ADVERTISEMENT

ಹೇರ್‌ ಡ್ರಯರ್ ಸ್ಫೋಟ: ಕೊಲೆಗೆ ಸಂಚು

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2024, 15:32 IST
Last Updated 22 ನವೆಂಬರ್ 2024, 15:32 IST
ಸಿದ್ದಪ್ಪ ಶೀಲವಂತ
ಸಿದ್ದಪ್ಪ ಶೀಲವಂತ   

ಬಾಗಲಕೋಟೆ: ಇಳಕಲ್‌ನ ಹೇರ್‌ ಡ್ರಯರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಇಳಕಲ್ ಠಾಣೆಯ ಪೊಲೀಸರು, ಕೊಲೆ ಯತ್ನದ ಆರೋಪದ ಮೇಲೆ ಸಿದ್ದಪ್ಪ ಶೀಲವಂತ ಎಂಬುವನನ್ನು ಬಂಧಿಸಿದ್ದಾರೆ.

‘ಸ್ಫೋಟದಿಂದ ಗಾಯಗೊಂಡಿರುವ ಬಸವರಾಜೇಶ್ವರಿ ಯರನಾಳ ಮತ್ತು ಆರೋಪಿ ಸಿದ್ದಪ್ಪ ಶೀಲವಂತ ಇಬ್ಬರೂ ಕುಷ್ಟಗಿ ತಾಲ್ಲೂಕಿನ ಪುರತಗೇರಿಯವರು. ಮದುವೆಗೂ ಮುನ್ನ ಇಬ್ಬರಿಗೂ ಪರಿಚಯವಿತ್ತು. ಅವರ ಪತಿ ನಿಧನದ ಬಳಿಕ ಮತ್ತೆ ಸಂಪರ್ಕಕ್ಕೆ ಬಂದಿದ್ದರು. ಇಳಕಲ್‌ನಲ್ಲಿದ್ದ ಬಸವರಾಜೇಶ್ವರಿ ಮನೆಗೆ ಆಗಾಗ್ಗೆ ಹೋಗುವುದನ್ನು ಸಿದ್ದಪ್ಪ ಒಪ್ಪಿಕೊಂಡಿದ್ದಾನೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಪಾರ್ಸಲ್‌ ಶಶಿಕಲಾ ಹೆಸರಿನಲ್ಲಿ ಕಳುಹಿಸಲಾಗಿತ್ತು. ಸ್ನೇಹಿತೆಯರಾದ ಶಶಿಕಲಾ ಮತ್ತು ಬಸವರಾಜೇಶ್ವರಿ ಇಬ್ಬರ ಗಂಡಂದಿರು ಸೇನೆಯಲ್ಲಿದ್ದರು. ಸಿದ್ದಪ್ಪನ ಪರಿಚಯವಾದಾಗ, ಆತನೊಂದಿಗೆ ದೂರ ಇರುವಂತೆ ಬಸವರಾಜೇಶ್ವರಿಗೆ ಶಶಿಕಲಾ ಸಲಹೆ ನೀಡಿದ್ದರು. ಇದರಿಂದ ಸಿಟ್ಟಿಗೆದ್ದ ಸಿದ್ದಪ್ಪ, ಶಶಿಕಲಾ ಕೊಲೆಗೆ ಸಂಚು ರೂಪಿಸಿದ’ ಎಂದರು.

ADVERTISEMENT

‘ಗ್ರಾನೈಟ್ಸ್ ಕಂಪನಿಯಲ್ಲಿ ಸೂಪರ್‌ವೈಸರ್ ಆಗಿರುವ ಸಿದ್ದಪ್ಪ, ಕಲ್ಲು ಸ್ಫೋಟಿಸಲು ಇಟ್ಟ ಡಿಟೊನೇಟರ್‌ ತಂದು ಅದನ್ನು ಹೇರ್‌ ಡ್ರಯರ್‌ಗೆ ಜೋಡಿಸಿ, ಬಾಗಲಕೋಟೆಯಿಂದ ಶಶಿಕಲಾಗೆ  ಕೋರಿಯರ್‌ ಕಳುಹಿಸಿದ್ದ. ಊರಿನಲ್ಲಿ ಇರದ ಕಾರಣ ಪಾರ್ಸಲ್ ತರಲು ಬಸವರಾಜೇಶ್ವರಿಗೆ ಶಶಿಕಲಾ ಹೇಳಿದ್ದರು. ಪಾರ್ಸಲ್‌ನ್ನು ತಂದು ಅದರಲ್ಲಿದ್ದ ಹೇರ್‌ ಡ್ರಯರ್‌ ಬಳಸಲು ಮುಂದಾದಾಗ, ಅದು ಸ್ಫೋಟಗೊಂಡು ಬಸವರಾಜೇಶ್ವರಿ ಕೈ ಬೆರಳುಗಳು ಛಿದ್ರಗೊಂಡವು’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.