಾನಮಠ ಗುರುಮಹಾಂತ ಸ್ವಾಮೀಜಿ ಮಾತನಾಡಿ, ಇತಿಹಾಸ ಸಾರುವ ಶಾಸನ, ಸ್ಮಾರಕ ಕುಳ್ಳು ಕಟ್ಟಿಗೆಗಳಿಂದ ತುಂಬಿಕೊಂಡಿದ್ದು, ಇತಿಹಾಸವನ್ನು ಮುಚ್ಚಿಹಾಕುತ್ತಿವೆ. ಅವುಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಅರಿತುಕೊಂಡು ತಮ್ಮ ಗ್ರಾಮಗಳಲ್ಲಿರುವ ಅಂತಹ ಶಾಸನಗಳನ್ನು ತಜ್ಞರ ಗಮನಕ್ಕೆ ತಂದು ರಕ್ಷಿಸಿ ನಾಡಿನ ಇತಿಹಾಸ ಉಳಿಸುವ ಕೆಲಸಕ್ಕೆ ಮುಂದಾಗಬೇಕು ಎಂದು ಹೇಳಿದರು.

ಶಿರೂರು ಮಹಾಂತತೀರ್ಥದ ಬಸವಲಿಂಗ ಸ್ವಾಮೀಜಿ, ವಿಜಯಮಹಾಂತೇಶ್ವರ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಡಾ.ಮಹಾಂತೇಶ ಕಡಪಟ್ಟಿ ಇದ್ದರು. ಪ್ರಾಚಾರ್ಯೆ ಶಶಿಕಲಾ ಮಠ ಅತಿಥಿಗಳನ್ನು ಸ್ವಾಗತಿಸಿ ಕಾಲೇಜು ಬೆಳೆದು ಬಂದ ರೀತಿಯನ್ನು ಪರಿಚಯಿಸಿದರು.

ಕನ್ನಡ ವಿಶ್ವವಿದ್ಯಾಲಯದ ಶಾಸನಶಾಸ್ತ್ರ ವಿಭಾಗದ ಮುಖ್ಯಸ್ಥ ಅಮರೇಶ ಯತಗಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಕ್ಷಿತಾ ಆಲೂರ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಲೆಫ್ಟಿನೆಂಟ್ ಎಸ್.ಬಿ.ಚಳಗೇರಿ ಅತಿಥಿಗಳನ್ನು ಪರಿಚಯಿಸಿದರು. ಡಾ.ಎಸ್.ಆರ್.ನಾಗಣ್ಣವರ ವಂದಿಸಿದರು.

ಹುನಗುಂದದ ವಿ .ಎಂ.ಎಸ್.ಆರ್.ವಸ್ತ್ರದ ಕಲಾ ವಿಜ್ಞಾನ ಹಾಗೂ ವಿ.ಎಸ್.ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯ ದಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಿ.ವಿ.ಪರಮಶಿವಮೂರ್ತಿ ಮಾತನಾಡಿದರು
ಚರಿತ್ರೆ ಸಾರಿ ಹೇಳುವ ಶಾಸನ ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕು. ನಮ್ಮ ಜೀವನ ತಿದ್ದುವ ವಸ್ತುಗಳು ನಮ್ಮ ಸುತ್ತಲಲ್ಲಿಯೇ ಇವೆ ಅವುಗಳನ್ನು ಕಲಿಯುವ ವ್ಯವಧಾನ ಮಕ್ಕಳು ಬೆಳೆಸಿಕೊಳ್ಳಬೇಕು
ಡಿ.ವಿ.ಪರಮಶಿವಮೂರ್ತಿ ಕುಲಪತಿ ಹಂಪಿ ವಿವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.