ADVERTISEMENT

ಹುನಗುಂದ: ಇಂದಿರಾ ಕ್ಯಾಂಟಿನ್ ಉದ್ಘಾಟನೆ ಯಾವಾಗ?

ದೂಳಿನಿಂದ ಆವರಿಸಿದ ಕ್ಯಾಂಟಿನ್‌ ಅಡುಗೆ ಮನೆ ಸಾಮಗ್ರಿಗಳು

ಸಂಗಮೇಶ ಹೂಗಾರ
Published 20 ಮೇ 2023, 23:33 IST
Last Updated 20 ಮೇ 2023, 23:33 IST
ಹುನಗುಂದದ ಗುರುಭವನದ ಪಕ್ಕದಲ್ಲಿರುವ ಇಂದಿರಾ ಕ್ಯಾಂಟಿನ್ ಕಟ್ಟಡ
ಹುನಗುಂದದ ಗುರುಭವನದ ಪಕ್ಕದಲ್ಲಿರುವ ಇಂದಿರಾ ಕ್ಯಾಂಟಿನ್ ಕಟ್ಟಡ   

ಹುನಗುಂದ: ಪಟ್ಟಣದಲ್ಲಿ ಸುಸಜ್ಜಿತ ಇಂದಿರಾ ಕ್ಯಾಂಟಿನ್ ನಿರ್ಮಿಸಿ ನಾಲ್ಕು ವರ್ಷ ಗತಿಸಿದೆ. ಆದರೆ, ಈವರೆಗೆ ಉದ್ಘಾಟನೆ ಭಾಗ್ಯ ಕಂಡಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, ಕ್ಷೇತ್ರದಲ್ಲೂ ಕಾಂಗ್ರೆಸ್ ಶಾಸಕರು ಇರುವುದರಿಂದ ಕ್ಯಾಂಟಿನ್ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿದೆ.

ಪಟ್ಟಣದ ವಾರ್ಡ್‌ ನಂ.20ರ ಗುರುಭವನದ ಹತ್ತಿರ ಇಂದಿರಾ ಕ್ಯಾಂಟಿನ್ ನಿರ್ಮಿಸಲಾಗಿದೆ. ಕ್ಯಾಂಟಿನ್ ಅಡುಗೆ ಕೊಠಡಿಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಅಗತ್ಯ ಉಪಕರಣಗಳನ್ನು ಅಳವಡಿಸಿ 3-4 ವರ್ಷಗಳು ಕಳೆದಿದ್ದು, ಬಳಕೆ ಮಾಡದ್ದರಿಂದ ಉಪಕರಣಗಳು ದೂಳಿನಿಂದ ಆವೃತವಾಗಿವೆ.

ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ‘ಹಸಿವು ಮುಕ್ತ ಕರ್ನಾಟಕ ಯೋಜನೆ’ ಅಡಿ ತಾಲ್ಲೂಕಿಗೆ ಒಂದರಂತೆ ಇಂದಿರಾ ಕ್ಯಾಂಟಿನ್‌ನ್ನು 2018ರಲ್ಲಿ ಆರಂಭಿಸಿತು. ಸಿದ್ದರಾಮಯ್ಯನವರ ಮಹತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟಿನ್ ಸ್ಥಾಪನೆ. ಇದರ ಮುಖ್ಯ ಉದ್ದೇಶ ಬಡ ಜನರಿಗೆ ಕಡಿಮೆ ದರದಲ್ಲಿ ಹಸಿವು ನೀಗಿಸುವುದಾಗಿದೆ. ಅಂದರೆ ಬೆಳಗ್ಗೆ ₹5ಕ್ಕೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ₹10ಕ್ಕೆ ಊಟ ಒದಗಿಸಲಾಗುತ್ತಿದೆ.

ADVERTISEMENT

ಹಿಂದಿನ ಅವಧಿಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿತ್ತು. ಪಟ್ಟಣದಲ್ಲಿ ನಿರ್ಮಾಣವಾಗಿದ್ದ ಇಂದಿರಾ ಕ್ಯಾಂಟಿನ್‌ನ್ನು ಉದ್ಘಾಟಿಸಿ ಆರಂಭಿಸಲು ಉತ್ಸಾಹ ತೋರಲಿಲ್ಲ. ಇದರೊಂದಿಗೆ ಕೋವಿಡ್-19 ಲಾಕ್‌ಡೌನ್ ದುರಿತ ಕಾಲದಲ್ಲಿ ಬಡವರ ಹಸಿವು ನೀಗಿಸಲು ರಾಜ್ಯದ ಎಲ್ಲ ಇಂದಿರಾ ಕ್ಯಾಂಟಿನ್ ಗಳಲ್ಲಿ ಸರ್ಕಾರ ಉಚಿತವಾಗಿ ಊಟದ ವ್ಯವಸ್ಥೆ ಮಾಡಿದ್ದರೂ ಪಟ್ಟಣದ ಜನತೆಗೆ ಮಾತ್ರ ಈ ಭಾಗ್ಯ ದೊರೆಯಲಿಲ್ಲ.

ಕಾಂಗ್ರೆಸ್ ಕಾರ್ಯಕರ್ತರು ಜೊತೆಗೆ ಸ್ಥಳೀಯ ಕೆಲ ಸಂಘಟನೆಗಳು ಇಂದಿರಾ ಕ್ಯಾಂಟಿನ್ ಆರಂಭಿಸಲು ಸಾಮಾಜಿಕ ಜಾಲತಾಣದಲ್ಲಿ ಕ್ಯಾಂಪೇನ್ ನಡೆಸಿದ್ದರು.

‘ಪುರಸಭೆ ಮತ್ತು ಕ್ಷೇತ್ರದ ನೂತನ ಶಾಸಕರು ಆದಷ್ಟು ಬೇಗ ಇಂದಿರಾ ಕ್ಯಾಂಟಿನ್ ಪ್ರಾರಂಭಿಸಲು ಇಚ್ಚಾಶಕ್ತಿ ತೋರಿಸಬೇಕು. ಇದರಿಂದ ನಿತ್ಯ ಪಟ್ಟಣಕ್ಕೆ ಬರುವ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಗ್ರಾಮೀಣ ಭಾಗದ ಬಡ ಕೂಲಿ ಕಾರ್ಮಿಕರಿಗೆ ಕಡಿಮೆ ದರದಲ್ಲಿ ಉಪಾಹಾರ ಮತ್ತು ಊಟ  ದೊರೆಯುವುದು’ ಎಂದು ಗುಡೂರು ಗ್ರಾಮದ ಕಟ್ಟಡ ಕಾರ್ಮಿಕ ಪರಸಪ್ಪ ಬೋವಿ ತಿಳಿಸಿದರು.ಪಟ್ಟಣದಲ್ಲಿರುವ ಇಂದಿರಾ ಕ್ಯಾಂಟಿನ್ ಉದ್ಘಾಟನೆಯಾಗಿಲ್ಲ. ಆದಷ್ಟು ಬೇಗ ಉದ್ಘಾಟನೆಯಾಗುವ ನಿರೀಕ್ಷೆಯಿದೆ. ಉಪಾಹಾರ ಮತ್ತು ಊಟಕ್ಕೆ ಹೊಸದಾಗಿ ಟೆಂಡರ್ ಕರೆಯಲಾಗುವುದು ಸತೀಶ ಕುಮಾರ ಚವಡಿ ಪುರುಸಭೆ ಮುಖ್ಯಾಧಿಕಾರಿ ಹುನಗುಂದ

ಹುನಗುಂದದ ಗುರುಭವನದ ಪಕ್ಕದಲ್ಲಿರುವ ಸುಜ್ಜಿತ ಇಂದಿರಾ ಕ್ಯಾಂಟಿನ್ ಕಟ್ಟಡ
ಪಟ್ಟಣದಲ್ಲಿರುವ ಇಂದಿರಾ ಕ್ಯಾಂಟಿನ್ ಉದ್ಘಾಟನೆಯಾಗಿಲ್ಲ. ಆದಷ್ಟು ಬೇಗ ಉದ್ಘಾಟನೆಯಾಗುವ ನಿರೀಕ್ಷೆಯಿದೆ. ಉಪಾಹಾರ ಮತ್ತು ಊಟಕ್ಕೆ ಹೊಸದಾಗಿ ಟೆಂಡರ್ ಕರೆಯಲಾಗುವುದು
-ಸತೀಶ ಕುಮಾರ ಚವಡಿ ಪುರುಸಭೆ ಮುಖ್ಯಾಧಿಕಾರಿ ಹುನಗುಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.