ಬಾದಾಮಿ: ಇಲ್ಲಿನ ಐತಿಹಾಸಿಕ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಒಂದೇ ಮುಖ್ಯ ರಸ್ತೆ ಇರುವುದದಿಂದ ವಾಹನಗಳ ದಟ್ಟಣೆ ಹೆಚ್ಚಿದ್ದಿ, ಸಂಚಾರಕ್ಕೆ ಮತ್ತು ಪಾದಚಾರಿಗಳಿಗೆ ತೊಂದರೆಯಾಗಿದೆ.
ಬಸ್ ನಿಲ್ದಾಣದ ಮುಖ್ಯ ರಸ್ತೆಯಿಂದ ಪುಲಿಕೇಶಿ ವೃತ್ತ, ಟಾಂಗಾ ನಿಲ್ದಾಣ, ಅಂಬೇಡ್ಕರ್ ವೃತ್ತದಲ್ಲಿ ಬೆಳಿಗ್ಗೆ 9 ರಿಂದ 12 ಮತ್ತು ಸಂಜೆ 5 ರಿಂದ 8 ಗಂಟೆಯವರೆಗೆ ವಿಪರೀತ ವಾಹನಗಳ ದಟ್ಟಣೆಯಿಂದ ಪ್ರವಾಸಿಗರು ಮತ್ತು ಸ್ಥಳೀಯರು ಪರದಾಡುವಂತಾಗಿದೆ.
ಪಾದಚಾರಿ ರಸ್ತೆಯಲ್ಲಿ ನೂರಾರು ಗೂಡಂಗಡಿಗಳಿವೆ. ದ್ವಿಚಕ್ರ ವಾಹನಗಳ ನಿಲುಗಡೆ ಸ್ಥಳವಿಲ್ಲದ ಕಾರಣ ರಸ್ತೆಯ ಇಕ್ಕೆಲುಗಳಲ್ಲೂ ದ್ವಿಚಕ್ರ ವಾಹನ ನಿಲುಗಡೆ ಮಾಡುತ್ತಾರೆ. ಪಾದಚಾರಿಗಳು ಅನಿವಾರ್ಯವಾಗಿ ವಾಹನಗಳು ಸಂಚರಿಸುವ ಮಧ್ಯದಲ್ಲಿಯೇ ಜೀವಭಯದಿಂದ ನಡೆದು ಹೋಗಬೇಕಿದೆ.
ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಪ್ರವಾಸಿತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಕಬ್ಬು ಸಾಗಿಸುವ ಲಾರಿ, ಟ್ರ್ಯಾಕ್ಟರ್, ಮರಳು ಸಾಗಿಸುವ ಟಿಪ್ಪರ್ ಸ್ಥಳೀಯ ವಾಹನಗಳ ಸಂಚಾರದಿಂದ ಪಾದಚಾರಿಗಳಿಗೆ ರಸ್ತೆ ದಾಟಲು ಕಷ್ಟವಾಗುತ್ತಿದೆ.
‘ವೀರಪುಲಿಕೇಶಿ ವೃತ್ತದಲ್ಲಿ ಹುಬ್ಬಳ್ಳಿ– ಇಳಕಲ್ ಬಸ್ ನಿಲ್ಲುವಲ್ಲಿ ಆಟೊಗಳ ನಿಲುಗಡೆಯಿಂದ ವಾಹನ ಸಂಚಾರಕ್ಕೆ ಮತ್ತು ಪಾದಚಾರಿಗಳಿಗೆ ತೊಂದರೆಯಾಗಿದೆ. ಪೊಲೀಸ್ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
‘ಟಾಂಗಾ ನಿಲ್ದಾಣದ ರಸ್ತೆಯಿಂದ ಮಾರುಕಟ್ಟೆಗೆ ಮತ್ತು ಪ್ರವಾಸಿಗರು ಮ್ಯುಜಿಯಂಗೆ ಹೋಗುವುದು ತೊಂದರೆಯಾಗಿದೆ. ಜನರ ಮತ್ತು ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಪಾದಚಾರಿಗಳು ರಸ್ತೆ ದಾಟಲು ಇಲ್ಲಿ ಹರಸಾಹಸ ಮಾಡಬೇಕಿದೆ. ಇಲ್ಲಿ ಕಡ್ಡಾಯವಾಗಿ ಬೆಳಿಗ್ಗೆ ಮತ್ತು ಸಂಜೆ ಪೊಲೀಸ್ ಸಿಬ್ಬಂದಿಯನ್ನು ನೇಮಿಸಬೇಕು’ ಸ್ಥಳೀಯರಾದ ಎಂದು ಶಂಕರಗೌಡ ಪಾಟೀಲ ಒತ್ತಾಯಿಸಿದರು..
‘ವೀರಪುಲಿಕೇಶಿ ವೃತ್ತದ ಹುಬ್ಬಳ್ಳಿ- ಇಳಕಲ್ ಬಸ್ ನಿಲುಗಡೆ ಸ್ಥಳದಲ್ಲಿ ಆಟೊ ನಿಲ್ಲಿಸುವ ಆಟೊ ಚಾಲಕರಿಗೆ ದಂಡ ವಿಧಿಸಲಾಗಿದೆ. ಟಾಂಗಾ ನಿಲ್ದಾಣದಲ್ಲಿ ನಿತ್ಯ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ. ಬೇರೆ ಕಡೆಗೆ ಬಂದೋಬಸ್ತ್ ಇದ್ದಾಗ ಮಾತ್ರ ಪೊಲೀಸ್ ಸಿಬ್ಬಂದಿ ನೇಮಿಸಲಾಗಿಲ್ಲ’ ಎಂದು ಸಿಪಿಐ ಕರಿಯಪ್ಪ ಬನ್ನೆ ಪ್ರತಿಕ್ರಿಯಿಸಿದರು.
ಬಾದಾಮಿ ರೈಲ್ವೆ ನಿಲ್ದಾಣದಿಂದ ಗದಗ ರಸ್ತೆ ಬನಶಂಕರಿವರೆಗೆ ಬೈಪಾಸ್ ರಸ್ತೆ ಮಾಡಬೇಕು. ಇದರಿಂದ ವಾಹನಗಳ ದಟ್ಟಣೆ ಕಡಿಮೆಯಾಗುವುದು–ಇಷ್ಟಲಿಂಗ ನರೇಗಲ್, ನಗರ ಅಭಿವೃದ್ಧಿ ಹೋರಾಟ ಸಮಿತಿ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.