ADVERTISEMENT

ಕಾಲಪೆಟ್ಟಿಗೆಯ ಹಾರ್ಮೋನಿಯಂಗೆ ಜೀವ

ವಿಶ್ವಜ ಕಾಡದೇವರ
Published 30 ಜೂನ್ 2024, 6:11 IST
Last Updated 30 ಜೂನ್ 2024, 6:11 IST
ಬನಹಟ್ಟಿಯ ಸದಾಶಿವ ತೇಲಿ ಕಾಲಪೆಟ್ಟಿಗೆಯ ಹಾರ್ಮೋನಿಯಂ ನುಡಿಸುತ್ತಿರುವುದು.
ಬನಹಟ್ಟಿಯ ಸದಾಶಿವ ತೇಲಿ ಕಾಲಪೆಟ್ಟಿಗೆಯ ಹಾರ್ಮೋನಿಯಂ ನುಡಿಸುತ್ತಿರುವುದು.   

ರಬಕವಿ ಬನಹಟ್ಟಿ: ಬನಹಟ್ಟಿಯ ಸದಾಶಿವ ತೇಲಿ ಬಹು ಪ್ರತಿಭೆಯ ಕಲಾವಿದರು. ನಟನೆ, ನಿರ್ದೇಶನ ಭಜನಾ ಹಾಡುಗಾರಿಕೆಯ ಜೊತೆಗೆ ತಾಳ ವಾದನ, ದಮಡಿ, ದಪ್ಪಗಳನ್ನು ನುಡಿಸುವುದರ ಜೊತೆಗೆ ನಮ್ಮಿಂದ ದೂರವಾಗುತ್ತಿರುವ ಕಾಲಪೆಟ್ಟಿಗೆಯ ಹಾರ್ಮೋನಿಯಂ ಕಲಾವಿದರಾಗಿಯೂ ಗಮನ ಸೆಳೆದಿದ್ದಾರೆ.

ಕೆಲವು ದಶಕಗಳ ಹಿಂದೆ ಪಾರಿಜಾತ, ನಾಟಕ, ಸನ್ನಾಟ ಮತ್ತು ಭಜನಾ ಕಾರ್ಯಕ್ರಮಗಳಲ್ಲಿ ಕಾಲಪೆಟ್ಟಿಗೆ ಹಾರ್ಮೋನಿಯಂ ಬಳಸುತ್ತಿದ್ದರು. ಆದರೆ ಇಂದು ಆಧುನಿಕತೆಗೆ ತಕ್ಕಂತೆ ಸಂಗೀತ ಸಾಧನಗಳು ಕೂಡ ಬದಲಾಗ ತೊಡಗಿವೆ. ಕಾಲಪೆಟ್ಟಿಗೆ ಹಾರ್ಮೋನಿಯಂ ಬದಲಾಗಿ ಹಾರ್ಮೋನಿಯಂಗಳನ್ನು ಬಳಸಲಾಗುತ್ತಿತ್ತು. ಈಗ ಹಾರ್ಮೋನಿಯಂ ಸ್ಥಾನವನ್ನು ಕ್ಯಾಸಿಯೊಗಳು ತುಂಬಿವೆ.

ಕಾಲಪೆಟ್ಟಿಗೆಯ ಹಾರ್ಮೋನಿಯಂ ವಿಶೇಷವಾದ ಸಂಗೀತ ಸಾಧನ. ಎರಡು ಕೈಗಳಿಂದ ಕೀಗಳನ್ನು ಒತ್ತುವುದರ ಜೊತೆಗೆ ಕೆಳಗಡೆ ಇರುವ ಪ್ಯಾಡ್‌ಗಳನ್ನು ಕಾಲಿನಿಂದ ತುಳಿಯುತ್ತಿರಬೇಕು. ಶತಮಾನಗಳ ಹಿಂದೆ ಈ ಹಾರ್ಮೋನಿಯಂಗಳನ್ನು ಸಂಕೇಶ್ವರದಲ್ಲಿ ತಯಾರು ಮಾಡುತ್ತಿದ್ದರು. ಜರ್ಮನ್ ಸ್ವರಗಳನ್ನು ಹೊಂದಿರುವ ಕಾಲಪೆಟ್ಟಿಗೆಯ ಹಾರ್ಮೋನಿಯಂಗಳು ಉತ್ತಮ ನಿನಾದ ಹೊರಡಿಸುತ್ತವೆ. ಇದರ ಶಬ್ದ ಜೋರಾಗಿಯೂ ಕೇಳುತ್ತದೆ. ಮೈಕ್‌ಗಳು ಇಲ್ಲದೆ ಇರುವ ಸಂದರ್ಭದಲ್ಲಿ ಇವುಗಳನ್ನು ಬಳಸಲಾಗುತ್ತಿತ್ತು ಎನ್ನುತ್ತಾರೆ ಸದಾಶಿವ ತೇಲಿ.

ADVERTISEMENT

ಈ ನಾಡಿನ ಪ್ರಮುಖ ಪಾರಿಜಾತ ಕಲಾವಿದರಾಗಿದ್ದ ರಾಚಯ್ಯ ಬರಗಿ, ಟಕ್ಕಳಕಿ ವಿಠ್ಠಲರಾವ, ಅಪ್ಪಲಾಲ ನದಾಫ್, ಮಲ್ಲಯ್ಯ ಸ್ವಾಮಿ ಅಥಣಿಯವರ ಪಾರಿಜಾತ ತಂಡಗಳಲ್ಲಿ ನಂತರ ರಬಕವಿ ಬನಹಟ್ಟಿ, ಮುಧೋಳ, ಲೋಕಾಪುರ ಹಾಗೂ ಬೇರೆ ಬೇರೆ ಪಾರಿಜಾತ ಮತ್ತು ನಾಟಕ ಕಂಪನಿಗಳಲ್ಲಿಯೂ ಕಾಲ ಪೆಟ್ಟಿಯ ಕಲಾವಿದರಾಗಿ ಗಮನ ಸೆಳೆದಿದ್ದಾರೆ.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ, ಧಾರವಾಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಮುಧೋಳ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ರಬಕವಿ ಬನಹಟ್ಟಿ ಜಮಖಂಡಿ, ಜಮಖಂಡಿ, ಅಥಣಿ ತಾಲ್ಲೂಕಿನ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಕರ್ನಾಟಕ ಮಹಾರಾಷ್ಟ್ರದ ಗಡಿ ಭಾಗದ ಅನೇಕ ಕಡೆಗಳಲ್ಲಿ ತಮ್ಮ ಕಲಾ ಪ್ರದರ್ಶನ ನೀಡಿದ್ದಾರೆ.

ಆಸಕ್ತರಿಗೆ ಕಾಲಪೆಟ್ಟಿಗೆಯ ಹಾರ್ಮೋನಿಯಂ ಕಲೆಯನ್ನು ಕಲಿಸುವುದರ ಜೊತೆಗೆ ಪಾರಿಜಾತ ಹಾಗೂ ಸಾಮಾಜಿಕ ನಾಟಕಗಳನ್ನು ನಿರ್ದೇಶನ ಮಾಡುತ್ತಿದ್ದು ಈ ಮೂಲಕ ನಮ್ಮಿಂದ ದೂರವಾಗುತ್ತಿರುವ ಕಲೆಗಳಿಗೆ ಜೀವಂತಿಕೆ ನೀಡುತ್ತಿದ್ದಾರೆ. ಎಲೆ ಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಸದಾಶಿವ ತೇಲಿಯವರನ್ನು ಕಲಾ ಜಗತ್ತು ಗುರುತಿಸದೇ ಇರುವುದು ಖೇದನಿಯ ಸಂಗತಿ.

ಬನಹಟ್ಟಿಯ ಕಲಾವಿದ ಸದಾಶಿವ ತೇಲಿ ಕಾಲಪೆಟ್ಟಿಗೆಯ ಹಾರ್ಮೋನಿಯಂ ನುಡಿಸುತ್ತಿರುವುದು.

ತಂದೆಯ ಬಳುವಳಿ ಈಗ ಕೇವಲ ಬೆರಣಿಕೆಯಷ್ಟು ಮಾತ್ರ ಕಾಲಪೆಟ್ಟಿಗೆಯ ಕಲಾವಿದರು ಉಳಿದುಕೊಂಡಿದ್ದಾರೆ. ಅವರಲ್ಲಿ ಸದಾಶಿವ ತೇಲಿಯವರು ಒಬ್ಬರು. ನಾಲ್ಕೂವರೆ ದಶಕಗಳಿಂದ ಸದಾಶಿವ ತೇಲಿ ಈ ಕಲೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಸದಾಶಿವರ ತಂದೆ ಉಳ್ಳಪ್ಪ ಕೂಡ ಕಾಲಪೆಟ್ಟಿಗೆಯ ಹಾರ್ಮೋನಿಯಂ ಕಲಾವಿದರು. ತಂದೆಯಿಂದ ಬಳುವಳಿಯಾಗಿ ಬಂದ ಕಲೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಆರವತ್ತರ ಆಸುಪಾಸಿನ ಸದಾಶಿವ ಅವರು ಕಾಲಪೆಟ್ಟಿಗೆಯನ್ನು ಹೊತ್ತುಕೊಂಡೇ ನಾಡಿನ ಸುತ್ತ ಮುತ್ತಲಿನ ಪ್ರಮುಖ ಪ್ರದೇಶಗಳಲ್ಲಿ ಕಲಾ ಪ್ರದರ್ಶನ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.