ಬಾಗಲಕೋಟೆ: ಯೂನಸ್ ದಲಾಯತ್ ತೋರಿದ ಆಲ್‌ರೌಂಡ್ ಪ್ರದರ್ಶನದ ನೆರವಿನಿಂದ ಇಳಕಲ್‌ನ ತಾಜ್ ಕ್ರಿಕೆಟ್ ಕ್ಲಬ್ ತಂಡ ಸೋಮವಾರ ಕೆಎಸ್‌ಸಿಎ ರಾಯಚೂರು ವಲಯದ ಮೂರನೇ ಡಿವಿಷನ್ ಲೀಗ್‌ನಲ್ಲಿ ಹುನಗುಂದದ ಫಾರ್ಮರ್ಸ್ ಕ್ಲಬ್ ವಿರುದ್ಧ ಐದು ವಿಕೆಟ್‌ಗಳ ಅಂತರದ ಜಯ ಗಳಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹುನಗುಂದ ಫಾರ್ಮರ್ಸ್ ಕ್ಲಬ್ 30.4 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 142 ರನ್‌ಗಳಿಸಿತು. ತಂಡದ ಪರವಾಗಿ ಹುಲ್ಲಪ್ಪ ಕೊಪ್ಪದ 53 ಎಸೆತಗಳಲ್ಲಿ ಆರು ಬೌಂಡರಿ ನೆರವಿನಿಂದ 35 ರನ್ ಗಳಿಸಿದರೆ, ಚನ್ನಪ್ಪ 30 ಎಸೆತಗಳಲ್ಲಿ ನಾಲ್ಕು ಬೌಂಡರಿಯೊಂದಿಗೆ 20 ರನ್ ಬಾರಿಸಿದರು. ಓಂಪ್ರಕಾಶ್ 17 ಎಸೆತಗಳಲ್ಲಿ 2 ಬೌಂಡರಿ ನೆರವಿನಿಂದ 14 ರನ್ ಗಳಿಸಿದರು.
ಇಳಕಲ್ ತಾಜ್ ತಂಡದ ಪರವಾಗಿ ಯೂನಸ್ ದಲಾಯತ್ 18 ರನ್ ನೀಡಿ ಮೂರು ವಿಕೆಟ್ ಗಳಿಸಿದರೆ, ಮೊಹಮ್ಮದ್ ಅಲಿ ಕಲಬುರಗಿ 14 ರನ್ ನೀಡಿ ಎರಡು ವಿಕೆಟ್ ಪಡೆದರು. ಅವರಿಗೆ ಉತ್ತಮ ಸಾಥ್ ನೀಡಿದ ಪುಂಡಲೀಕ 19 ರನ್ ನೀಡಿ ಎರಡು ವಿಕೆಟ್ ಕಬಳಿಸಿದರು.
ಸುಲಭ ಗುರಿ ಬೆನ್ನತ್ತಿದ್ದ ತಾಜ್ ತಂಡ, 29.3 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿ ಗೆಲುವಿನ ನಗೆ ಬೀರಿತು. ತಾಜ್ ತಂಡದ ಪರವಾಗಿ 78 ಎಸೆತಗಳಲ್ಲಿ ಐದು ಬೌಂಡರಿ, ಒಂದು ಸಿಕ್ಸರ್ ಬಾರಿಸಿದ ಜಾವೀದ್ 43 ರನ್ ಗಳಿಸಿದರು. 32 ಎಸೆತಗಳಲ್ಲಿ ನಾಲ್ಕು ಬೌಂಡರಿಯೊಂದಿಗೆ 25 ರನ್ ಗಳಿಸಿದರೆ, ಮುನೀರ್ 23 ಎಸೆತಗಳಲ್ಲಿ ನಾಲ್ಕು ಬೌಂಡರಿ ನೆರವಿನೊಂದಿಗೆ 19 ರನ್ ಹೊಡೆದರು.
ಹುನಗುಂದ ಫಾರ್ಮರ್ಸ್ ಕ್ಲಬ್ ಪರವಾಗಿ ಓಂಪ್ರಕಾಶ್ ಹಾಗೂ ರವಿ ವಲಜಾಪುರ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಹುಲ್ಲಪ್ಪ ಒಂದು ವಿಕೆಟ್ ಪಡೆದರು.
ಬ್ಯಾಟಿಂಗ್‌ನಲ್ಲಿ 14 ರನ್‌ಗಳಿಸಿ, ಬೌಲಿಂಗ್‌ನಲ್ಲಿ ಫಾರ್ಮರ್ಸ್ ಕ್ಲಬ್‌ನ ಮೂರು ಪ್ರಮುಖ ವಿಕೆಟ್‌ಗಳನ್ನು ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ತಾಜ್ ಕ್ರಿಕೆಟ್ ಕ್ಲಬ್‌ನ ಯೂನಸ್ ದಲಾಯತ್ ಪಂದ್ಯಪುರಷೋತ್ತಮ ಶ್ರೇಯಕ್ಕೆ ಪಾತ್ರರಾದರು.
ನಾಳೆ ಪಂದ್ಯ..
ಹುನಗುಂದದ ಫಾರ್ಮರ್ಸ್ ಕ್ರಿಕೆಟ್ ಕ್ಲಬ್ ತಂಡ ತನ್ನ ಎರಡನೇ ಪಂದ್ಯವನ್ನು ಮಂಗಳವಾರ ಬಾಗಲಕೋಟೆಯ ರಾಘವೇಂದ್ರ ಕ್ರಿಕೆಟ್ ಕ್ಲಬ್ ವಿರುದ್ಧ ಆಡಲಿದೆ. ಬಸವೇಶ್ವರ ಕಾಲೇಜು ಮೈದಾನದಲ್ಲಿ ಬೆಳಿಗ್ಗೆ 9.30ಕ್ಕೆ ಪಂದ್ಯ ಆರಂಭವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.