ಹುನಗುಂದ: ‘ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿಗೊಳಿಸಲು ವಿಳಂಬ ಮಾಡುತ್ತಿರುವ ಸರ್ಕಾರದ ಮೇಲೆ ಸಮುದಾಯದ ಸಚಿವರು ಮತ್ತು ಶಾಸಕರು ಒತ್ತಡ ಹಾಕಿಬೇಕು. ಜಾರಿ ಮಾಡದಿದ್ದರೆ ರಾಜೀನಾಮೆ ಕೊಡಬೇಕು’ ಎಂದು ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಹೇಳಿದರು.
ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಕೂಡಲಸಂಗಮ ಕ್ರಾಸ್‌ನಿಂದ ಮುದ್ದೇಬಿಹಾಳದ ಶಾಸಕ ಸಿ.ಎಸ್. ನಾಡಗೌಡರ ಮನೆವರೆಗಿನ ಹಮ್ಮಿಕೊಂಡ ಪಾದಯಾತ್ರೆಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
‘ಸುಪ್ರೀಂಕೋರ್ಟ್ ಆದೇಶದಂತೆ ಆಂಧ್ರ ಪ್ರದೇಶ, ತೆಲಂಗಾಣ, ಹರಿಯಾಣ, ಮಹಾರಾಷ್ಟ್ರ ಸರ್ಕಾರ ಒಳಮೀಸಲಾತಿ ಜಾರಿಗೆ ತಂದಿವೆ. ಕರ್ನಾಟಕದಲ್ಲಿ ರಾಜಕೀಯ ಕಾರಣದಿಂದ ವಿಳಂಬ ನೀತಿ ಅನುಸರಿಸುತ್ತಾ, ಮತ್ತೊಂದು ಸಮಿತಿ ರಚಿಸಲು ಹೊರಟಿದ್ದೀರಿ. ಮತ್ತೊಂದು ಸಮಿತಿಯ ಅಗತ್ಯ ಇಲ್ಲ’ ಎಂದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಲಹರಣ ಮಾಡುತ್ತಾ, ಒಳ ಮೀಸಲಾತಿ ಜಾರಿಗೆ ಮೀನಮೇಷ ಎಣಿಸುತ್ತಿದ್ದಾರೆ. ಸಮಾಜದ ಋಣ ತೀರಿಸಲು ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನದಲ್ಲಿ ಒಳಮೀಸಲಾತಿ ಜಾರಿಗೊಳಿಸಬೇಕು. ಇಲ್ಲಿದಿದ್ದರೆ ಮಾದಿಗ ಸಮುದಾಯದಿಂದ ಚಳವಳಿ ನಡೆಸಲಾಗುವುದು’ ಎಂದು ಎಚ್ಚರಿಸಿದ್ದರು.
ಬಸವರಾಜ ಸಿದ್ದಾಪುರ, ರಾಜೇಶ್ವರಿ ಡಿ. ದೊಡಮನಿ, ಡಿ. ಶೇಖು ಆಲೂರು, ದುರಗಪ್ಪ ದೊಡಮನಿ, ಆನಂದ ದೇವೂರು, ಸುರೇಶ ಹೊಸಮನಿ, ಆನಂದ ಮುದೂರ, ರವಿ ಗರಸಂಗಿ, ಚಂದಪ್ಪ ಮಾದರ, ಪರಶುರಾಮ ಮಾದರ, ಬಸವರಾಜ ಕಿರಸೂರ, ರುದ್ರಪ್ಪ ವರಗೋಡದಿನ್ನಿ, ಮಂಜುನಾಥ್ ಬಿಸಲದಿನ್ನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.