ಬೀಳಗಿ: ತಾಲ್ಲೂಕಿನ ಕೊರ್ತಿ ಪುನರ್ವಸತಿ ಕೇಂದ್ರದ ಗಂಗವ್ವ ಬಿರಾದಾರ ಗೃಹಲಕ್ಷ್ಮಿ ಯೋಜನೆಯಡಿ ಬಂದ ಹಣದಿಂದ ಒಂದು ಹೊಲಿಗೆ ಯಂತ್ರ ಖರೀದಿಸಿದ್ದಾರೆ.
ಗಂಗವ್ವ ಬಿರಾದಾರ ಈಗಾಗಲೇ ಕಾರಕುಟ್ಟುವ ಹಾಗೂ ಶ್ಯಾವಿಗೆ ಮಷೀನ್ ಗಳನ್ನು ಹೊಂದಿದ್ದು ಪ್ರಸ್ತುತ 12 ತಿಂಗಳುಗಳಿಂದ ಗೃಹಲಕ್ಷ್ಮಿ ಯೋಜನೆಯಡಿ ಜಮಾ ಆಗಿರುವ ₹ 24 ಸಾವಿರದಲ್ಲಿ ₹8 ಸಾವಿರ ಹಣವನ್ನು ನೀಡಿ ಹೊಲಿಗೆ ಯಂತ್ರವನ್ನು ಖರೀದಿಸುವ ಮೂಲಕ ತನ್ನ ಮೊಮ್ಮಕ್ಕಳಿಗೆ ಹಾಗೂ ನೆರೆಹೊರೆಯವರಿಗೆ ಕಲಿಯಲು ಅವಕಾಶ ಮಾಡಿಕೊಟ್ಟಿದ್ದಾಳೆ .₹12 ಸಾವಿರ ಹಣವನ್ನು ತನ್ನ ಮೊಮ್ಮಗನ ವಿದ್ಯಾಭ್ಯಾಸಕ್ಕಾಗಿ ಶಾಲೆಯ ಶುಲ್ಕವನ್ನು ಭರ್ತಿ ಮಾಡಿದ್ದಾಳೆ. ಉಳಿದ ನಾಲ್ಕು ಸಾವಿರ ಹಣವನ್ನು ತನ್ನ ಕೌಟುಂಬಿಕ ವ್ಯವಹಾರಗಳಿಗೆ ಬಳಸಿಕೊಂಡಿದ್ದೇನೆ ಎಂದು ಗಂಗವ್ವ ಪ್ರಜಾವಾಣಿಗೆ ತಿಳಿಸಿದಳು.
ಗಂಗವ್ವ ಬಿರಾದರ ಅವರನ್ನು ಬೀಳಗಿ ತಾಲ್ಲೂಕಿನ ಗ್ಯಾರಂಟಿ ಅನುಷ್ಠಾನ ಸಮಿತಿಯ ಕಚೇರಿಗೆ ಗುರುವಾರ ಬರಮಾಡಿಕೊಂಡು ಸಮಿತಿಯ ಜಿಲ್ಲಾಧ್ಯಕ್ಷ ಸಾಗರ ತೆಕ್ಕೆನವರ ಹಾಗೂ ತಾಲ್ಲೂಕಾಧ್ಯಕ್ಷ ಅಣವೀರಯ್ಯ ಪ್ಯಾಟಿಮಠ ಗೌರವಿಸಿದರು.
ನಂತರ ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಸಾಗರ ತೆಕ್ಕೆನ್ನವರ ಮಾತನಾಡಿ ಗಂಗವ್ವ ಬಿರಾದರ ತನ್ನ ಕುಟುಂಬದ ಆರ್ಥಿಕ ಅಭಿವೃದ್ಧಿಗಾಗಿ ಗೃಹಲಕ್ಷ್ಮೀ ಯೋಜನೆ ಬಳಸಿಕೊಂಡಿದ್ದು ಸ್ವಾಗತಾರ್ಹ ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲ್ಲೂಕಾ ಅಧ್ಯಕ್ಷ ಅಣವೀರಯ್ಯ ಪ್ಯಾಟಿಮಠ ಮಾತನಾಡಿ ಗೃಹಲಕ್ಷ್ಮಿ ಯೋಜನೆಯನ್ನು ಗಂಗವ್ವ ಬಿರಾದಾರ ತನ್ನ ಮೊಮ್ಮಕ್ಕಳು ಮತ್ತು ನೆರೆಹೊರೆಯವರ ಹೊಲಿಗೆ ಕಲಿಯಲು, ಹಾಗೂ ವಿದ್ಯಾಭ್ಯಾಸಕ್ಕೆ ಸದುಪಯೋಗಪಡಿಸಿಕೊಂಡಂತೆ ಎಲ್ಲ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಸದ್ಭಳಕೆ ಮಾಡಿಕೊಂಡು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಬಲರಾಗಬೇಕು ಎಂದು ತಿಳಿಸಿದರು.
ಗ್ರೇಡ್- 2 ತಹಶೀಲ್ದಾರ ಆನಂದ ಕೋಲಾರ, ಸಿಡಿಪಿಓ ಬಿ ಜಿ ಕವಟೇಕರ, ಸುಜಾತ ರಜಪೂತ, ಬೀಳಗಿ ತಾಲ್ಲೂಕಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಸರ್ವ ಸದಸ್ಯರು, ಸಿದ್ದು ಸಾರಾವರಿ, ಬಸವರಾಜ ಹಳ್ಳದಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.