ADVERTISEMENT

ಆಷಾಢಕ್ಕೆ ಮತ್ತೆ ಬಂದಳು ಗುಳ್ಳವ್ವ

ವಿಶ್ವಜ ಕಾಡದೇವರ
Published 10 ಜುಲೈ 2024, 5:13 IST
Last Updated 10 ಜುಲೈ 2024, 5:13 IST
<div class="paragraphs"><p>ಬನಹಟ್ಟಿಯ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಹೊಸೂರಿನ ಈರಪ್ಪ ಕುಂಬಾರ ಗುಳ್ಳವ್ವನ ಮೂರ್ತಿಗಳನ್ನು ತಯಾರು ಮಾಡುತ್ತಿರುವುದು</p></div>

ಬನಹಟ್ಟಿಯ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಹೊಸೂರಿನ ಈರಪ್ಪ ಕುಂಬಾರ ಗುಳ್ಳವ್ವನ ಮೂರ್ತಿಗಳನ್ನು ತಯಾರು ಮಾಡುತ್ತಿರುವುದು

   

ರಬಕವಿ ಬನಹಟ್ಟಿ: ಆಷಾಢಕ್ಕೆ ಮತ್ತೆ ಗುಳ್ಳವ್ವ ಬಂದಿದ್ದಾಳೆ. ಮಣ್ಣೆತ್ತಿನ ಅಮಾವಾಸ್ಯೆಯ ಮುಕ್ತಾಯದ ನಂತರ ಆಷಾಢದಲ್ಲಿ ಬರುವ ನಾಲ್ಕು ಮಂಗಳವಾರದ ಸಂಜೆ ಮನೆ ಮನೆಗಳಲ್ಲಿ ಗುಳ್ಳವ್ವನ ಪೂಜೆ ಮಾಡಲಾಗುತ್ತದೆ.

ಮಂಗಳವಾರ ಗುಳ್ಳವ್ವನ ಮೂರ್ತಿಯನ್ನು ತೆಗೆದುಕೊಂಡು ಬಂದು ಸಂಜೆ ಮೂರ್ತಿಗೆ ಗುಲಗಂಜಿ, ಗೋಧಿ ಮತ್ತು ಜೋಳದ ಕಾಳುಗಳಿಂದ ಸಿಂಗಾರ ಮಾಡುತ್ತಾರೆ. ಪೂಜೆಯ ಸಂದರ್ಭದಲ್ಲಿ ಹಾವು, ಚೇಳುಗಳನ್ನು ಮಾಡುತ್ತಾರೆ. ಇವು ಗುಳ್ಳವ್ವನ ಮಕ್ಕಳು ಎಂಬುದು ರೈತ ಜನಾಂಗದ ಭಾವನೆ. ಕೋಣದ ಮೂರ್ತಿಯನ್ನು ಕೂಡ ಮಾಡಿ ಪೂಜಿಸುತ್ತಾರೆ. ಗುಳ್ಳವ್ವನ ಪೂಜೆಯ ನಂತರ ಸುತ್ತ ಮುತ್ತಲಿನ ಓಣಿಯಲ್ಲಿರುವ ಬಾಲಕಿಯರು ಮಣ್ಣಿನ ಆರತಿ ಹಚ್ಚಿಕೊಂಡು ಮನೆ ಮನೆಗೆ ತೆರಳಿ ಪೂಜೆ ಮಾಡಿದ ಗುಳ್ಳವ್ವನ ಸುತ್ತ ಕುಳಿತು ಹಾಡುಗಳನ್ನು ಹಾಡುತ್ತಾರೆ. ಈ ಸಂದರ್ಭದಲ್ಲಿ ಹಾಡುವ ಹಾಡುಗಳು ಕೂಡಾ ವಿಶೇಷವಾಗಿವೆ.

ADVERTISEMENT

‘ಗುಳ್ಳವ್ವ ಗುಳ್ಳವ್ವ ಎಂದ ಬರತೀ ಗುಳ‍್ಳವ್ವ, ಗುಳೇದುಗುಡ್ಡಕ ಹೋಗಿ ಖಣಾ ತರತನ ಎಂದ ಬರತೀ ಗುಳ್ಳವ್ವ,

ಗುಳ್ಳವ್ವ ಗುಳ್ಳವ್ವ ಎಂದ ಬರತೀ ಗುಳ್ಳವ್ವ, ಬಾಗಲಕೋಟೆಗೆ ಹೋಗಿ ಬಾಗಲಾ ತರನತ ಎಂದ ಬರತೀ ಗುಳ್ಳವ್ವ,

ಇಳಕಲ್ ಹೋಗಿ ಸೀರಿ ತರತನ, ಧಾರವಾಡಕ ಹೋಗಿ ಪೇಡೆ ತರತನ, ಗೋಕಾಕ ಹೋಗಿ ಕರದಂಟ ತರತನ’ ಎಂದು ಪ್ರಾಸಬದ್ಧವಾಗಿ ನಾಲ್ಕಾರು ಹಾಡುಗಳನ್ನು ಹಾಡುತ್ತಾರೆ.

ಗುಳ್ಳವ್ವನಿಗೆ ಬೆಳಗಲು ಜನರು ವಿಶೇಷವಾಗಿ ತಯಾರು ಮಾಡಿದ ಮಣ್ಣಿನ ಆರತಿಗಳನ್ನು ಬಳಸುತ್ತಾರೆ. ಹಾಡಿದ ಮಕ್ಕಳಿಗೆ ಚುರುಮುರಿ ಮತ್ತು ಗೋವಿನ ಜೋಳದ ಅರಳುಗಳನ್ನು ನೀಡುತ್ತಾರೆ. ರೈತರು ಗುಳ್ಳವ್ವನ ಮೂಲಕ ಮಣ್ಣಿಗೆ ಸಲ್ಲಿಸುವ ಎರಡನೆಯ ಪೂಜೆ ಇದಾಗಿದೆ.

ಮರುದಿನ ಬುಧವಾರ ಮಕ್ಕಳು, ಯುವಕರು ಮತ್ತು ಮನೆಯ ಎಲ್ಲ ಸದಸ್ಯರು ಕೂಡಿಕೊಂಡು ನದಿ ತೀರಕ್ಕೆ ಇಲ್ಲವೇ ಹೊಲ–ಗದ್ದೆಗಳಿಗೆ ಊಟ ಕಟ್ಟಿಕೊಂಡು ಹೋಗಿ ಊಟ ಮಾಡಿ ಬರುತ್ತಾರೆ. ಕೆಲವು ಯುವಕರು ಗಾಳಿಪಟಗಳನ್ನು ಹಾರಿಸಿ ಸಂಭ್ರಮಿಸುತ್ತಾರೆ.

ಸಮೀಪದ ಹೊಸೂರಿನ ಹತ್ತಾರು ಮನೆತನಗಳು ಗುಳ್ಳವ್ವನ ಮೂರ್ತಿಗಳನ್ನು ಮಾಡಿ ಮಾರಾಟ ಮಾಡುತ್ತವೆ. ಇಲ್ಲಿಯ ಈರಪ್ಪ ಕುಂಬಾರ ನಿರಂತರವಾಗಿ 40 ವರ್ಷಗಳಿಂದ ಗುಳ್ಳವ್ವನ ಮೂರ್ತಿಗಳನ್ನು ಮಾಡುತ್ತಿದ್ದಾರೆ.

ಇಂದಿನ ಆಧುನಿಕ ದಿನಗಳಲ್ಲಿಯೂ ನಮ್ಮ ಜನರು ಗುಳ್ಳವ್ವನ ಪೂಜೆ ಮಾಡಿ ದೇಸಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

ಗುಳ್ಳವ್ವನ ಪೂಜೆಗೆ ವಿಶೇಷವಾದ ಮಣ್ಣಿನ ಆರತಿಗಳನ್ನು ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.