ಬಾಗಲಕೋಟೆ: ‘ಬಿಹಾರದ ಪಾಟ್ನಾದ ಪುನರ್ವಸತಿ ಕೇಂದ್ರದಲ್ಲಿ ಯುವತಿಯರ ಮೇಲೆ ನಿರಂತರ ಅತ್ಯಾಚಾರ ನಡೆಸುತ್ತಿದ್ದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿ ಕರ್ನಾಟಕ ನಗರ ಮತ್ತು ಗ್ರಾಮಾಭ್ಯುದಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ (ಫೆವಾರ್ಡ್) ವತಿಯಿಂದ ಗುರುವಾರ ಇಲ್ಲಿನ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನಷ್ಟು ಮಂದಿಯನ್ನು ಬಂಧಿಸಬೇಕಿದೆ. ಕೂಡಲೇ ಅವರನ್ನು ಬಂಧಿಸುವ ಜೊತೆಗೆ ನ್ಯಾಯಾಲಯ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಮುಂದೆ ಈ ರೀತಿಯ ಕೃತ್ಯಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ರೀಚ್ ಸಂಸ್ಥೆಯ ಜಿ.ಎನ್.ಸಿಂಹ ಹಾಗೂ ದಿವ್ಯ ದರ್ಶನ ಸಂಸ್ಥೆಯ ಡಾ. ಪಿ.ಬಿ.ಬೋಯಿ ಒತ್ತಾಯಿಸಿದರು. ನಂತರ ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರಿಗೆ ಮನವಿ ಸಲ್ಲಿಸಲಾಯಿತು.
ಪುನರ್ವಸತಿ ಕೇಂದ್ರದಲ್ಲಿ ಯುವತಿಯರಿಗೆ ಕೆಲವೊಂದು ಚುಚ್ಚು ಮದ್ದು ನೀಡಿ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಕಾರಣ, ಅವರಲ್ಲಿ ಕೆಲವರು ಯಾವುದೇ ಚಿಕಿತ್ಸೆಗೂ ಸ್ಪಂದಿಸುತ್ತಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಜೊತೆಗೆ ಏಳು ವರ್ಷದ ಬಾಲಕಿ ಮೇಲೂ ಅತ್ಯಾಚಾರ ಮಾಡಲಾಗಿದೆ. ಈ ಅಮಾನುಷ ಕೃತ್ಯ ನಡೆಸಿದವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸುರಕ್ಷಿತ ಮಹಿಳಾ ಅಭಿವೃದ್ಧಿ ಸಂಘದ ಶರಣು ಬಸನಗೌಡರ, ಗುಳೇದಗುಡ್ಡದ ಯುವಶಕ್ತಿ ಸಂಸ್ಥೆಯ ಬಸವರಾಜ ಯಂಡಿಗೇರಿ, ಗದ್ದನಕೇರಿಯ ಆರ್.ಡಿ.ಎಸ್ ಸಂಸ್ಥೆಯ ಸಿ.ಎಲ್.ಮಾನವಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.