ತೇರದಾಳ: ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಲಘುವಾಗಿ ಮಾತನಾಡಿದ ಸಚಿವ ಶಿವಾನಂದ ಪಾಟೀಲ ಅವರೇ ಆತ್ಮಹತ್ಯೆ ಮಾಡಿಕೊಂಡರೆ ರೈತರೆಲ್ಲ ಸೇರಿ ದೇಣಿಗೆ ಸಂಗ್ರಹಿಸಿ ಅವರ ಕುಟುಂಬಕ್ಕೆ ಪರಿಹಾರ ನೀಡಲು ಸಿದ್ಧ ಎಂದು ರೈತ ಹೋರಾಟಗಾರ ಶಶಿಕಾಂತ ಪಡಸಲಗಿ ಕಿಡಿಕಾರಿದರು.
ತಾಲ್ಲೂಕಿನ ಹಳಿಂಗಳಿ ಗ್ರಾಮದ ಅಲ್ಲಮಪ್ರಭು ಜಾತ್ರಾಮಹೋತ್ಸವ ವೇದಿಕೆಯಲ್ಲಿ ಮಂಗಳವಾರ ಜರುಗಿದ ರೈತ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಉತ್ತರ ಕರ್ನಾಟಕ ಭಾಗದಲ್ಲಿ ರೈತ ಹೋರಾಟವು ಇನ್ನಷ್ಟು ಬಲಿಷ್ಠಗೊಳ್ಳುವ ಜೊತೆಗೆ ಮುಂಬರುವ ಚುನಾವಣೆಯಲ್ಲಿ ಈ ಭಾಗದ ಹತ್ತು ಶಾಸಕರನ್ನು ವಿಧಾನಸಭೆಗೆ ಕಳುಹಿಸಿಕೊಡಬೇಕಿದೆ. ಅಂತಹ ಸಂಘನಾತ್ಮಕ ಹೋರಾಟವು ಸರ್ಕಾರದ ಗಮನಕ್ಕೆ ಹೋಗುತ್ತದೆ. ವಿವಿಧ ಸಂಘಟನೆಗಳಲ್ಲಿರುವ ರೈತರೆಲ್ಲರೂ ಒಗ್ಗಟ್ಟಾಗಿ ಸಂಘನಾತ್ಮಕ ಹೋರಾಟಕ್ಕೆ ಅಣಿಯಾಗಬೇಕು’ ಎಂದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಚನ್ನಪ್ಪ ಪೂಜಾರಿ, ಮುಖಂಡ ರಾಜು ಪವಾರ, ಮುತ್ತಪ್ಪ ಕೋಮಾರ ಮಾತನಾಡಿ, ‘ರೈತ ಸಂಘಟನೆಯ ನಾಲ್ಕು ದಶಕಗಳ ಹೋರಾಟ ಹಾಗೂ ದಿಟ್ಟ ನಿರ್ಧಾರಗಳು ಇಂದು ರೈತರ ಬೆನ್ನೆಲುಬಾಗಿವೆ. ಮುಂಬರುವ ಹೋರಾಟ ಹಾಗೂ ಸಂಘಟನೆಯಲ್ಲಿ ಯುವಶಕ್ತಿಯನ್ನು ತೊಡಗಿಸಿಕೊಂಡು ಒಗ್ಗಟ್ಟಿ ಬಲಪ್ರದರ್ಶನ ಮಾಡೋಣ’ ಎಂದರು.
ಶಿವಪ್ರಸಾದ ಸ್ವಾಮೀಜಿ ಮಾತನಾಡಿದರು. ಸಿದ್ದಪ್ಪ ಬಿದರಿ, ಶ್ರೀಕಾಂತ ಘೂಳನ್ನವರ, ಶಿವನಗೌಡ ಪಾಟೀಲ, ಸಿದ್ದಪ್ಪ ನಾಜ, ಗೋವಿಂದ ಬೆಳಗಂಟಿ, ಸುರೇಶ ಪರಗನ್ನವರ, ರಾಚಪ್ಪ ಕಳ್ಳೊಳ್ಳಿ, ಸುಭಾಸ ಶಿರಬೂರ, ಬಸವಂತಪ್ಪ ಕಾಂಬಳೆ, ಯಂಕಣ್ಣ ಮರಡಿ, ಈರಣ್ಣ ಸಸಾಲಟ್ಟಿ, ಹೊನ್ನಪ್ಪ ಬಿರಡಿ, ನೇಕಾರ ಸಂಘದ ಶಿವಲಿಂಗ ಟಿರಕಿ, ಮಹಾವೀರ ಪ್ರಭು, ಝುಂಜರವಾಡ ಬಸವರಾಜೇಂದ್ರ ಶರಣರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.