ADVERTISEMENT

ಕಾಂಗ್ರೆಸ್‌ನಿಂದ ಈಗ ಬೆಲೆ ಏರಿಕೆ ಗ್ಯಾರಂಟಿ: ಎಸ್‌.ಟಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 16 ಜೂನ್ 2024, 13:44 IST
Last Updated 16 ಜೂನ್ 2024, 13:44 IST
ಶಾಂತಗೌಡ ಪಾಟೀಲ
ಶಾಂತಗೌಡ ಪಾಟೀಲ   

ಬಾಗಲಕೋಟೆ: ಪೆಟ್ರೋಲ್ ಹಾಗೂ ಡೀಸೆಲ್‌ ಬೆಲೆ ಹೆಚ್ಚಳ ಮಾಡುವ ಮೂಲಕ ರಾಜ್ಯ ಸರ್ಕಾರ ಜನರಿಗೆ ಬೆಲೆ ಏರಿಕೆ ಗ್ಯಾರಂಟಿ ನೀಡಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ ಟೀಕಿಸಿದರು. 

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಒಂದೆಡೆ ನೀಡಿ, ಬೆಲೆ ಏರಿಕೆ ಮೂಲಕ ಇನ್ನೊಂದು ಕಡೆ ಜನರಿಂದಲೇ ವಸೂಲು ಮಾಡುತ್ತಿದೆ. ಜನಸಾಮಾನ್ಯರ ಬದುಕಿಗೆ ಬರೆ ಎಳೆಯುವ ಕೆಲಸ ಮಾಡುತ್ತಿದೆ’ ಎಂದು ಆರೋಪಿಸಿದರು.

‘ಜನರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡುವುದಾಗಿ ಕಾಂಗ್ರೆಸ್ ಮೋಸ ಮಾಡುತ್ತಿದೆ. ಶಕ್ತಿ ಯೋಜನೆ ಬಿಟ್ಟರೆ ಇನ್ನುಳಿದ ಯಾವ ಯೋಜನೆಗಳೂ ರಾಜ್ಯದಲ್ಲಿ ಕೆಲಸ ಮಾಡುತ್ತಿಲ್ಲ. ಅಧಿಕಾರಕ್ಕೆ ಬಂದು ವರ್ಷದಲ್ಲಿ ₹ 95 ಸಾವಿರ ಕೋಟಿ ಸಾಲ ಮಾಡಿದೆ’ ಎಂದು ಟೀಕಿಸಿದರು.

ADVERTISEMENT

‘ಗ್ಯಾರಂಟಿ ಯೋಜನೆಗಳ ಬಗ್ಗೆ ಕಾಂಗ್ರೆಸ್ ಶಾಸಕರೇ ಅಸಮಾಧಾನ ಹೊರಹಾಕುತ್ತಿದ್ದು, ಮತ್ತೊಂದು ಕಡೆ ತಾವೇ ತಮ್ಮ ಯೋಜನೆಗಳನ್ನು ಸಮರ್ಥಿಸಿಕೊಂಡಂತೆ ನಾಟಕವಾಡುತ್ತಿದ್ದಾರೆ. ರಾಜ್ಯ ಸರ್ಕಾರ ಅಭಿವೃದ್ಧಿ ಮರೆತಿದೆ’ ಎಂದು ಆರೋಪಿಸಿದರು.

‘ಜನರ ಪೀಡಕವಾಗಿರುವ ಸ‌ರ್ಕಾರ ವಿದ್ಯುತ್ ಉಚಿತ ಎಂದು ಇನ್ನೊಂದೆಡೆ ಕೈಗಾರಿಕೆ ವಿದ್ಯುತ್ ದರ ಹೆಚ್ಚಳ ಮಾಡಿದೆ. ಇದರಿಂದ ಕೈಗಾರಿಕೆಗಳು ಮುಚ್ಚುವ ಹಂತ ತಲುಪಿದ್ದು, ನೌಕರರು ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ’ ಎಂದರು.

‘ಬರಗಾಲದ ನಂತರ ಮಳೆಯಾಗಿದೆ ಎಂದು ರೈತರು ಸಂತಸದಲ್ಲಿದ್ದಾಗ ರಸಗೊಬ್ಬರ, ಬೀಜದ ದರ ಏರಿಕೆ ಮಾಡಿ ರೈತರಿಗೆ ಹೊಡೆತ ನೀಡಿದೆ. ಸರಣಿ ಬೆಲೆ ಏರಿಕೆ ಮಾಡುತ್ತಿರುವುದನ್ನು ನೋಡಿದರೆ ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ’ ಎಂದು ದೂರಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ ಮಾತನಾಡಿ, ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಎಸ್‌ಸಿ–ಎಸ್‌ಟಿ ಸಮುದಾಯದವರು ಜಮೀನು ಖರೀದಿಸಿದರೆ ನೀಡುತ್ತಿದ್ದ ಸಹಾಯಧನ ನಿಂತು ಹೋಗಿದೆ ಎಂದು ಆರೋಪಿಸಿದರು.

ಬಿಟಿಡಿಎದಲ್ಲಿ ವ್ಯಕ್ತಿಯೊಬ್ಬರ ಆಡಳಿತ ನಡೆಯುತ್ತಿದೆ. ಭ್ರಷ್ಟಾಚಾರ ಹೆಚ್ಚಾಗಿದೆ. ಸಂತ್ರಸ್ತರ ಸಂಕಷ್ಟ ಕೇಳುವ ಕೆಲಸ ಆಗುತ್ತಿಲ್ಲ ಎಂದು ಟೀಕಿಸಿದರು.

ಜಿಲ್ಲಾ ವಕ್ತಾರ ಸತ್ಯನಾರಾಯಣ ಹೇಮಾದ್ರಿ ಮಾತನಾಡಿ, ‘ಗ್ಯಾರಂಟಿ ಆಮಿಷವೊಡ್ಡಿ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್‌ ಸರ್ಕಾರ ಈಗ ಭ್ರಷ್ಟಾಚಾರದ ಗಂಗೋತ್ರಿಯಾಗಿದೆ’ ಎಂದು ದೂರಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಯ್ಯ ಮೂಗನೂರ, ಮಾಧ್ಯಮ ಸಂಚಾಲಕ ಶಿವಾನಂದ ಸುರಪುರ ಇದ್ದರು.

ಪ್ರತಿಭಟನೆ:

ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಖಂಡಿಸಿ ಸೋಮವಾರ ಬೆಳಿಗ್ಗೆ 11.30ಕ್ಕೆ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ಬೀಳೂರು ಅಜ್ಜನವರ ಗುಡಿಯಿಂದ ಬಸವೇಶ್ವರ ವೃತ್ತದವರೆಗೆ ರ‍್ಯಾಲಿ ನಡೆಯಲಿದೆ. ಸಂಸದ ಪಿ.ಸಿ. ಗದ್ದಿಗೌಡರ ಶಾಸಕರು ಮಾಜಿ ಶಾಸಕರು ವಿಧಾನ ಪರಿಷತ್ತಿನ ಸದಸ್ಯರು ಭಾಗವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.