ರಬಕವಿ ಬನಹಟ್ಟಿ: ‘ಬನಹಟ್ಟಿಯ ಕೈಮಗ್ಗ ಅಭಿವೃದ್ಧಿ ನಿಗಮದಲ್ಲಿ ನೇಕಾರಿಕೆ ಮಾಡುತ್ತಿರುವ ನೇಕಾರರಿಗೆ ನಿವೇಶನ ಹಂಚಿಕೆ ಮತ್ತು ಅವರು ನಾಲ್ಕು ದಶಕಗಳಿಂದ ವಾಸ ಮಾಡುತ್ತಿರುವ ಮನೆಗಳಿಗೆ ಸಿಟಿಎಸ್ ಉತಾರಗಳನ್ನು ನೀಡುವಂತೆ ಮತ್ತು ನಿರಂತರ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ನ.20ರಿಂದ ಬನಹಟ್ಟಿಯ ಕೆಎಚ್‌ಡಿಸಿ ಕಾರ್ಯಾಲಯದ ಮುಂಭಾಗದಲ್ಲಿ ಅನಿರ್ದಿಷ್ಟಾವಧಿಯವರಿಗೆ ಮುಷ್ಕರ ನಡೆಸಲಾಗುವುದು’ ಎಂದು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ತಿಳಿಸಿದರು.
ಅವರು ಶನಿವಾರ ರಬಕವಿ ಬನಹಟ್ಟಿ ತಹಶೀಲ್ದಾರ್ ಗಿರೀಶ ಸ್ವಾದಿಯವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.
‘ಈಗಾಗಲೇ ಸ್ಥಳೀಯ ಕೆಎಚ್‌ಡಿಸಿ ನೇಕಾರರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ 17 ದಿನಗಳ ಕಾಲ ಗಂಜಿ ಹೋರಾಟ ಮಾಡಲಾಗಿತ್ತು. ಹುಬ್ಭಳ್ಳಿಗೆ ಪಾದಯಾತ್ರೆಯ ಮೂಲಕ ತೆರಳಿ ಹುಬ್ಬಳ್ಳಿಯ ಕೆಎಚ್‌ಡಿಸಿ ಕೇಂದ್ರ ಕಚೇರಿಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆಯನ್ನು ಮಾಡಲಾಗಿತ್ತು. ನಿಗಮದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರವಾಗಿದ್ದು, ತಪ್ಪಿತಸ್ಥರು ಮತ್ತು ಸಚಿವರು ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಶಿವಲಿಂಗ ಅವರು ಆರೋಪಿಸಿದರು.
‘ರಾಜ್ಯದಲ್ಲಿ 48 ಸಾವಿರದಷ್ಟು ಇದ್ದ ಕೈಮಗ್ಗ ನೇಕಾರರು ಈಗ ಕೇವಲ 3,800 ಮಾತ್ರ ಇದ್ದಾರೆ. ಸರ್ಕಾರ ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ನೇಕಾರರಿಗೆ ನಿರಂತರ ಉದ್ಯೋಗ ದೊರೆಯುತ್ತಿಲ್ಲ. ಇನ್ನೂ ಕೆಲವೇ ದಿನಗಳಲ್ಲಿ ಉಳಿದ ನೇಕಾರರು ಕೂಡಾ ಬೀದಿಗೆ ಬೀಳಲಿದ್ದಾರೆ. ಆದ್ದರಿಂದ ನೇಕಾರರ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆಯುವ ಸಲುವಾಗಿ ಮುಷ್ಕರ ಆರಂಭಿಸಲಾಗುವುದು’ ಎಂದು ತಿಳಿಸಿದರು.
ಸಂಗಪ್ಪ ಉದಗಟ್ಟಿ, ಎಸ್.ಎಸ್. ಮುಗಳೊಳ್ಳಿ, ಎಂ.ಎ. ಜಮಾದಾರ, ರಾಜೇಶ್ವರಿ ಬಾಣಕಾರ, ಅಸ್ಲಂ ಜಮಾದಾರ, ಬಸಪ್ಪ ಅಮಟಿ, ಶಂಕರ ಕೊಣ್ಣೂರ, ಸಿದ್ದಪ್ಪ ಕಡ್ಲಿಮಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.