ADVERTISEMENT

ಉತ್ತರ ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ ಹೆಚ್ಚು

ಎಂಟು ತಿಂಗಳಿನಲ್ಲಿ ರಾಜ್ಯದಲ್ಲಿ 456, ಉ.ಕ.ದಲ್ಲಿ 259

ಬಸವರಾಜ ಹವಾಲ್ದಾರ
Published 19 ಡಿಸೆಂಬರ್ 2023, 0:30 IST
Last Updated 19 ಡಿಸೆಂಬರ್ 2023, 0:30 IST
ಬಾಗಲಕೋಟೆ ಜಿಲ್ಲೆಯಲ್ಲಿ ಹರಿಯುವ ಮಲಪ್ರಭಾ ನದಿ ಬತ್ತಿರುವುದು
ಬಾಗಲಕೋಟೆ ಜಿಲ್ಲೆಯಲ್ಲಿ ಹರಿಯುವ ಮಲಪ್ರಭಾ ನದಿ ಬತ್ತಿರುವುದು   

ಬಾಗಲಕೋಟೆ: ರಾಜ್ಯದಲ್ಲಿ ಬರದ ತೀವ್ರತೆ ಹೆಚ್ಚಾಗಿದ್ದು, ಬೆಳೆ ಹಾನಿ, ಸಾಲಬಾಧೆ ಇತ್ಯಾದಿ ಕಾರಣಗಳಿಗಾಗಿ 456 ರೈತರು ಈ ವರ್ಷ ಏಪ್ರಿಲ್‌ನಿಂದ ನವೆಂಬರ್‌ವರೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಆಗಿರುವ ರೈತರ ಆತ್ಮಹತ್ಯೆ ಪ್ರಕರಣಗಳ ಪೈಕಿ ಉತ್ತರ ಕರ್ನಾಟಕದಲ್ಲಿ 259 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಿತ್ತೂರು ಕರ್ನಾಟಕದಲ್ಲಿ 179 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಒಟ್ಟು ಪ್ರಕರಣಗಳಲ್ಲಿ 406 ಪ್ರಕರಣಗಳ ದಾಖಲೆ ಪರಿಶೀಲಿಸಲಾಗಿದೆ. ಅವುಗಳಲ್ಲಿ 50 ಪ್ರಕರಣಗಳಲ್ಲಿ ಸೂಕ್ತ ದಾಖಲೆಗಳಿಲ್ಲದ ಕಾರಣ ಕೃಷಿ ಇಲಾಖೆ ಅಧಿಕಾರಿಗಳು ತಿರಸ್ಕರಿಸಿದ್ದಾರೆ. ‘ದಾಖಲೆಗಳ ಪರಿಶೀಲನೆ ನಂತರ ಅರ್ಹವಾಗಿರುವ 354 ಪ್ರಕರಣಗಳಲ್ಲಿ, 321 ರೈತರ ಕುಟುಂಬದ ಸದಸ್ಯರಿಗೆ ₹5 ಲಕ್ಷ ಪರಿಹಾರ ವಿತರಣೆ ಮಾಡಲಾಗಿದೆ. 33 ರೈತರ ಕುಟುಂಬದವರಿಗೆ ಪರಿಹಾರ ವಿತರಿಸಬೇಕಿದೆ’ ಎಂದು ಕೃಷಿ ಇಲಾಖೆ ತಿಳಿಸಿದೆ.

ಬಾಕಿ ಉಳಿದಿರುವ 52 ಪ್ರಕರಣಗಳಲ್ಲಿ 25 ಪ್ರಕರಣಗಳಲ್ಲಿ ಮರಣೋತ್ತರ ವರದಿ ಬರಬೇಕಿದೆ. ಉಳಿದ 27 ಪ್ರಕರಣಗಳಲ್ಲಿ ಕುಟುಂಬದ ಸದಸ್ಯರು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಿದೆ.

ADVERTISEMENT

ಬರದ ಬಾಧೆ: ರಾಜ್ಯದ 236 ತಾಲ್ಲೂಕುಗಳ ಪೈಕಿ 223 ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ. ಅದರಲ್ಲಿ 196 ತಾಲ್ಲೂಕುಗಳು ತೀವ್ರ ಬರ ಪೀಡಿತವಾಗಿವೆ. ಬೆಳೆ ಹಾನಿಯಿಂದಾಗಿ ರಾಜ್ಯದಲ್ಲಿ ₹35,162 ಕೋಟಿಯಷ್ಟು ನಷ್ಟವಾಗಿದೆ. ಎನ್‌ಡಿಆರ್‌ಎಫ್‌ ಮಾರ್ಗಸೂಚಿಯಂತೆ ₹18,171 ಕೋಟಿ ಪರಿಹಾರವನ್ನು ಕೇಂದ್ರದಿಂದ ಕೋರಲಾಗಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಮಲಪ್ರಭಾ, ಘಟಪ್ರಭಾ, ಕೃಷ್ಣಾ ನದಿಗಳು ಹರಿಯುತ್ತವೆ. ಆದರೆ, ಮೂರು ನದಿಗಳಲ್ಲಿ ನೀರಿನ ಹರಿವು ನಿಂತಿದ್ದು, ಜಾನುವಾರುಗಳಿಗೆ, ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಗಳಿಗೂ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾಗಲಿದೆ.

‘ಬಾಗಲಕೋಟೆ ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನು ಬರ ಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದೆ. ₹1,997 ಕೋಟಿಯಷ್ಟು ಮೌಲ್ಯದ ಬೆಳೆ ನಷ್ಟವಾಗಿದೆ. ಪರಿಹಾರಕ್ಕಾಗಿ ಜಿಲ್ಲೆಗೆ ಭೇಟಿ ನೀಡಿದ್ದ ಕೇಂದ್ರ ತಂಡಕ್ಕೆ ಮನವಿ ಸಲ್ಲಿಸಲಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಲಕ್ಷ್ಮಣ ಕಳ್ಳೆನ್ನವರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.