ಬಾಗಲಕೋಟೆ: ‘ತಮ್ಮ ನಡೆ, ನುಡಿ ಜೀವನದ ಮೂಲಕ ಜಾತೀಯತೆಯ ಸಂಕುಚಿತ ಮನೋಭಾವ ತೊಡೆದು ಹಾಕಿ ಸಮ ಸಮಾಜ ನಿರ್ಮಾಣದ ಕನಸನ್ನು ಭಕ್ತ ಕನಕದಾಸರು ಕಂಡಿದ್ದರು. ಅದನ್ನು ನನಸಾಗಿಸಲು ನಾವೆಲ್ಲರೂ ಶ್ರಮಿಸಬೇಕಿದೆ’ ಎಂದು ಶಾಸಕ ಎಚ್.ವೈ. ಮೇಟಿ ಹೇಳಿದರು.
ನವನಗರದ ಕಲಾಭವನದಲ್ಲಿ ಸೋಮವಾರ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಜಾತ್ಯತೀತತೆಯ ಭಾವ ಎಲ್ಲರಲ್ಲಿ ತರುವ ಸಂದೇಶ ಭಕ್ತ ಕನಕದಾಸರದಾಗಿತ್ತು. ಇಂತಹ ಮಹಾತ್ಮರ ಜೀವನಶೈಲಿ ಹಾಗೂ ಆದರ್ಶಗಳನ್ನು ಯುವಕರು, ವಿದ್ಯಾರ್ಥಿಗಳು ಅಳವಡಿಸಿಕೊಂಡಾಗ ಮಾತ್ರ ಜಯಂತಿ ಆಚರಿಸಿದ್ದು ಸಾರ್ಥಕವಾಗುತ್ತದೆ’ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಮಾತನಾಡಿ, ‘ಇವತ್ತಿಗೂ ಜಾತೀಯತೆ ಸೋಂಕು ಕಡಿಮೆಯಾಗಿಲ್ಲ. ಮತ್ತಷ್ಟು ಜಾಸ್ತಿಯಾಗಿದೆ. ಅದನ್ನು ಪರಿವರ್ತನೆ ಮಾಡಿ ಎಲ್ಲರೂ ಒಂದೇ ಎಂಬ ತತ್ವವನ್ನು ಪಸರಿಸಿ ಸಮ ಸಮಾಜದ ನಿರ್ಮಾಣ ಮಾಡಬೇಕಿದೆ’ ಎಂದರು.
ಉಪನ್ಯಾಸ ನೀಡಿದ ಯಕ್ಕುಂಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವೈ.ಎಂ.ಯಾಕೊಳ್ಳಿ ಮಾತನಾಡಿದರು. ಹಾವೇರಿ ಜಿಲ್ಲೆಯ ಭರಡಿ ಗುತ್ತಲ ಗ್ರಾಮದ ಲಿಂಗದಳ್ಳಿ ಹಾಲಪ್ಪ ಅವರಿಗೆ ಕನಕಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆಣ್ಣವರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ನಿವೃತ್ತ ಕೃಷಿ ಅಧಿಕಾರಿ ಎಚ್.ಬಿ.ಗೊರವರ ಇದ್ದರು.
ಅದ್ದೂರಿ ಮೆರವಣಿಗೆ: ಜಿಲ್ಲಾಡಳಿತ ಭವನದಿಂದ ಕಲಾ ಭವನದವರೆಗೆ ಕನಕದಾಸರ ಚಿತ್ರದ ಅದ್ದೂರಿ ಮೆರವಣಿಗೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.