ADVERTISEMENT

ಹುನಗುಂದ ಪುರಸಭೆ: ಯಾರಾಗಲಿದ್ದಾರೆ ಅಧ್ಯಕ್ಷೆ, ಉಪಾಧ್ಯಕ್ಷೆ?

ಸಂಗಮೇಶ ಹೂಗಾರ
Published 14 ಆಗಸ್ಟ್ 2024, 5:00 IST
Last Updated 14 ಆಗಸ್ಟ್ 2024, 5:00 IST
ಹುನಗುಂದ ಪಟ್ಟಣದ ಪುರಸಭೆ ಕಾರ್ಯಾಲಯ
ಹುನಗುಂದ ಪಟ್ಟಣದ ಪುರಸಭೆ ಕಾರ್ಯಾಲಯ   

ಹುನಗುಂದ: ಪಟ್ಟಣದ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪ್ರಕಟಿಸಿರುವ ಮೀಸಲಾತಿಯಲ್ಲಿ, ಎರಡೂ ಸ್ಥಾನಗಳು ಮಹಿಳೆಯರ ಪಾಲಾಗಿವೆ. ಸಾಮಾನ್ಯ ಮಹಿಳೆಗೆ ಅಧ್ಯಕ್ಷ ಸ್ಥಾನ ಹಾಗೂ ಪರಿಶಿಷ್ಟ ಜಾತಿ ಮಹಿಳೆಗೆ ಉಪಾಧ್ಯಕ್ಷ ಸ್ಥಾನ ನಿಗದಿಯಾಗಿದೆ.

ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದ ಎರಡು ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿರುವುದರಿಂದ ಅವರಲ್ಲಿ ಒಬ್ಬರು ಉಪಾಧ್ಯಕ್ಷರಾಗುವುದು ಖಚಿತ. ಆದರೆ, ಅಧ್ಯಕ್ಷ ಸ್ಥಾನಕ್ಕೆ ಮೂಲ ಮತ್ತು ವಲಸಿಗ ಸದಸ್ಯರು ಆಕಾಂಕ್ಷಿಗಳಾಗಿರುವುದರಿಂದ ಗದ್ದುಗೆ ಯಾರಿಗೆ ಎಂಬುದನ್ನು ಕಾದು ನೋಡಬೇಕಿದೆ.

23 ಸದಸ್ಯ ಬಲದ ಪುರಸಭೆಯಲ್ಲಿ 12 ಜನ ಕಾಂಗ್ರೆಸ್, 8 ಬಿಜೆಪಿ ಹಾಗೂ ಮೂವರು ಜೆಡಿಎಸ್ ಸದಸ್ಯರು ಇದ್ದಾರೆ. ಬಿಜೆಪಿ ಮತ್ತು ಜೆಡಿಎಸ್‌ನ ತಲಾ ಒಬ್ಬ ಸದಸ್ಯರು ಕಾಂಗ್ರೆಸ್ ಪಕ್ಷದೊಂದಿಗೆ ಬಹಿರಂಗವಾಗಿಯೇ ಗುರುತಿಸಿಕೊಂಡಿರುವ ಕಾರಣ ಕಾಂಗ್ರೆಸ್ ಪಕ್ಷಕ್ಕೆ ಸರಳ ಬಹುಮತ ‍ಪಡೆಯುವುದು ಸುಲಭ.

ADVERTISEMENT

ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಆರು ಮಹಿಳಾ ಸದಸ್ಯರಲ್ಲಿ ಗುರುಬಾಯಿ ಷಣ್ಮುಖಪ್ಪ ಹೂಗಾರ ಹಾಗೂ ಶಾಂತಮ್ಮ ನೂರಂದಪ್ಪ ಮೇಲಿನಮನಿ ಹಿಂದಿನ ಅವಧಿಯಲ್ಲಿ ಉಪಾಧ್ಯಕ್ಷರಾಗಿ ಅಧಿಕಾರ ಅನುಭವಿಸಿದ್ದು, ಪರಿಶಿಷ್ಟ ಜಾತಿ ಮಹಿಳಾ ಮೀಸಲು ಕ್ಷೇತ್ರದಿಂದ ಆಯ್ಕೆಗೊಂಡಿರುವ ಕಮಲವ್ವ ಯಲ್ಲಪ್ಪ ಸಂದಿಮನಿ ಮತ್ತು ರಾಜವ್ವ ಹನಮಪ್ಪ ಬದಾಮಿ ಈ ಬಾರಿ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.

ಕಾಂಗ್ರೆಸ್‌ನ ಭಾಗ್ಯಶ್ರೀ ಬಸವರಾಜ ರೇವಡಿ, ನಾಗರತ್ನಾ ಶಂಕ್ರಪ್ಪ ತಾಳಿಕೋಟಿ ಇವರ ಜೊತೆಗೆ ಬಿಜೆಪಿಯಿಂದ ಕಾಂಗ್ರೆಸ್ಸಿಗೆ ವಲಸೆ ಬಂದಿರುವ ಶರಣಮ್ಮ ಚೇತನ ಮುಕ್ಕಣ್ಣವರ ಹೆಸರು ಅಧ್ಯಕ್ಷ ಸ್ಥಾನಕ್ಕೆ ಕೇಳಿಬರುತ್ತಿದ್ದು, ಶಾಸಕ ವಿಜಯಾನಂದ ಕಾಶಪ್ಪನವರ ಕೈಗೊಳ್ಳುವ ನಿರ್ಧಾರವೇ ಅಂತಿಮ ಎನ್ನಲಾಗಿದೆ. ಅವರ ಮೇಲೆ ಪ್ರಭಾವ ಬೀರುವ ಕಾರ್ಯಗಳು ಈಗಾಲೇ ಆರಂಭಗೊಂಡಿದ್ದು, ಪಟ್ಟಣದ ಪುರಸಭೆಯ ಪ್ರಥಮ ಪ್ರಜೆ ಯಾರಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಹುನಗುಂದ ಪಟ್ಟಣದ ಪುರಸಭೆ ಕಾರ್ಯಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.