ADVERTISEMENT

ಬಾಗಲಕೋಟೆ: ಯುದ್ದೋಪಾದಿಯಲ್ಲಿ ಕಾರ್ಯನಿರ್ವಹಿಸಲು ಜಿಲ್ಲಾಧಿಕಾರಿ ಸೂಚನೆ

ಪ್ರವಾಹ ಉಂಟಾದಲ್ಲಿ ಸ್ಥಳಾಂತರಕ್ಕೆ ತತಕ್ಷಣ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 12:47 IST
Last Updated 25 ಜುಲೈ 2024, 12:47 IST
ಬಾಗಲಕೋಟೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ವಿಪತ್ತು ನಿರ್ವಹಣಾ ಸಭೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ.ಅಧ್ಯಕ್ಷತೆಯಲ್ಲಿ ಜರುಗಿತು. ಅಮರನಾಥ ರೆಡ್ಡಿ, ಶಿನ್ನಾಳಕರ, ಶಶಿಧರ ಕುರೇರ ಇದ್ದರು.
ಬಾಗಲಕೋಟೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ವಿಪತ್ತು ನಿರ್ವಹಣಾ ಸಭೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ.ಅಧ್ಯಕ್ಷತೆಯಲ್ಲಿ ಜರುಗಿತು. ಅಮರನಾಥ ರೆಡ್ಡಿ, ಶಿನ್ನಾಳಕರ, ಶಶಿಧರ ಕುರೇರ ಇದ್ದರು.   

ಬಾಗಲಕೋಟೆ: ಜಿಲ್ಲೆಯ ಕೃಷ್ಣೆ, ಮಲಪ್ರಭಾ ಹಾಗೂ ಘಟಪ್ರಭಾ ನದಿಗಳಲ್ಲಿ ಹರಿಯುತ್ತಿರುವ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪ್ರವಾಹ ಭೀತಿ ಉಂಟಾದಲ್ಲಿ ಗ್ರಾಮಸ್ಥರನ್ನು ಸ್ಥಳಾಂತರಿಸಲು ತತಕ್ಷಣ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ ಜಾನಕಿ ಕೆ.ಎಂ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈಗಾಗಲೇ ಆಲಮಟ್ಟಿ ಜಲಾಶಯದಿಂದ 2.75 ಲಕ್ಷ ಕ್ಯುಸೆಕ್ ನೀರು ಹರಿಬಿಡಲಾಗುತ್ತಿದೆ. ಈ ಪ್ರಮಾಣ ಹೆಚ್ಚಾಗುವ ಸಂಭವವಿದೆ. ಬಾಧಿತಗೊಳ್ಳುವ ಗ್ರಾಮಗಳ ಜನ ಹಾಗೂ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಅಧಿಕಾರಿಗಳು ಸನ್ನದ್ಧರಾಗಿರಬೇಕು ಎಂದು ತಿಳಿಸಿದರು.

ADVERTISEMENT

ಹಿಪ್ಪರಗಿ ಜಲಾಶಯದಿಂದ 1.67 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದೆ. ಈ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇರುವುದರಿಂದ ತೊಂದರೆಗೆ ಒಳಗಾಗುವ ಮುತ್ತೂರು, ಸೂರಪಾಲಿ, ತುಬಚಿ ಹಾಗೂ ಕಂಕಣವಾಡಿ ನಡುಗಡ್ಡೆ ಗ್ರಾಮಗಳ ಸ್ಥಳಾಂತರಕ್ಕೆ ಗ್ರಾಮ ಹಾಗೂ ತಾಲ್ಲೂಕು ನಿರ್ವಹಣಾ ತಂಡ ಸಕಲ ರೀತಿಯಿಂದ ಸನ್ನದ್ದರಾಗಿ ಯುದ್ದೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದ ಅವರು, ಪ್ರವಾಹ ನಿರ್ವಹಣೆಗೆ ಸ್ಥಾಪಿಸಲಾದ ಕಾಳಜಿ ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳು ಇರುವಂತೆ ನೋಡಿಕೊಳ್ಳಬೇಕು. ಜಾನುವಾರುಗಳಿಗೂ ಸಹ ಮೂಲಸೌಲಭ್ಯ ಕಲ್ಪಿಸಬೇಕು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ, ಪ್ರವಾಹ ಸಂದರ್ಭದಲ್ಲಿ ಶಾಲಾ-ಕಾಲೇಜು ಮಕ್ಕಳಿಗೆ, ಗರ್ಭಿಣಿಯರಿಗೆ ಹಾಗೂ ಹಿರಿಯರಿಗೆ ಯಾವುದೇ ರೀತಿಯ ಅನಾಹುತವಾಗದಂತೆ ಎಚ್ಚರಿಕೆ ವಹಿಸಬೇಕು. ಕಾಳಜಿ ಕೇಂದ್ರಗಳಲ್ಲಿನ ಸೌಲಭ್ಯ ಉತ್ತಮವಾಗಿರುವಂತೆ ನೋಡಿಕೊಳ್ಳಬೇಕು. ಕೃಷಿ, ತೋಟಗಾರಿಕೆ ಇಲಾಖೆಗಳು ಆಗುವ ಬೆಳೆಹಾನಿಯ ಬಗ್ಗೆ ಮಾಹಿತಿ ಕಲೆ ಹಾಕಬೇಕು. ಜಾನುವಾರುಗಳಿಗೆ ಎಲ್ಲ ರೀತಿಯ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು ಎಂದರು.

ಸ್ಥಳೀಯ ಜನರು ನದಿ ಹತ್ತಿರ ಹೋಗಬಾರದು. ಮೀನುಗಾರರು ಮೀನು ಹಿಡಿಯಲು ಹೋಗದಂತೆ ನೋಡಿಕೊಳ್ಳಬೇಕು. ಪ್ರವಾಹದ ಭೀತಿಯ ಪ್ರದೇಶಗಳಲ್ಲಿರುವ ಶಾಲೆಗಳಿಗೆ ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ರಜೆ ಘೋಷಿಸಬೇಕು. ಅಧಿಕಾರಿಗಳ ಮೊಬೈಲಗಳನ್ನು ಚಾಲು ಸ್ಥಿತಿಯಲ್ಲಿಟ್ಟಿರಬೇಕು. ಅನುಮತಿ ಇಲ್ಲದೇ ಕೇಂದ್ರಸ್ಥಾನ ಬಿಡಬಾರದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಎನ್.ವೈ.ಬಸರಿಗಿಡದ, ಉಪವಿಭಾಗಾಧಿಕಾರಿಗಳಾದ ಸಂತೋಷ ಜಗಲಾಸರ ಹಾಗೂ ಶ್ವೇತಾ ಬೀಡಿಕರ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಕಳ್ಳೆನ್ನವರ, ತೋಟಗಾರಿಕೆ ಉಪನಿರ್ದೇಶಕ ರವೀಂದ್ರ ಹಕಾಟೆ, ಪಶು ಇಲಾಖೆಯ ಉಪನಿರ್ದೇಶಕ ಎಸ್.ಎಚ್.ಕಳ್ಳಿಗುಡ್ಡ, ಆರೋಗ್ಯ ಇಲಾಖೆಯ ಡಾ,ಕುಸುಮಾ ಮಾಗಿ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ತಹಶೀಲ್ದಾರರು ಉಪಸ್ಥಿತರಿದ್ದರು.

ಬೇಜವಾಬ್ದಾರಿ ಬೇಡ

ಪ್ರವಾಹ ನಿರ್ವಹಣೆ ಕಾರ್ಯದಲ್ಲಿ ಬೇಜವಾಬ್ದಾರಿ ಸಲ್ಲದು. ಎಲ್ಲ ರೀತಿಯ ಸಿದ್ದತೆ ಇದ್ದರೂ ಕಾರ್ಯದಲ್ಲಿ ಲೋಪವಾಗಿ ಸಮಸ್ಯೆ ಉಂಟಾದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ತಾಲ್ಲೂಕು ಹಂತದಲ್ಲಿ ಪ್ರವಾಹ ನಿರ್ವಹಣೆಗೆ ಬೇಕಾದ ಅಗತ್ಯ ಬೋಟ್ ಸೇರಿದಂತೆ ಇತರೆ ಸಲಕರಣಗಳು ಸಜ್ಜಾಗಿರಬೇಕು. ನದಿ ತೀರದ ಗ್ರಾಮಗಳಲ್ಲಿ ತಹಶೀಲ್ದಾರ್‌ ನೋಡಲ್ ಅಧಿಕಾರಿಗಳು ಅಗ್ನಿಶಾಮಕ ಪೊಲೀಸ್ ಇಲಾಖೆ ಅಧಿಕಾರಿಗಳು ನಿರಂತರವಾಗಿ ನಿಗಾವಹಿಸಬೇಕು ಎಂದು ಸೂಚಿಸಿದರು. ಜಿಲ್ಲೆಯಲ್ಲಿ ಈಗಾಗಲೇ ಜಮಖಂಡಿ ಮತ್ತು ಮುಧೋಳ ತಾಲ್ಲೂಕು ಸೇರಿ ಒಟ್ಟು 8 ಸೇತುವೆಗಳು ಜಲಾವೃತಗೊಂಡಿದ್ದು ಸೇತುವೆ ಕಡೆ ಜನರು ಹೋಗದಂತೆ ಸುರಕ್ಷತಾ ದೃಷ್ಠಿಯಿಂದ ಬ್ಯಾರಿಕೇಡ್ ಅಳವಡಿಸಬೇಕು ನವಿಲುತೀರ್ಥ ಜಲಾಶಯ ಭರ್ತಿ ಆಗಬೇಕಾದರೆ ಇನ್ನು 4 ರಿಂದ 5 ದಿನ ಬೇಕಾಗುತ್ತದೆ. ನಂತರ ನೀರು ಬಿಡಲು ಪ್ರಾರಂಭಿಸಲಾಗುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.