ADVERTISEMENT

ರಬಕವಿ ಬನಹಟ್ಟಿ: ಜಗದಾಳ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ

ವಿಶ್ವಜ ಕಾಡದೇವರ
Published 4 ಅಕ್ಟೋಬರ್ 2023, 7:19 IST
Last Updated 4 ಅಕ್ಟೋಬರ್ 2023, 7:19 IST
ರಬಕವಿ ಬನಹಟ್ಟಿ ತಾಲ್ಲೂಕಿನ ಜಗದಾಳ ಗ್ರಾಮ ಪಂಚಾಯಿತಿ ಕಾರ್ಯಾಲಯ
ರಬಕವಿ ಬನಹಟ್ಟಿ ತಾಲ್ಲೂಕಿನ ಜಗದಾಳ ಗ್ರಾಮ ಪಂಚಾಯಿತಿ ಕಾರ್ಯಾಲಯ   

ರಬಕವಿ ಬನಹಟ್ಟಿ: ವಿಳ್ಯದೆಲೆಗೆ ಪ್ರಸಿದ್ಧವಾದ ತಾಲ್ಲೂಕಿನ ಜಗದಾಳ ಗ್ರಾಮ ಪಂಚಾಯಿತಿ ಪ್ರಸ್ತುತ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪಾತ್ರವಾಗಿದೆ.

ಗ್ರಾಮವು ಸ್ವಚ್ಛತೆ, ಕಸ ವಿಲೇವಾರಿ, ಸಿ.ಸಿ. ರಸ್ತೆಗಳ ನಿರ್ಮಾಣ, ಅಂಗನವಾಡಿ ಕೇಂದ್ರಗಳಿಗೆ ಮೂಲ ಸೌಕರ್ಯಗಳ ಸೌಲಭ್ಯ, ಶುದ್ಧ ಕುಡಿಯುವ ನೀರು, ಉತ್ತಮ ಚರಂಡಿ ವ್ಯವಸ್ಥೆ ಹೊಂದಿದೆ.

ಗ್ರಾಮದಲ್ಲಿ ಪುರುಷ ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ, ಗ್ರಾಮದ ಶಾಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಕಸ ಸಂಗ್ರಹಣೆಗಾಗಿ ತೊಟ್ಟಿಗಳ ಅಳವಡಿಕೆ, ಕಸ ವಿಲೇವಾರಿ ವಾಹನದ ಮೂಲಕ ಕಸ ಸಂಗ್ರಹಣೆ, ಪ್ರತಿ ಓಣಿಯಲ್ಲಿ ಸಿ.ಸಿ ರಸ್ತೆ, ಉತ್ತಮವಾದ ಬೆಳಕಿನ ವ್ಯವಸ್ಥೆ, ನಮ್ಮ ಹೊಲ ನಮ್ಮ ರಸ್ತೆ ಯೋಜನೆಯ ಅಡಿಯಲ್ಲಿ ರಸ್ತೆಗಳ ನಿರ್ಮಾಣ, ರೈತರಿಗಾಗಿ ಕೃಷಿ ಹೊಂಡಗಳ ನಿರ್ಮಾಣ ಇವೆಲ್ಲವುಗಳ ಜೊತೆಗೆ ಗ್ರಾಮದ ರುದ್ರ ಭೂಮಿಯನ್ನೂ ಅಭಿವೃದ್ಧಿಪಡಿಸಲಾಗಿದೆ.

ADVERTISEMENT
ಗ್ರಾಮದ ಅಭಿವೃದ್ಧಿಯಲ್ಲಿ ಅಧಿಕಾರಿಗಳು ಸದಸ್ಯರು ಮತ್ತು ಗ್ರಾಮಸ್ಥರ ಸಹಕಾರಮುಖ್ಯವಾಗಿದೆ. ಪ್ರಶಸ್ತಿ ಸಂತಸ ತಂದಿದೆ. ಸರ್ಕಾರದ ಎಲ್ಲ ಸೌಲಭ್ಯಗಳನ್ನೂ ಸದ್ಬಳಕೆ ಮಾಡಿಕೊಳ್ಳಲಾಗಿದೆ.
–ಶಕುಂತಲಾ ಸೋನೋನೆ ಅಧ್ಯಕ್ಷರು ಗ್ರಾಮ ಪಂಚಾಯಿತಿ ಜಗದಾಳ

ಸುಸಜ್ಜಿತವಾದ ರಾಜೀವ ಗಾಂಧಿ ಸೇವಾ ಕೇಂದ್ರ, ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಪಂಚಾಯಿತಿ ಕಾರ್ಯಾಲಯ, ಕಾರ್ಯಾಲಯದ ಸಿಬ್ಬಂದಿಗಾಗಿ ಕೋಣೆಗಳು, ಸಂತೆಗಾಗಿ ಉತ್ತಮವಾದ ಸಾರ್ವಜನಿಕ ಸ್ಥಳ, ಗ್ರಾಮದ ಎರಡು ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಸೇರಿದಂತೆ ಗ್ರಾಮದ ಜನರು ಹಲವು ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇಂಥ ಗ್ರಾಮಕ್ಕೆ ಪ್ರಸ್ತುತ ಸಾಲಿನ ಗಾಂಧಿ ಗ್ರಾಮ ಪ್ರಶಸ್ತಿ ಬಂದಿರುವುದು ಗ್ರಾಮ ಪಂಚಾಯಿತಿ ಸದಸ್ಯರಲ್ಲಿ, ಗ್ರಾಮಸ್ಥರಲ್ಲಿ ಹೆಮ್ಮೆಯನ್ನುಂಟು ಮಾಡಿದೆ.

ಗ್ರಾ.ಪಂ ಅಧ್ಯಕ್ಷ ಉಪಾಧ್ಯಕ್ಷ ಸದಸ್ಯರು ಗ್ರಾಮಸ್ಥರು ಹಾಗೂ ಶಾಲಾ ಶಿಕ್ಷಕರ ಸಹಕಾರದಿಂದ ಸಾಧನೆ ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯ ಹಮ್ಮಿಕೊಳ್ಳುವ ಮೂಲಕ ಮಾದರಿ ಗ್ರಾಮವನ್ನಾಗಿಸಲು ಪ್ರಯತ್ನಿಸಲಾಗುವುದು.
–ರಾಜಶೇಖರ ಗುದಗೇನವರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಗದಾಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.