ADVERTISEMENT

ಬಾಗಲಕೋಟೆ | ಆರೋಗ್ಯ, ಮಹಿಳಾ ಇಲಾಖೆ ವೈಫಲ್ಯ ಬಿಚ್ಚಿಟ್ಟ ಭ್ರೂಣಹತ್ಯೆ

ವಿವಿಧ ಇಲಾಖೆಗಳ ನಡುವೆ ಸಮನ್ವಯದ ಕೊರತೆ

ಬಸನವಾರ ಹವಾಲ್ದಾರ
Published 12 ಜೂನ್ 2024, 5:33 IST
Last Updated 12 ಜೂನ್ 2024, 5:33 IST

ಬಾಗಲಕೋಟೆ: ಬಾಲ್ಯ ವಿವಾಹ, ದೇವದಾಸಿ ಪದ್ಧತಿ, ಏಡ್ಸ್/ಎಚ್‌.ಐ.ವಿ ಪ್ರಕರಣಗಳಿಂದಾಗಿ ಸುದ್ದಿಯಾಗುತ್ತಿದ್ದ ಬಾಗಲಕೋಟೆ ಜಿಲ್ಲೆ ಈಗ ಭ್ರೂಣಹತ್ಯೆ ಪ್ರಕರಣದಿಂದಾಗಿ ಮತ್ತೊಮ್ಮೆ ಸುದ್ದಿಯಾಗಿದೆ. ಇವುಗಳನ್ನು ತಡೆಯಬೇಕಾಗಿದ್ದ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ವೈಫಲ್ಯ ಎದ್ದು ಕಾಣುತ್ತಿದೆ.

ಜಿಲ್ಲೆಯ ಮಹಾಲಿಂಗಪುರದಲ್ಲಿ ಬೆಳಕಿಗೆ ಬಂದಿರುವ ಭ್ರೂಣಹತ್ಯೆ ಪ್ರಕರಣದ ಆರೋಪಿ ಮೂರನೇ ಬಾರಿ ಅದೇ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾಳೆ ಎಂಬುದು ಅಚ್ಚರಿ ಮೂಡಿಸುವ ಸಂಗತಿಯಾಗಿದೆ. ಅದರಲ್ಲೂ ಆರೋಪಿ ಸಿಕ್ಕಿಬಿದ್ದಿದ್ದು ಇಲಾಖೆಯ ಅಧಿಕಾರಿಗಳ ಶ್ರಮದಿಂದ ಅಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ.

ಹಿಂದಿನ ಬಾರಿಯೂ ಜನರೇ ದೂರು ನೀಡಿದಾಗ ಆರೋಪಿ ಸಿಕ್ಕಿಬಿದ್ದಿದ್ದಳು. ಈ ಬಾರಿಯೂ ಭ್ರೂಣಹತ್ಯೆ ಮಾಡಿಕೊಂಡ ಮಹಿಳೆ ಮೃತಳಾಗಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಹಾಗಾದರೆ, ಆರೋಗ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ಏನು ಮಾಡುತ್ತಿವೆ ಎಂಬ ಪ್ರಶ್ನೆ ಎದುರಾಗುತ್ತದೆ.

ADVERTISEMENT

ಎರಡನೇ ಬಾರಿಗೆ ಭ್ರೂಣಹತ್ಯೆ ಪ್ರಕರಣದಲ್ಲಿ ಆರೋಪಿ ಮನೆ ಮೇಲೆ ದಾಳಿ ನಡೆಸುವ ಆರೋಗ್ಯ ಇಲಾಖೆ ಅಧಿಕಾರಿಗಳು, ಮನೆಯ ಮುಂಭಾಗಲಿಗಷ್ಟೇ ಬೀಗ ಹಾಕಿಕೊಂಡು ಬರುತ್ತಾರೆ. ಆದರೆ, ಹಿಂಬಾಗಿಲು ಇರುವುದನ್ನು ಪರಿಶೀಲಿಸುವುದೇ ಇಲ್ಲ. ಅದನ್ನು ಹಲವಾರು ತಿಂಗಳುಗಳಿಂದ ಭ್ರೂಣಹತ್ಯೆಗೆ ಬಳಸುತ್ತಿದ್ದರೂ ಗೊತ್ತಾಗೇ ಇಲ್ಲ ಎಂಬುದು ಅಧಿಕಾರಿಗಳ ಕಾರ್ಯವೈಖರಿಗೆ ಕನ್ನಡಿಯಾಗಿದೆ.

ಗರ್ಭಪೂರ್ವ ಮತ್ತು ಪ್ರಸವಪೂರ್ವ ಪತ್ತೆ ಹೆಚ್ಚುವ (ಲಿಂಗ ಆಯ್ಕೆ ನಿಷೇಧ) ಕಾಯ್ದೆ ಜಾರಿಗೊಳಿಸಿ, ಭ್ರೂಣಹತ್ಯೆ ತಡೆಗೆ ಸಮಿತಿಯೊಂದಿರುತ್ತದೆ. ಆಗಾಗ ಸಭೆಗಳನ್ನು ನಡೆಸಿ, ಅವರಿಗೆ ತಿಳಿವಳಿಕೆ ಮಾಡಲಾಗುತ್ತದೆ. ಜನರಲ್ಲಿಯೂ ಈ ಬಗ್ಗೆ ಜಾಗೃತಿ ಮೂಡಿಸಲು ತಿಳಿಸಲಾಗುತ್ತದೆ. ಆದರೆ, ಇದ್ಯಾವುದೂ ಕಾರ್ಯರೂಪಕ್ಕೆ ಬಂದೇ ಇಲ್ಲ.

ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರಿಗೆ ಭ್ರೂಣಹತ್ಯೆ ತಡೆಯುವ ಕುರಿತು ಕಾರ್ಯಾಗಾರ ಮಾಡಲಾಗಿದೆ. ಗ್ರಾಮದಲ್ಲಿ, ಓಣಿಯಲ್ಲಿ ನಡೆಯುವ ಸಂಗತಿಗಳ ಅರಿವು ಇವರಿಗೆ ಇದ್ದೇ ಇರುತ್ತದೆ. ಆದರೆ, ಅಧಿಕಾರಿಗಳು ಮಾಹಿತಿಯನ್ನು ಗೋಪ್ಯವಾಗಿಟ್ಟು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ನೀಡಿದರೆ ಮಾತ್ರ ಮಾಹಿತಿ ನೀಡುತ್ತಾರೆ. ಇಲ್ಲದಿದ್ದರೆ, ಮೌನದ ಮೊರೆ ಹೋಗುತ್ತಾರೆ. ಇಲ್ಲಿಯೂ ಅದೇ ಆಗಿದೆ.

ಕಚೇರಿ ಬಿಟ್ಟು ಅಧಿಕಾರಿಗಳು ಹೊರಗೆ ಬರುವುದಿಲ್ಲ. ಅನಿರೀಕ್ಷಿತ ದಾಳಿಗಳನ್ನು ನಡೆಸುವುದಿಲ್ಲ. ಗರ್ಭಿಣಿಯಾದ ಮಹಿಳೆ ಕಡ್ಡಾಯವಾಗಿ ಅಂಗನವಾಡಿಯಲ್ಲಿ ಹೆಸರು ನೋಂದಾಯಿಸಿ ಮಾತೃ ಯೋಜನೆಯ ಲಾಭ ಪಡೆಯುತ್ತಾಳೆ. ಅಂತಹ ಮಹಿಳೆಗೆ ಗರ್ಭಪಾತವಾಗಿದ್ದರೆ, ಹೇಗಾಯಿತು, ಎಲ್ಲಿ ಮಾಡಿಸಿಕೊಂಡರು ಎಂಬುದನ್ನು ಗಮನಿಸಿದರೆ ಸಾಕು ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತವೆ.

ಸಾರ್ವಜನಿಕರೊಂದಿಗೆ ಅಧಿಕಾರಿಗಳ ಸಂಪರ್ಕ ದಿನದಿಂದ ದಿನಕ್ಕೆ ಕಡಿದು ಹೋಗುತ್ತಿದೆ. ಜಾಗೃತಿ ಶಿಬಿರ, ಜಾಥಾಗಳು ಅಧಿಕಾರಿಗಗಳು, ಶಾಲಾ–ಕಾಲೇಜಿನ ವಿದ್ಯಾರ್ಥಿಗಳು, ಕ್ರೀಡಾ ಇಲಾಖೆಯ ಕ್ರೀಡಾಪಟುಗಳಿಗೆ ಸೀಮಿತವಾಗಿವೆ. ಅವುಗಳ ನೆಲೆಗಳನ್ನು ವಿಸ್ತರಿಸುವ ಅವಶ್ಯಕತೆ ಇದೆ. ಈ ಕುರಿತು ಪೊಲೀಸ್ ಇಲಾಖೆ ಮೆಟ್ಟಿಲು ಏರುವಂತಹ ವಾತಾವರಣವಿಲ್ಲ. ಮಹಿಳೆ ಮೃತಳಾಗಿರುವುದರಿಂದ ಬೆಳಕಿಗೆ ಬಂದಿರುವ ಪ್ರಕರಣ ಒಂದು, ಬೆಳಕಿಗೆ ಬರದಿರುವವು ಎಷ್ಟಿವೆಯೋ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.