ADVERTISEMENT

ಜಮಖಂಡಿ | ಆರಂಭವಾಗದ ಏತ ನೀರಾವರಿ: ರೈತರ ಆಕ್ರೋಶ

ಬಬಲೇಶ್ವರ ಮತಕ್ಷೇತ್ರ ಮಾರ್ಗದ ಪೈಪ್‌ಲೈನ್‌ಗೆ ಮಾತ್ರ ನೀರು ಪೂರೈಕೆ; ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ

ಆರ್.ಎಸ್.ಹೊನಗೌಡ
Published 19 ಜುಲೈ 2024, 4:25 IST
Last Updated 19 ಜುಲೈ 2024, 4:25 IST
<div class="paragraphs"><p><strong>ಜಮಖಂಡಿ ತಾಲ್ಲೂಕಿನ ಕಾಜಿಬೀಳಗಿ ಗ್ರಾಮದಲ್ಲಿ ತುಬಚಿ-ಬಬಲೇಶ್ವರ ಏತ ನೀರಾವರಿ ಕಾಲುವೆ ನೀರಿಲ್ಲದೆ ಬರಿದಾಗಿರುವದು.</strong></p></div>

ಜಮಖಂಡಿ ತಾಲ್ಲೂಕಿನ ಕಾಜಿಬೀಳಗಿ ಗ್ರಾಮದಲ್ಲಿ ತುಬಚಿ-ಬಬಲೇಶ್ವರ ಏತ ನೀರಾವರಿ ಕಾಲುವೆ ನೀರಿಲ್ಲದೆ ಬರಿದಾಗಿರುವದು.

   

ಜಮಖಂಡಿ: ಮಹಾರಾಷ್ಟ್ರದಲ್ಲಿ ವಿಪರಿತ ಮಳೆಯಾಗಿ ಕೃಷ್ಣಾ ನದಿ ತುಂಬಿ ಹರಿಯುತ್ತಿದ್ದರೂ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಮಾತ್ರ ಇನ್ನೂ ಆರಂಭವಾಗಿಲ್ಲ. ಆದರೆ ಈ ಭಾಗದಲ್ಲಿ ಸಮರ್ಪಕ ಮಳೆಯಾಗದೇ ಬಿತ್ತನೆ ಮಾಡಿದ ಬೆಳೆಗಳು ಮುಗಿಲು ನೋಡುತ್ತಿವೆ.

ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯಲ್ಲಿ ಎರಡು ಯೋಜನೆಗಳಿವೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರಕ್ಕೆ ಹೋಗುವ 12 ಅಡಿ ವ್ಯಾಸದ ಪೈಪ್‌ಲೈನ್ ಹೊಂದಿದ್ದು, ಈ ಯೋಜನೆ ಆರಂಭವಾಗಿ ಒಂದು ವಾರ ಕಳೆದಿದೆ. ಇನ್ನೊಂದು ಯೋಜನೆ ಜಮಖಂಡಿ ಕೊನೆಯ ಭಾಗದ ಹಳ್ಳಿಗಳಿಗೆ ಬರುವ ಯೋಜನೆ 8 ಅಡಿ ವ್ಯಾಸದ ಪೈಪ್‌ಲೈನ್ ಹೊಂದಿದ್ದು ಇನ್ನೂ ಆರಂಭವಾಗಿಲ್ಲ. ಇದರಿಂದ ರೈತರು ಕಂಗಾಲಾಗಿದ್ದಾರೆ. ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಹಚ್ಚುವ ಕೆಲಸ ನಡೆದಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ADVERTISEMENT

ಜಮಖಂಡಿ ತಾಲ್ಲೂಕಿನ ಯೋಜನೆಯಿಂದ ಸಾವಳಗಿ, ಗೋಠೆ, ಗದ್ಯಾಳ, ಕುರಗೋಡ, ಕಲಬೀಳಗಿ, ಕಾಜಿಬೀಳಗಿ, ಕನ್ನೊಳ್ಳಿ, ಅಥಣಿ ತಾಲ್ಲೂಕಿನ ಹಾಲಳ್ಳಿ, ಅರಟಾಳ, ವಿಜಯಪುರ ಜಿಲ್ಲೆಯ ಹೊನವಾಡ, ನಾಗರಾಳ ಗ್ರಾಮಗಳ ಜಮೀನುಗಳಿಗೆ ಅನುಕೂಲವಾಗುತ್ತದೆ.

ಈ ಯೋಜನೆ ಅಂದಾಜು ₹ 3,600 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ವಿಜಯಪುರ, ಅಥಣಿ, ಜಮಖಂಡಿ ತಾಲ್ಲೂಕಿನ 1.5 ಲಕ್ಷ ಎಕರೆ ಕೃಷಿ ಭೂಮಿಗೆ ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಮಳೆಗಾಲದಲ್ಲಿ ಮುಂಗಾರು ಬೆಳೆಗೆ 3.80 ಟಿ.ಎಂ.ಸಿ ಅಡಿ ನೀರನ್ನು ಬಳಸುವ ಯೋಜನೆಯಾಗಿದ್ದರೂ ನಾಲೆಗಳಿಗೆ ನೀರು ಹರಿಯುತ್ತಿಲ್ಲ. ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿದ್ದಾರೆ. ಆದರೆ ಸರಿಯಾದ ಸಮಯಕ್ಕೆ ನೀರು ಬರದ ಕಾರಣ ಇದ್ದೂ ಇಲ್ಲದಂತಾಗಿದೆ. ಅಧಿಕಾರಿಗಳು ಬೆಳೆಗಳಿಗೆ ಅನುಕೂಲವಾಗುವಂತೆ ಸರಿಯಾದ ಸಮಯಕ್ಕೆ ನೀರು ಬಿಟ್ಟರೆ ಈ ಯೋಜನೆಯಿಂದ ಅನುಕೂಲವಾಗುತ್ತದೆ ಎಂಬುದು ರೈತರ ಅಭಿಮತ.

ಪಕ್ಕದ ಬಬಲೇಶ್ವರ ಹಾಗೂ ಅಥಣಿ ತಾಲ್ಲೂಕಿನ ಏತ ನೀರಾವರಿ ಯೋಜನೆಗಳು ಆರಂಭವಾಗಿ ಹಲವು ದಿನಗಳು ಕಳೆದಿವೆ. ಅಲ್ಲಿ ಪ್ರಭಾವಿ ರಾಜಕಾರಣಿಗಳಿಂದ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ರೈತರಿಗೆ ಅನುಕೂಲ ಮಾಡುತ್ತಾರೆ. ಆದರೆ ನಮ್ಮ ಭಾಗದ ರಾಜಕೀಯ ಮುಖಂಡರ ಇಚ್ಛಾಶಕ್ತಿ ಕೊರತೆಯಿಂದ ನೀರು ಪೂರೈಕೆ ಆರಂಭವಾಗುತ್ತಿಲ್ಲ ಎಂದು ರೈತರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನಾದ್ಯಂತ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಬಿದ್ದ ಕಾರಣ ಮಳೆಯಾಶ್ರಿತ ಪ್ರದೇಶದಲ್ಲಿ ಉತ್ಸಾಹದಿಂದ ತೊಗರಿ, ಹೆಸರು, ಉದ್ದು ಹಾಗೂ ನೀರಾವರಿ ಭೂಮಿಯಲ್ಲಿ ಕಬ್ಬು, ಗೋವಿನಜೋಳ ಸೇರಿದಂತೆ ಹಲವು ಬೆಳೆ ಬೆಳೆದಿದ್ದಾರೆ. ಆದರೆ ಕಳೆದ ಮೂರು ವಾರಗಳಿಂದ ಮಳೆಯಾಗದ ಕಾರಣ ರೈತರು ಮುಗಿಲು ನೋಡುವಂತಾಗಿದೆ. ಕೂಡಲೇ ತುಬಚಿ-ಬಬಲೇಶ್ವರ ಏತ ನೀರಾವರಿ ಆರಂಭ ಮಾಡಿದರೆ ಈ ಭಾಗದ ರೈತರಿಗೆ ಅನುಕೂಲವಾಗುತ್ತದೆ.

‘ಕಳೆದ ಒಂದು ವಾರದಿಂದ ಮೋಡ ಕವಿದ ವಾತಾವರಣವಿದೆ. ಆದರೆ ಒಂದು ಹನಿ ಕೂಡ ಮಳೆ ಇಳೆಗೆ ಸುರಿದಿಲ್ಲ. ಸುಮಾರು 10 ಎಕರೆ ಪ್ರದೇಶದಲ್ಲಿ ಬೆಳೆದ ತೊಗರಿ ಬಾಡುತ್ತಿದೆ. ಎಡೆ ಹೊಡೆದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಹೊಲಕ್ಕೆ ಹೋದರೇ ತೇವಾಂಶ ಕೊರತೆಯಿಂದಾಗಿ ಬೆಳೆ ಒಣಗುತ್ತಿರುವುದು ನೋಡಿ ಕಣ್ಣೀರು ಬರುತ್ತಿದೆ’ ಎಂದು ರೈತರೊಬ್ಬರು ತಿಳಿಸಿದರು.

‘ಇದು ಒಳ್ಳೆಯ ಯೋಜನೆಯಾಗಿದ್ದು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನೀರು ಸರಿಯಾಗಿ ಬರುತ್ತಿಲ್ಲ. ಮುಂಜಾಗ್ರತೆ ವಹಿಸಿ ಎಲ್ಲ ದುರಸ್ತಿ ಮಾಡಿಕೊಳ್ಳುವದನ್ನು ಬಿಟ್ಟು ನೀರು ಬಂದ ಮೇಲೆ ರೈತರ ಬೆಳೆಗಳು ಒಣಗುತ್ತಿರುವಾಗ ಅಧಿಕಾರಿಗಳು ಎಚ್ಚರವಾಗುತ್ತಾರೆ. ಕುಂಟು ನೆಪ ಹೇಳಿ ಜಾರಿಕೊಳ್ಳುತ್ತಿದ್ದಾರೆ’ ಎಂದು ದ್ರಾಕ್ಷಿ ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಅಭಯಕುಮಾರ ನಾಂದ್ರೆಕರ ಬೇಸರ ವ್ಯಕ್ತಪಡಿಸಿದರು.

ಚಿಕ್ಕಲಕಿ-ಕವಟಗಿ ಹತ್ತಿರ 8 ಅಡಿ ವ್ಯಾಸದ ಪೈಪ್‌ಲೈನ್ ಒಡೆದಿದ್ದು, ದುರಸ್ತಿ ಕಾರ್ಯ ಮಾಡಲಾಗುತ್ತಿದೆ. ಎರಡು ದಿನಗಳಲ್ಲಿ ಕೆಲಸ ಮುಗಿಸಿ ನೀರು ಬೀಡಲಾಗುವುದು
ಶಿವಮೂರ್ತಿ, ಎಂಜಿನಿಯರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.