ಬಾಗಲಕೋಟೆ: ಪ್ರವಾಸೋದ್ಯಮ ಇಲಾಖೆ ಖಾತೆಯಲ್ಲಿದ್ದ ₹2.47 ಕೋಟಿ ಅನುದಾನದ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಡಿಬಿಐ ಬ್ಯಾಂಕ್‌ನ ‘ಸೇಲ್ಸ್ ಎಕ್ಸಿಕ್ಯೂಟಿವ್’ ಸೂರಜ್ ಸಾಗರ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ರಮದಲ್ಲಿ ಭಾಗಿಯಾದ ಇನ್ನಷ್ಟು ಜನರ ಪತ್ತೆಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.
ಹಗರಣ ಗೊತ್ತಾಗುತ್ತಿದ್ದಂತೆಯೇ ಐಡಿಬಿಐ ಬ್ಯಾಂಕ್‌ನ ನಾಲ್ಕಕ್ಕೂ ಹೆಚ್ಚು ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ಕೆಲವರು ರಜೆ ಹಾಕಿದರೆ, ಇನ್ನೂ ಕೆಲವರು ಅನಧಿಕೃತವಾಗಿ ಗೈರಾಗಿದ್ದಾರೆ.
‘ಬ್ಯಾಂಕ್‌ನ ಹೊರಗುತ್ತಿಗೆ ನೌಕರನಾಗಿದ್ದ ಸೂರಜ್ ಮತ್ತು ಬ್ಯಾಂಕ್‌ನ ಕೆಲ ಸಿಬ್ಬಂದಿ ನಕಲಿ ವೋಚರ್, ಜಿಲ್ಲಾಧಿಕಾರಿ ಸಹಿ ಸೇರಿ ವಿವಿಧ ದಾಖಲೆ ಸೃಷ್ಟಿಸಿ, ಸ್ನೇಹಿತರ ಖಾತೆಗೆ ಹಣ ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ. ಇಲಾಖೆಯ ಹಣವನ್ನು ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿ, ಹಣ ಮರಳಿ ಪಡೆದಿದ್ದಾರೆ’ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.
ಹಣ ವರ್ಗಾವಣೆಯಾದ ಖಾತೆದಾರರನ್ನು ಕರೆದು ವಿಚಾರಣೆ ಆರಂಭಿಸಲಾಗಿದೆ. ‘ಖಾತೆಗೆ ಹಣ ಜಮಾ ಆಗಿರುವುದು ನಿಜ. ಸ್ನೇಹಿತನೆಂದು ಹಣ ಹಾಕಿಸಿಕೊಂಡು, ನಂತರ ಅವನಿಗೆ ಮರಳಿ ನೀಡಿದ್ದೇವೆ ಎಂದಿದ್ದಾರೆ’ ಎಂದು ತಿಳಿದು ಬಂದಿದೆ.
ಗ್ರಾಹಕರ ಖಾತೆಯಿಂದಲೂ ಹಣ ಡ್ರಾ: ‘ಇಲಾಖೆಯ ಮೂರು ಖಾತೆಗಳಲ್ಲಿ ಹಣವನ್ನು ತಮ್ಮ ಸ್ನೇಹಿತರ ಖಾತೆಗಳಿಗೆ ವರ್ಗಾವಣೆ ಮಾಡಿ ಹಣವಿಲ್ಲದಂತೆ ಮಾಡಲಾಗಿತ್ತು. ಇಲಾಖೆಯ ಅಧಿಕಾರಿಗಳು ಕಾಮಗಾರಿಗೆ ಸಂಬಂಧಿಸಿದ ಚೆಕ್ ನೀಡಿದಾಗ ಅದು ಪಾಸಾಗದಿದ್ದರೆ, ಇಲಾಖೆಯ ಅಧಿಕಾರಿಗಳಿಗೆ ಗೊತ್ತಾಗುತ್ತದೆ ಎಂದು ಬ್ಯಾಂಕ್‌ನ ಬೇರೆ ಗ್ರಾಹಕರ ಖಾತೆಯಲ್ಲಿದ್ದ ಹಣ ಡ್ರಾ ಮಾಡಿ ಚೆಕ್ ಪಾಸ್
ಮಾಡಲಾಗುತ್ತಿತ್ತು’ ಎಂದು ಮೂಲಗಳು ತಿಳಿಸಿವೆ.
‘ಗ್ರಾಹಕರು ಬಂದು ತಮ್ಮ ಖಾತೆಯಿಂದ ಹಣ ಡ್ರಾ ಆಗಿರುವ ಕುರಿತು ದೂರು ನೀಡಿದಾಗ ತಪ್ಪಾಗಿ ಬೇರೆ ಖಾತೆಗೆ ಜಮಾ ಮಾಡಲಾಗಿದೆ. ಒಂದೆರಡು ದಿನಗಳಲ್ಲಿ ವಾಪಸ್ ಜಮಾ ಮಾಡಿಸುವುದಾಗಿ ಹೇಳಿ ಕಳುಹಿಸುತ್ತಿದ್ದರು. ಮತ್ತೊಬ್ಬರ ಖಾತೆಯಲ್ಲಿದ್ದ ಹಣವನ್ನು ಡ್ರಾ ಮಾಡಿ ಇವರ ಖಾತೆಗೆ ಜಮಾ ಮಾಡುತ್ತಿದ್ದರು. ಹೀಗೆಯೇ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಗೊತ್ತಾಗದಂತೆ ನಿರ್ವಹಣೆ ಮಾಡಿದ್ದರು’ ಎಂದು ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.