ADVERTISEMENT

ತೇರದಾಳ | ರೈತರಿಂದ ಹೆಚ್ಚಿನ ಹಣ ವಸೂಲಿ: ಕಂಪ್ಯೂಟರ್ ಆಪರೇಟರ್ ಪೊಲೀಸರ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 16:06 IST
Last Updated 9 ಜುಲೈ 2024, 16:06 IST
ತೇರದಾಳದ ವಿಶೇಷ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿದ ಉಪವಿಭಾಗಾಧಿಕಾರಿ ಸಂತೋಷ ಕಾಮಗೊಂಡ ಹಾಗೂ ಎಡಿಎಲ್ಆರ್ ರವಿಕುಮಾರ ಹಾದಿಮನಿ ಆಪರೇಟರ್ ಸುನೀಲ್ ಬಳಸುತ್ತಿದ್ದ ಕಂಪ್ಯೂಟರ್‌ ಅನ್ನು ಪರಿಶೀಲಿಸಿದರು
ತೇರದಾಳದ ವಿಶೇಷ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿದ ಉಪವಿಭಾಗಾಧಿಕಾರಿ ಸಂತೋಷ ಕಾಮಗೊಂಡ ಹಾಗೂ ಎಡಿಎಲ್ಆರ್ ರವಿಕುಮಾರ ಹಾದಿಮನಿ ಆಪರೇಟರ್ ಸುನೀಲ್ ಬಳಸುತ್ತಿದ್ದ ಕಂಪ್ಯೂಟರ್‌ ಅನ್ನು ಪರಿಶೀಲಿಸಿದರು   

ತೇರದಾಳ: ಇಲ್ಲಿಯ ವಿಶೇಷ ತಹಶೀಲ್ದಾರ್ ಕಚೇರಿಯಲ್ಲಿ ರೈತರ ಜಮೀನುಗಳ ಮೋಜಣಿ ಅರ್ಜಿಗೆ ಹೆಚ್ಚಿನ ಹಣ ಪಡೆಯುತ್ತಿದ್ದ ಗುತ್ತಿಗೆ ಆಧಾರಿತ ಕಂಪ್ಯೂಟರ್ ಆಪರೇಟರ್ ಅನ್ನು ಮೇಲಧಿಕಾರಿಗಳು ಪೊಲೀಸರಿಗೆ ಒಪ್ಪಿಸಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.

ಜಮಖಂಡಿ ತಾಲ್ಲೂಕಿನ ಠಕ್ಕೋಡ ಗ್ರಾಮದ ಸುನೀಲ ಗಿರಿಜಾಬಾಯಿ ಹರಿಜನ (37) ಪೊಲೀಸರ ವಶದಲ್ಲಿರುವ ಸಿಬ್ಬಂದಿ.

ಜಮಖಂಡಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೊಂಡ ಹಾಗೂ ಭೂ ಮಾಪನ ಲೆಕ್ಕಪರಿಶೋಧಕ ಸಹಾಯಕ ನಿರ್ದೇಶಕ ರವಿಕುಮಾರ ಹಾದಿಮನಿ ಅವರು ರೈತರ ದೂರಿನ ಮೇರೆಗೆ ಮಂಗಳವಾರ ಇಲ್ಲಿಯ ವಿಶೇಷ ತಹಶೀಲ್ದಾರ್ ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿದರು. ಸುನೀಲ ಹರಿಜನ ಆಪರೇಟ್ ಮಾಡುವ ಕಂಪ್ಯೂಟರ್ ಪರಿಶೀಲನೆ ನಡೆಸಿದಾಗ ಆತ ರೈತರಿಗೆ ಮೋಸ ಮಾಡುವ ಬಗ್ಗೆ ಖಚಿತ ಮಾಹಿತಿ ದೊರೆಯಿತು.

ADVERTISEMENT

ಹೇಗೆ ವಂಚಿಸುತ್ತಿದ್ದ: ರೈತರ ಜಮೀನುಗಳ ಮೋಜಣಿ ಮಾಡಲು ಎಕರೆಗೆ ಇಷ್ಟು ಹಣ ಸರ್ಕಾರಕ್ಕೆ ಪಾವತಿಸಬೇಕೆಂಬದು ನಿಯಮ ಇದೆ ಹೇಳಿ ಸುನೀಲ, ರೈತರು ಸರ್ಕಾರಕ್ಕೆ ₹ 3000 ಪಾವತಿಸಬೇಕಿದ್ದರೆ ರೈತರಿಂದ ₹ 5000 ಹಣ ಪಡೆಯುತ್ತಿದ್ದ. ಸರ್ಕಾರಕ್ಕೆ ₹ 3000 ಪಾವತಿಸಿ ಬಾಕಿ ಹಣ ಲಪಟಾಯಿಸುತ್ತಿದ್ದ. ಹಲವು ದಿನಗಳಿಂದ ನಡೆಯುತ್ತಿದ್ದ ಈ ಮೋಸದ ಬಗ್ಗೆ ಕೆಲ ರೈತರು ಉಪವಿಭಾಗಾಧಿಕಾರಿ ಹಾಗೂ ಎಡಿಎಲ್ಆರ್ ಅವರಿಗೆ ದೂರು ನೀಡಿದ್ದರು.

ರಬಕವಿ-ಬನಹಟ್ಟಿ ತಹಶೀಲ್ದಾರ್ ಗಿರೀಶ ಸ್ವಾದಿ, ತೇರದಾಳ ತಹಶೀಲ್ದಾರ್ ವಿಜಯಕುಮಾರ ಕಡಕೋಳ, ಉಪತಹಶೀಲ್ದಾರ್ ಶ್ರೀಕಾಂತ ಮಾಯನ್ನವರ, ಕಂದಾಯ ನಿರೀಕ್ಷಕ ಪಿ.ಆರ್. ಮಠಪತಿ, ಗ್ರಾಮ ಲೆಕ್ಕಾಧಿಕಾರಿ ರೇವಣಸಿದ್ದಯ್ಯ ಕಾಮತೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.