ಇಳಕಲ್: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಧನೆ ಮಾಡಲು ಮಹಿಳೆಯರು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿರಬೇಕು ಎಂದು ವೈದ್ಯೆ ಶೋಭಾ ವಿಠ್ಠಲ್ ಶ್ಯಾವಿ ಹೇಳಿದರು.
ಇಲ್ಲಿಯ ಬಸವನಗರ ಬಡಾವಣೆಯ ಅಯ್ಯಪ್ಪಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರೀದೇವಿ ಲಲಿತಾ ಮಹಿಳಾ ಬಳಗದಿಂದ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳೆಯರು ನಾಲ್ಕು ಗೋಡೆಗಳ ಮಧ್ಯೆ ಕೆಲಸ ಮಾಡಬೇಕು ಎನ್ನುವ ಹಿಂದಿನ ಸಾಮಾಜಿಕ ಕಟ್ಟಳೆ ಮೀರಿ ಸಮಾಜದ ಮುಖ್ಯವಾಹಿನಿಗೆ ಬಂದಾಗಿದೆ. ಕೋಟ್ಯಂತರ ಹೆಣ್ಣುಮಕ್ಕಳು ಇವತ್ತು ಸ್ವಾಭಿಮಾನ ಹಾಗೂ ಸ್ವಾವಲಂಬನೆಯಿಂದ ಜೀವನ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಶಿಕ್ಷಕಿ ಹಾಗೂ ಸಾಹಿತಿ ಇಂದುಮತಿ ಪುರಾಣಿಕ ಮಾತನಾಡಿ, ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ತಮ್ಮದೇ ಆದ ಛಾಪು ಮೂಡಿಸುತ್ತಾ ಮುನ್ನೇಲೆಗೆ ಬಂದಿದ್ದಾರೆ. ದೇಶದ ಪ್ರಗತಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆʼ ಎಂದು ಹೇಳಿದರು.
ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಾದ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು. ಡಾ.ಶೋಭಾ ಶ್ಯಾವಿ, ಸಾಹಿತಿ ಇಂದುಮತಿ ಪುರಾಣಿಕ, ಲೀಲಾವತಿ ಸಾಲಿಮಠ, ಶ್ರೀದೇವಿ ಹರ್ತಿ ಅವರನ್ನು ಸನ್ಮಾನಿಸಲಾಯಿತು. ಗೌರಮ್ಮ ಬಿಜ್ಜಲ್, ಸುಲೋಚನಾ ನೀಲಿ, ವಾಣಿ ಗಜೇಂದ್ರಗಡ, ಬೇಬಿ ರಾಠೋಡ, ದ್ರಾಕ್ಷಾಯಿಣಿ ರಾಂಪೂರ, ಅನಿತಾ ಹಾಲಾಪೂರ, ಪಾರ್ವತಿ ಹಿರೇಮಠ, ಪ್ರಭಾವತಿ ಬೀಳಗಿ ಇದ್ದರು. ಸವಿತಾ ಗೌಡರ ಸ್ವಾಗತಿಸಿದರು. ಮಾಲತಿ ಜೋಗಿನ ಹಾಗೂ ಪವಿತ್ರ ಹಿರೇಮಠ ನಿರೂಪಿಸಿದರು. ಸುವರ್ಣ ಓತಗೇರಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.