ADVERTISEMENT

ಬಡವರಿಗೆ ಇಂದಿರಾ ಕ್ಯಾಂಟೀನ್‌ ಅಗತ್ಯ: ಶಾಸಕ ಚಿಮ್ಮನಕಟ್ಟಿ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 16:10 IST
Last Updated 26 ಅಕ್ಟೋಬರ್ 2024, 16:10 IST
ಗುಳೇದಗುಡ್ಡದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜರುಗಿದ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿದರು
ಗುಳೇದಗುಡ್ಡದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜರುಗಿದ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿದರು   

ಗುಳೇದಗುಡ್ಡ: ‘ಶ್ರೀಮಂತರು, ಕಾರು, ಬಂಗಲೆ ಹೊಂದಿರುವವರಿಗೆ ದೊಡ್ಡ ದೊಡ್ಡ ಹೋಟೆಲ್‍ಗಳಿದ್ದರೆ, ಬಡವರಿಗೆ, ಕೂಲಿ ವರ್ಗದ ಶ್ರಮಜೀವಿಗಳಿಗೆ ಇಂದಿರಾ ಕ್ಯಾಂಟೀನ್‌ ಅತೀ ಅಗತ್ಯವಾಗಿದೆ’ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.

ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಇಂದಿರಾ ಕ್ಯಾಂಟೀನ್‌ ನಿರ್ಮಾಣ ಮತ್ತು ₹12.25 ಲಕ್ಷ ಅನುದಾನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅತ್ಯಂತ ಆಸಕ್ತಿಯ ಯೋಜನೆಗಳಲ್ಲಿ ಒಂದಾಗಿದೆ. ಅವರು ಬಡವರಿಗಾಗಿ ಹಸಿವು ಮುಕ್ತ ಕರ್ನಾಟಕಕ್ಕಾಗಿ ಕಾರ್ಯಕ್ರಮ ಮಾಡಿದ್ದು, ಬಡಜನತೆ ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಅಲ್ಲದೇ ಇಲ್ಲಿನ ಪುರಸಭೆ ಸದಸ್ಯರು, ಪಕ್ಷದ ಮುಖಂಡರು, ಹಿರಿಯರು ತಿಂಗಳಲ್ಲಿ ಒಂದು ಬಾರಿಯಾದರೂ ಇಂದಿರಾ ಕ್ಯಾಂಟೀನ್‍ಗೆ ಬಂದು ಅಲ್ಲಿಯ ಆಹಾರವನ್ನು ಸೇವಿಸಿ. ಅಂದಾಗ ಅಲ್ಲಿನ ಆಹಾರದ ಗುಣಮಟ್ಟ ಹಾಗೂ ಸ್ವಚ್ಛತೆ ಗಮನಿಸಿದಂತಾಗುತ್ತದೆ’ ಎಂದರು.

ADVERTISEMENT

ಗುಳೇದಗುಡ್ಡದಲ್ಲಿ ಮುಂದಿನ ಕೆಡಿಪಿ ಸಭೆ: ಪುರಸಭೆ ಸದಸ್ಯ ಸಂತೋಷ ನಾಯನೇಗಲಿ ತಮ್ಮ ಭಾಷಣದಲ್ಲಿ, ಸಿದ್ದರಾಮಯ್ಯನವರು ಬಾದಾಮಿ ಶಾಸಕರಾಗಿದ್ದಾಗ ಒಂದು ಬಾರಿಯೂ ಗುಳೇದಗುಡ್ಡದಲ್ಲಿ ಕೆಡಿಪಿ ಸಭೆ ಮಾಡಲಿಲ್ಲ. ತಾವಾದರೂ ಮಾಡಿ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರಿಗೆ ವಿನಂತಿಸಿಕೊಂಡಾಗ, ಶಾಸಕರು ತಮ್ಮ ಭಾಷಣದಲ್ಲಿ ಮತಕ್ಷೇತ್ರದಲ್ಲಿ ಬಾದಾಮಿ ಮತ್ತು ಗುಳೇದಗುಡ್ಡ ಎರಡೂ ತಾಲ್ಲೂಕು ಕೇಂದ್ರ ಸ್ಥಳಗಳಾಗಿದ್ದು, ಕಳೆದ ಬಾರಿ ಎರಡೂ ತಾಲ್ಲೂಕುಗಳನ್ನೊಳಗೊಂಡ ಕೆಡಿಪಿ ಸಭೆ ಬಾದಾಮಿಯಲ್ಲಿಯೇ ಮಾಡಲಾಗಿತ್ತು. ಮುಂದಿನ ಬಾರಿ ಗುಳೇದಗುಡ್ಡದಲ್ಲಿ ಮಾಡುತ್ತೇವೆ ಎಂದು ಶಾಸಕ ಚಿಮ್ಮನಕಟ್ಟಿ ಭರವಸೆ ನೀಡಿದರು.

₹3.25 ಲಕ್ಷಗಳ ಸಮುದಾಯ ಆರೋಗ್ಯ ಕೇಂದ್ರದ ಚಾವಣಿ ಹಾಗೂ ಇತರೆ ದುರಸ್ತಿ, ₹4 ಲಕ್ಷ ಪಶು ಆಸ್ಪತ್ರೆಯ ಕಾಂಪೌಂಡ್ ದುರಸ್ತಿ, ಶೌಚಾಲಯ ಕಟ್ಟಡ ನಿರ್ಮಾಣ, ಪ್ಲಂಬಿಂಗ್ ಕೆಲಸ ಹಾಗೂ ಇತರೆ ದುರಸ್ತಿ, ₹5 ಲಕ್ಷ ಅನುದಾನದಲ್ಲಿ ಮೇಟ್ರಿಕ್ ನಂತರದ ಬಾಲಕರ ವಸತಿ ನಿಲಯದ ಶೌಚಾಲಯ ದುರಸ್ತಿ ಹಾಗೂ ಇತರೆ ದುರಸ್ತಿಗಳ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಯಿತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ, ಪುರಸಭೆ ಮಾಜಿ ಅಧ್ಯಕ್ಷ ವೈ.ಆರ್.ಹೆಬ್ಬಳ್ಳಿ, ರಾಜು ತಾಪಡಿಯಾ, ಪುರಸಭೆ ಅಧ್ಯಕ್ಷೆ ಜ್ಯೋತಿ ಗೋವಿನಕೊಪ್ಪ, ಉಪಾಧ್ಯಕ್ಷ ರಾಜಶೇಖರ ಹೆಬ್ಬಳ್ಳಿ, ಪುರಸಭೆ ಸದಸ್ಯ ವಿನೋದ ಮದ್ದಾನಿ, ಯಲ್ಲಪ್ಪ ಮನ್ನಿಕಟ್ಟಿ, ಸಂತೋಷ ನಾಯನೇಗಲಿ, ಅಂಬರೇಶ ಕವಡಿಮಟ್ಟಿ, ಪುರಸಭೆ ಮಾಜಿ ಉಪಾಧ್ಯಕ್ಷ ಪ್ರಕಾಶ ಮುರಗೋಡ ಇದ್ದರು. 23 ಜನ ಪುರಸಭೆ ಸದಸ್ಯರಲ್ಲಿ 6 ಜನ ಮಾತ್ರ ಸಭೆಗೆ ಹಾಜರಾಗಿದ್ದರೆ, ಉಳಿದ 17 ಜನ ಸದಸ್ಯರು ಸಭೆಗೆ ಗೈರಾಗಿದ್ದರು.

ಗುಳೇದಗುಡ್ಡದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜರುಗಿದ ಇಂದಿರಾ ಕ್ಯಾಂಟೀನ್ ಭೂಮಿಪೂಜೆ ಕಾರ್ಯಕ್ರಮದಲ್ಲಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಪುರಸಭೆಯಿಂದ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಫಲಾನುಭವಿಗಳಿಗೆ ಚೆಕ್ ವಿತರಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.