ಬಾಗಲಕೋಟೆ: ’ಎಂಜಿನಿಯರಿಂಗ್ ಕಾಲೇಜಿನ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಸೇರಿ ನಿರ್ದಿಷ್ಟ ಯೋಜನಾ ವರದಿ ಸಿದ್ಧಪಡಿಸುವ ವ್ಯವಸ್ಥೆ ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭವಾಗಲಿದೆ’ ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಕುಲಪತಿ ಡಾ.ಕರಿಸಿದ್ದಪ್ಪ ಹೇಳಿದರು.
ಇಲ್ಲಿನ ವಿದ್ಯಾಗಿರಿಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ’ವಾರ್ಷಿಕ ಶೈಕ್ಷಣಿಕ ಚಟುವಟಿಕೆಯ ಭಾಗವಾಗಿ ಈಗ ಆಯಾ ವಿಭಾಗದ ವಿದ್ಯಾರ್ಥಿಗಳೇ ನಿರ್ದಿಷ್ಟ ವಿಷಯವೊಂದರ ಬಗ್ಗೆ ಅಧ್ಯಯನ ನಡೆಸಿ ಯೋಜನಾ ವರದಿ ಸಿದ್ಧಪಡಿಸುತ್ತಿದ್ದಾರೆ. ಮುಂದಿನ ವರ್ಷದಿಂದ ಮೆಕ್ಯಾನಿಕಲ್, ಸಿವಿಲ್, ಕಂಪ್ಯೂಟರ್ ಸೈನ್ಸ್, ಬಯೊಟೆಕ್ನಾಲಜಿ ಹೀಗೆ ಬೇರೆ ಬೇರೆ ವಿಭಾಗಗಳ ವಿದ್ಯಾರ್ಥಿಗಳು ಸೇರಿ ಒಂದೇ ವಿಷಯದಲ್ಲಿ ಯೋಜನಾ ವರದಿ ಸಿದ್ಧಪಡಿಸಲಿದ್ದಾರೆ’ ಎಂದು ಹೇಳಿದರು.
ಕೌಶಲ, ಜ್ಞಾನ ಹಾಗೂ ದೃಢವಿಶ್ವಾಸದೊಂದಿಗೆ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿ ಉದ್ಯೋಗಾವಕಾಶ ಪಡೆಯುವಂತೆ ಸಲಹೆ ನೀಡಿದ ಕರಿಸಿದ್ದಪ್ಪ, ’ವೃತ್ತಿಯಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಿ ಅವಕಾಶಗಳನ್ನಾಗಿ ಪರಿವರ್ತಿಸುವುದೇ ವೃತ್ತಿಪರತೆಯಾಗಿದೆ. ಉದ್ಯಮಶೀತಲೆ ಬೆಳೆಸಿಕೊಳ್ಳುವ ಜೊತೆಗೆ ಉದ್ಯೋಗ ಸೃಷ್ಟಿಗೂ ಒತ್ತು ನೀಡಿ’ ಎಂದು ಕಿವಿಮಾತು ಹೇಳಿದರು.
’ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮೊದಲ ಕುಲಪತಿ ಡಾ.ರಾಜಶೇಖರಯ್ಯ, ಕುಲಸಚಿವ ಡಾ.ಎಸ್.ಎ.ಕೋರಿ ಆರಂಭಿಕ ದಿನಗಳಲ್ಲಿ ವಿ.ವಿಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದಾರೆ, ಅವರು ಇದೇ ಕಾಲೇಜಿನಲ್ಲಿ ಶಿಕ್ಷಕರಾಗಿದ್ದರು ಎಂಬುದು ಸ್ಮರಣೀಯ ವಿಚಾರ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಈ ಸಮಾರಂಭದಲ್ಲಿ 955 ಮಂದಿ ಪದವಿ ಪಡೆಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕರೆಯಂತೆ ವ್ಯವಸ್ಥೆ ಬದಲಾವಣೆ ಮಾಡಿ, ಭಾರತವನ್ನು ಜಗತ್ತಿನಲ್ಲಿಯೇ ಮಾದರಿ ರಾಷ್ಟ್ರವಾಗಿ ರೂಪಿಸಲು ಕೈ ಜೋಡಿಸಿ ಎಂದರು.
ದೇಶದ ಅರ್ಥವ್ಯವಸ್ಥೆ ದಿನೇ ದಿನೇ ಸದೃಢವಾಗುತ್ತಿದೆ. ಶೇ 7.8ರಷ್ಟಿರುವ ಆರ್ಥಿಕ ವೃದ್ಧಿ ದರವನ್ನು (ಜಿಡಿಪಿ) 2019ರ ಮಾರ್ಚ್ 31ರ ಒಳಗೆ ಶೇ 8ಕ್ಕೆ ಹೆಚ್ಚಿಸುವ ಯೋಜನೆ ಕೇಂದ್ರ ಸರ್ಕಾರ ಹೊಂದಿದೆ. ಅವಕಾಶ ಸಿಕ್ಕ ಕಡೆ ಚೆನ್ನಾಗಿ ಕೆಲಸ ಮಾಡಿ ದೇಶಕ್ಕೆ ಹಾಗೂ ನಾಡಿಗೆ ಹೆಸರು ತರುವಂತೆ ಸಲಹೆ ನೀಡಿದರು.
’ಎಂಜಿನಿಯರಿಂಗ್ ಕೋರ್ಸ್ ಮುಗಿಸಿದ ತಕ್ಷಣ ಕೆಲಸ ಸಿಕ್ಕರೆ ಸರಿ, ಇಲ್ಲದಿದ್ದರೆ ನೀವೇ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳಿಗೆ ದೊರೆಯುವ ಹಣಕಾಸಿನ ನೆರವು ಬಳಸಿಕೊಂಡು ಸಣ್ಣ ಸಣ್ಣ ಉದ್ಯಮಗಳನ್ನು ಸ್ಥಾಪಿಸಿ. ಬೇರೆಯವರಿಗೆ ಕೆಲಸ ಕೊಡುವ ಸಾಮರ್ಥ್ಯ ಗಳಿಸಿ’ ಎಂದರು.
ಬೆಂಗಳೂರಿನ ಬಾಷ್ ಫೌಂಡೇಶನ್ ಉಪಾಧ್ಯಕ್ಷ ರಾಜಕುಮಾರ ಅಯ್ಯಂಗಾರ ಮಾತನಾಡಿ, ’ಎಂಜಿನಿಯರಿಂಗ್ ಕಾಲೇಜುಗಳಿಂದ ಅತ್ಯುನ್ನತ ಪ್ರತಿಭೆಗಳು ಪ್ರತಿ ವರ್ಷ ಹೊರಬರುತ್ತಿದ್ದಾರೆ. ಭಾರತೀಯರ ವೃತ್ತಿ ನೈಪುಣ್ಯತೆಯ ಉಪಯೋಗವನ್ನು ಪಡೆದುಕೊಳ್ಳಲು ಜಗತ್ತಿನ ದೊಡ್ಡ ದೊಡ್ಡ ಕಂಪೆನಿಗಳು ದೇಶದಲ್ಲಿ ತಮ್ಮ ಉದ್ಯಮಗಳನ್ನು ಆರಂಭಿಸುತ್ತಿವೆ. ಗೂಗಲ್, ಮೈಕ್ರೊಸಾಫ್ಟ್‌ನಂತಹ ದೈತ್ಯರು ಅಮೆರಿಕ ಬಿಟ್ಟರೆ ಭಾರತದಲ್ಲಿಯೇ ದೊಡ್ಡ ಸಂಖ್ಯೆಯಲ್ಲಿ ಬೀಡುಬಿಟ್ಟಿದ್ದಾರೆ. ಜರ್ಮನ್ನರು ಸಾಮಾನ್ಯವಾಗಿ ಬೇರೆಯವರೊಂದಿಗೆ ತಾಂತ್ರಿಕತೆ ಹಂಚಿಕೊಳ್ಳಲು ಮುಂದಾಗುವುದಿಲ್ಲ. ಆದರೆ ಬಾಷ್ ಕಂಪೆನಿ 22ರಿಂದ 30 ವರ್ಷದೊಳಗಿನ 70 ಸಾವಿರ ಮಂದಿಗೆ ಇಲ್ಲಿ ಉದ್ಯೋಗ ನೀಡಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.