ಬಾದಾಮಿ: ಐತಿಹಾಸಿಕ ಪಟ್ಟಣದಲ್ಲಿ ಗಣೇಶನ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಇಲ್ಲಿಯ 8-10 ವಿಶ್ವಕರ್ಮ ಬಡಿಗೇರ ಸಮುದಾಯದ ಯುವಕರು ಎರಡು ತಿಂಗಳ ಮುಂಚೆಯೇ ಸಿದ್ಧತೆ ಮಾಡುತ್ತಾರೆ.
ಮಾರುತಿ ದೇವಾಲಯ ಪಕ್ಕದ ಗ್ರಾಮದೇವಿ ಮಂಟಪದಲ್ಲಿ ವೈವಿಧ್ಯಮಯವಾದ ಮಣ್ಣಿನ ಗಣೇಶನ ಮೂರ್ತಿಗಳನ್ನು ಇಡುತ್ತಾರೆ.
ವಿಶ್ವಕರ್ಮ ಯುವ ಕಲಾವಿದ ರವಿ ಬಡಿಗೇರ ನೂರಾರು ವೈವಿಧ್ಯಮಯ ಮಣ್ಣಿನ ಗಣೇಶನನ್ನು ರೂಪಿಸಿ ಬಣ್ಣ ಬಳಿದು ಆಕರ್ಷಕ ಅಲಂಕಾರ ಮಾಡಿದ್ದಾರೆ.
‘ಮೂರು ತಲೆಮಾರಿನಿಂದ ಗಣೇಶನ ಹಬ್ಬಕ್ಕಾಗಿ ಮೂರ್ತಿ ಮಾಡುತ್ತೇವೆ. ನಮ್ಮ ಅಜ್ಜ ದೇವೇಂದ್ರಪ್ಪ ತಂದೆ ಶೇಕಪ್ಪ ಈಗ ನಾನು ನಾಲ್ಕು ದಶಕಗಳಿಂದ ಮಣ್ಣಿನಲ್ಲಿಯೇ ಗಣಪತಿ ಮೂರ್ತಿಯನ್ನು ಮಾಡುತ್ತ ಬಂದಿದ್ದೇವೆ ’ ಎಂದು ರವಿ ಬಡಿಗೇರ ತಿಳಿಸಿದರು.
‘ಕುಟುಂಬ ನಿರ್ವಹಣೆಗಾಗಿ ವಿಶ್ವಕರ್ಮ ಸಮುದಾಯದ ಮೂಲ ಕಸಬಾದ ಕಟ್ಟಿಗೆಯಲ್ಲಿ ಬಾಗಿಲು, ಕಿಟಕಿ ಮತ್ತು ರೈತರ ಕೃಷಿ ಪರಿಕರಗಳನ್ನು ತಯಾರಿಸುವ ಕಾಯಕ ಮಾಡುತ್ತೇವೆ. ಮಣ್ಣಿನಲ್ಲಿ ಗಣೇಶನ ಮೂರ್ತಿಯನ್ನೂ ಪ್ರತಿ ವರ್ಷ ಮಾಡುತ್ತಿದ್ದೇವೆ ’ ಎಂದು ಹೇಳಿದರು.
‘ಮುತ್ತಲಗೇರಿ ಗ್ರಾಮದ ಕೆರೆಯ ಜಿಗುಟು ಮಣ್ಣನ್ನು ತಂದು ನೆನೆ ಇಟ್ಟು ಕುಟ್ಟಿ ಹದ ಮಾಡಿದ ನಂತರ ಮೂರ್ತಿಯನ್ನು ತಯಾರಿಸುತ್ತೇವೆ. ಎಡಮುರಿ ಮತ್ತು ಬಲಮುರಿ ಗಣೇಶನನ್ನು ತಯಾರಿಸುತ್ತೇವೆ’ ಎಂದರು.
‘ಚಾಲುಕ್ಯರು ನಿರ್ಮಿಸಿದ ಸ್ಮಾರಕಗಳಲ್ಲಿ ಕಲಾವಿದರು ಬಲಮುರಿ ಗಣೇಶ (ಬಲಕ್ಕೆ ಸೊಂಡಿಲು) ಮತ್ತು ಎಡಮುರಿ (ಎಡಕ್ಕೆ ಸೊಂಡಿಲು) ಮೂರ್ತಿಗಳನ್ನು ನಿರ್ಮಿಸಿದ್ದಾರೆ. ಅವುಗಳು ನಮಗೆ ಸ್ಫೂರ್ತಿಯಾಗಿವೆ. ಚಾಲುಕ್ಯರ ಕಾಲದ ಗಣೇಶನಂತೆ ಮೂರ್ತಿಯನ್ನು ರೂಪಿಸಲಾಗುತ್ತಿದೆ’ ಎಂದು ತಿಳಿಸಿದರು.
‘6 ಇಂಚಿನಿಂದ ಎರಡೂವರೆ ಅಡಿಗಳಷ್ಟು ಎತ್ತರದ ಮೂರ್ತಿಯನ್ನು ಮಾಡುತ್ತೇವೆ. ಅಂದಾಜು ₹ 500 ರಿಂದ ₹ 5 ಸಾವಿರದವರೆಗೂ ದರ ಇರುತ್ತದೆ. ಪ್ರತಿವರ್ಷ ಅಂದಾಜು ಇನ್ನೂರಕ್ಕೂ ಹೆಚ್ಚು ಮೂರ್ತಿಗಳನ್ನು ಮಾರಾಟ ಮಾಡುತ್ತೇವೆ’ ಎಂದು ತಿಳಿಸಿದರು.
ಗಣೇಶನ ಮೂರ್ತಿ ಬೇಕಾದವರು ಮೊದಲೇ ಬಂದು ಹೇಳಿ ಹೋಗುತ್ತಾರೆ. ನಂತರ ಪ್ರತಿಷ್ಠಾಪನೆಯ ದಿನ ತೆಗೆದುಕೊಂಡು ಹೋಗುತ್ತಾರೆ. ಗಣೇಶನ ಹಬ್ಬದಿಂದ ಆರು ತಿಂಗಳ ಕಾಲ ಕುಟುಂಬದ ನಿರ್ವಹಣೆಗೆ ಅಗತ್ಯವಾದಷ್ಟು ಆರ್ಥಿಕ ನೆರವು ದೊರೆಯುತ್ತದೆ ಎಂದು ತಿಳಿಸಿದರು.
ಪಿಒಪಿ ಬಿಟ್ಟು ಎಲ್ಲರೂ ಪರಿಸರ ಸ್ನೇಹಿ ಮಣ್ಣಿನ ಗಣೇಶನನ್ನೇ ಪೂಜಿಸಬೇಕು. ಬಣ್ಣ ಲೇಪಿಸದ ಮೂರ್ತಿಯನ್ನು ನಾವು ಪ್ರತಿ ವರ್ಷ ಮನೆಯಲ್ಲಿ ಪ್ರತಿಷ್ಠಾಪಿಸುತ್ತೇವೆ.ಸದಾನಂದ ಪಾಟೀಲ, ಗ್ರಾಹಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.