ಬಾಗಲಕೋಟೆ: ಅಕ್ಕಪಕ್ಕದ ಮನೆಯವರು ನೀಡಿದ್ದ ದೂರಿನ ಬಗ್ಗೆ ಪರಿಶೀಲನೆಗೆ ಹಾಗೂ ಹಳೆಯ ಪ್ರಕರಣವೊಂದರ ವಾರೆಂಟ್ ಜಾರಿ ಮಾಡಲು ಇಳಕಲ್‌ನ ತಮ್ಮ ನಿವಾಸಕ್ಕೆ ಬಂದ ಪೋಲಿಸರೊಂದಿಗೆ ಶನಿವಾರ ಹುನಗುಂದದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ವಾಗ್ವಾದ ನಡೆಸಿದ್ದಾರೆ.
ಆ ವೀಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹುನಗುಂದದ ವೃತ್ತ ನಿರೀಕ್ಷಕ ಹೊಸಕೇರಪ್ಪ, ನಗರ ಠಾಣೆ ಸಬ್ಇನ್ಸ್ಪೆಕ್ಟರ್ ಎಸ್.ಬಿ.ಪಾಟೀಲ, ಗ್ರಾಮೀಣ ಠಾಣೆ ಸಬ್ಇನ್‌ಸ್ಪೆಕ್ಟರ್‌ಬಸವರಾಜ ತಿಪ್ಪಾರಡ್ಡಿ ತಂಡ ಕಾಶಪ್ಪನವರ ನಿವಾಸಕ್ಕೆ ತೆರಳಿತ್ತು.
ಪೊಲೀಸರು ಅಕ್ರಮವಾಗಿ ಮನೆಗೆ ನುಗ್ಗಿದ್ದಾರೆ ಎಂದು ಈ ವೇಳೆ ವಿಜಯಾನಂದ ಹರಿಹಾಯ್ದಿದ್ದಾರೆ. 'ನಾನೇನು ತಪ್ಪು ಮಾಡಿಲ್ಲ, ನನ್ನ ವಿರುದ್ಧ ಯಾವ ವಾರಂಟ್ ಸಹ ಇಲ್ಲ...ನನ್ನನ್ನು ಅರೆಸ್ಟ್ ಮಾಡಿ ನೋಡೋಣ' ಎಂದು ಸವಾಲು ಹಾಕಿದ್ದಾರೆ.
ಆಗ ಪೋಲಿಸರು ಹಾಗೂ ವಿಜಯಾನಂದ ನಡುವೆ ಬಿರುಸಿನ ಮಾತುಕತೆ ನಡೆದಿದೆ.
'ಕಾಶಪ್ಪನವರ ಮನೆಯಲ್ಲಿ ಗಲಾಟೆ ನಡೆಯುತ್ತಿದೆ. ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸುತ್ತಿರುವ ಶಬ್ಧ ಕೇಳಿಸುತ್ತಿದೆ. ಹೊಡೆತ ತಾಳಲಾರದೇ ಆಕೆ ಜೋರಾಗಿ ಅಳುತ್ತಿರುವ ಸದ್ದು ಕೇಳುತ್ತಿದೆ ಎಂದು ಅಕ್ಕಪಕ್ಕದ ಮನೆಯವರು ಇಳಕಲ್ ಪೊಲೀಸ್ ಠಾಣೆಗೆ ಕರೆ ಮಾಡಿ ಮೌಖಿಕ ದೂರು ನೀಡಿದ್ದರು. ಅದನ್ನು ಪರಿಶೀಲಿಸಿ ಆ ಮಹಿಳೆಯನ್ನು ರಕ್ಷಿಸಲು ಹಾಗೂ ಬೆಂಗಳೂರಿನ ನ್ಯಾಯಾಲಯ ನೀಡಿದ್ದ ಜಾಮೀನು ಸಹಿತ ವಾರೆಂಟ್ ತಲುಪಿಸಲು ನಮ್ಮ ಪೊಲೀಸರು ಅಲ್ಲಿಗೆ ತೆರಳಿದ್ದರು' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ 'ಪ್ರಜಾವಾಣಿ'ಗೆ ತಿಳಿಸಿದರು.
ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು 'ಪ್ರಜಾವಾಣಿ' ವಿಜಯಾನಂದ ಕಾಶಪ್ಪನವರ ಅವರಿಗೆ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.