ADVERTISEMENT

2ಎ ಮೀಸಲಾತಿಗೆ ಸದನದಲ್ಲಿ ಆಗ್ರಹಿಸುವೆ: ಶಾಸಕ ಕಾಶಪ್ಪನವರ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 15:27 IST
Last Updated 11 ಜುಲೈ 2024, 15:27 IST
ಪಂಚಮಸಾಲಿ ಸಮಾಜದ 2ಎ ಮೀಸಲಾತಿಗಾಗಿ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಒತ್ತಾಯಿಸಿ ಇಳಕಲ್‌ನಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಶಾಸಕ ವಿಜಯಾನಂದ ಕಾಶಪ್ಪನವರ ಅವರಿಗೆ ಬುಧವಾರ ಮನವಿ ಸಲ್ಲಿಸಿದರು
ಪಂಚಮಸಾಲಿ ಸಮಾಜದ 2ಎ ಮೀಸಲಾತಿಗಾಗಿ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಒತ್ತಾಯಿಸಿ ಇಳಕಲ್‌ನಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಶಾಸಕ ವಿಜಯಾನಂದ ಕಾಶಪ್ಪನವರ ಅವರಿಗೆ ಬುಧವಾರ ಮನವಿ ಸಲ್ಲಿಸಿದರು   

ಇಳಕಲ್: ‘ಲಿಂಗಾಯತ ಪಂಚಮಸಾಲಿ ಸಮಾಜವನ್ನು ಪ್ರವರ್ಗ 2ಎ ಅಡಿ ಸೇರಿಸಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ 28 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ನ್ಯಾಯ ಸಿಗುವವರೆಗೆ ಈ ಹೋರಾಟ ನಿಲ್ಲದು, ಸಂದರ್ಭ ಬಂದರೆ ಅಧಿಕಾರ ತ್ಯಾಗ ಮಾಡಿ ಹೋರಾಟದಲ್ಲಿ ಪಾಲ್ಗೊಳ್ಳುವೆ’ ಎಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ನಗರದಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮೀಸಲಾತಿಗಾಗಿ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಒತ್ತಾಯಿಸಿ ನೀಡಿದ ಆಗ್ರಹ ಪತ್ರ ಸ್ವೀಕರಿಸಿ, ಮಾತನಾಡಿದರು.

‘ಸ್ವಾಮೀಜಿ ಅವರೊಂದಿಗೆ ನಾನೂ ಕೂಡಲಸಂಗಮದಿಂದ ಬೆಂಗಳೂರಿನವರೆಗೂ 750 ಕಿ.ಮೀ ಪಾದಯಾತ್ರೆಯಲ್ಲಿ ಭಾಗವಹಿಸಿ, ಸಮಾಜದ ಪರವಾಗಿ ದನಿ ಎತ್ತುತ್ತಾ ಬಂದಿರುವೆ. ಪಂಚಮಸಾಲಿ ಸಮಾಜಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ. ಅಧಿಕಾರಕ್ಕಿಂತ ಸಮಾಜದ ಹಿತ ಮುಖ್ಯ. ಅಧಿವೇಶನದಲ್ಲಿ ಮೀಸಲಾತಿಗಾಗಿ ಧ್ವನಿ ಎತ್ತಿ ಸರ್ಕಾರದ ಗಮನ ಸೆಳೆಯುವೆ’ ಎಂದು ಹೇಳಿದರು.

ADVERTISEMENT

ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಶ್ರೀ ಮಾತನಾಡಿ, ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ 7ನೇ ಹಂತದ ಹೋರಾಟ ಶುರು ಮಾಡಿದ್ದೇವೆ. ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡಿದೆವು. ಹಿಂದಿನ ಬಿಜೆಪಿ ಸರ್ಕಾರ, ಬೇರೆ ಸಮಾಜದ ಮೀಸಲಾತಿ ಕಿತ್ತುಕೊಂಡು ‘2ಡಿ’ ಸೃಜಿಸಿ ಸಮಾಜಕ್ಕೆ ಮೀಸಲಾತಿ ನೀಡಿತ್ತು. ನಾವು ಬೇರೊಂದು ಸಮಾಜದ ಮೀಸಲಾತಿ ಕಿತ್ತು ನಮಗೆ ಕೊಡಿ ಎಂದು ಕೇಳಿರಲಿಲ್ಲ. ಹಾಗಾಗಿ ಅದನ್ನು ನಮ್ಮ ಸಮಾಜ ತಿರಸ್ಕರಿಸಿದೆ’ ಎಂದು ತಿಳಿಸಿದರು.

‘2ಎ’ ಅಡಿ ಮೀಸಲಾತಿ ಕಲ್ಪಿಸುವಂತೆ ಬೇಡಿಕೆ ಇಟ್ಟಿದ್ದೇವು. ಈ ಬಾರಿ ಸಿದ್ಧರಾಮಯ್ಯನವರ ಸರ್ಕಾರ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುತ್ತದೆ ಎನ್ನುವ ನಂಬಿಕೆ ಇದೆ. ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷರು ಆಗಿರುವ ಶಾಸಕ ವಿಜಯಾನಂದ ಕಾಶಪ್ಪನವರ ನಮ್ಮ ಆಗ್ರಹವನ್ನು ಸರ್ಕಾರಕ್ಕೆ ತಲುಪಿಸಿ, 2ಎ ಮೀಸಲಾತಿ ದೊರಕಿಸಿ ಕೊಡುತ್ತಾರೆ ಎನ್ನುವ ವಿಶ್ವಾಸವಿದೆ. ಮುಂಬರುವ ಅಧಿವೇಶದಲ್ಲಿ ಶಾಸಕರು ಈ ಬಗ್ಗೆ ಮಾತನಾಡಬೇಕುʼ ಎಂದು ಹೇಳಿದರು.

ಲಿಂಗಾಯತ ಪಂಚಮಸಾಲಿ ಸಮಾಜದ ರೈತ ಘಟಕದ ಅಧ್ಯಕ್ಷ ಅಮರೇಶ ನಾಗೂರ, ಮಹಾಂತೇಶ ನರಗುಂದ, ಮಹಾಂತೇಶ ಯಲಬುರ್ತಿ, ಹುಚ್ಚಪ್ಪ ಐಹೊಳೆ, ನಿಂಗಮ್ಮ ಬೇವೂರ, ಅಕ್ಕಮ್ಮ ಪಾಟೀಲ, ಶಿಲ್ಪಾ ನರಗುಂದ, ಬಸು ಪಾಟೀಲ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.