ಬಾಗಲಕೋಟೆ: ‘ಬಿ.ಎಂ. ಹೊರಕೇರಿ ಅಭಿಮಾನಿ ಬಳಗದ ವತಿಯಿಂದ ನ.24 ರಂದು ಬೆಳಿಗ್ಗೆ 10.30ಕ್ಕೆ ಬಾದಾಮಿ ತಾಲ್ಲೂಕಿನ ಬೇಲೂರಿನ ಅನ್ನದಾನೇಶ್ವರ ಪ್ರೌಢಶಾಲೆ ಆವರಣದಲ್ಲಿ ಮಹದಾಯಿ–ಮಲಪ್ರಭಾ ಜೋಡಣೆಗೆ ಹೋರಾಡಿದ ಬಿ.ಎಂ. ಹೊರಕೇರಿ ಅವರ ಪ್ರತಿಮೆ ಅನಾವರಣ ಹಾಗೂ ‘ಹೊನ್ನಬಿತ್ತ್ಯಾರ ಹೊರಕೇರಿ’ ಸಂಸ್ಮರಣ ಗ್ರಂಥ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಬಳಗದ ಅಧ್ಯಕ್ಷ ಪಿ.ಆರ್. ಗೌಡರ ಹೇಳಿದರು.
ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಪ್ರತಿಮೆಯನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅನಾವರಣಗೊಳಿಸಲಿದ್ದಾರೆ. ಸಚಿವ ಸತೀಶ ಜಾರಕಿಹೊಳಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಾಜಿ ಸಚಿವ ಎಸ್.ಆರ್. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದರು.
ಸಚಿವ ಆರ್.ಬಿ.ತಿಮ್ಮಾಪುರ ಗ್ರಂಥ, ಸಂಸದ ಪಿ.ಸಿ. ಗದ್ದಿಗೌಡ ತೈಲವರ್ಣದ ಭಾವಚಿತ್ರ ಬಿಡುಗಡೆ ಮಾಡಲಿದ್ದಾರೆ. ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ, ಶಿವಯೋಗ ಮಂದಿರದ ಮದ್ವೀರಶೈವ ಶಿವಯೋಗ ಮಂದಿರ ಸಂಸ್ಥೆಯ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ತಿಳಿಸಿದರು.
ಎಂ.ಬಿ. ಹಂಗರಗಿ, ಆರ್.ಎಫ್. ಬಾಗವಾನ, ಬಿ.ಎಫ್. ಹೊರಕೇರಿ, ಎಂ.ಡಿ. ಯಲಿಗಾರ ಇದ್ದರು.
1960 ರಲ್ಲಿ ಹೊರಕೇರಿ ಅವರು, ನೀರಾವರಿಗಾಗಿ ಢಾಣಕಶಿರೂರಿನಲ್ಲಿ ನೀರಾವರಿ ಸಹಕಾರ ಸಂಘ ಸ್ಥಾಪಿಸಿದ್ದರು. ಬೇಲೂರು–ಜಾಲಿಹಾಳದಲ್ಲಿ ವಿದ್ಯಾವರ್ಧಕ ಸಂಘ ಸ್ಥಾಪಿಸಿ, ಶಿಕ್ಷಣ ಸಂಸ್ಥೆ ಕಟ್ಟಿದ್ದಾರೆ. ಹಲವಾರು ಸಹಕಾರಿ ಸಂಘಗಳನ್ನು ಸ್ಥಾಪಿಸಿದ್ದಾರೆ. ಮಹದಾಯಿ–ಮಲಪ್ರಭಾ ಜೋಡಣೆ ಹೋರಾಟ ಸಮಿತಿ ಅಧ್ಯಕ್ಷರಾಗಿ ಹೋರಾಟ ಮಾಡಿದ್ದಾರೆ.
ಗರತಿ ಗಂಗಮ್ಮನ ಉಡಿಯಾಗ, ಹೆಣ್ಣು ಅಬಲೆಯಲ್ಲ ಸಬಲೆ, ಸಂಯೋಜಕ ಸರ್ವಜ್ಞ, ಲಂಚ ಸ್ವರ್ಗಕ್ಕೆ ದಾರಿ ಎಂಬ ಕೃತಿಗಳನ್ನು ರಚಿಸಿದ್ದಾರೆ. 1975 ರಿಂದ 77ರವರೆಗೆ ಶಾಸಕರಾಗಿದ್ದರು. 2001ರಲ್ಲಿ ನಿಧನರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.