ADVERTISEMENT

ಶಿಕ್ಷಣವಂತರಿಂದ ಆರ್ಥಿಕ ಚೈತನ್ಯ: ಶಾಸಕ ಪಾಟೀಲ್

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2024, 15:18 IST
Last Updated 18 ನವೆಂಬರ್ 2024, 15:18 IST
ಬೀಳಗಿ ತಹಶೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ಏರ್ಪಡಿಸಿದ ಭಕ್ತ ಕನಕದಾಸರ ಜಯಂತ್ಯೋತ್ಸವ ಸಮಾರಂಭವನ್ನು ಶಾಸಕ ಜೆ.ಟಿ.ಪಾಟೀಲ ಕನಕದಾಸರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸುವ ಮೂಲಕ ಚಾಲನೆ ನೀಡಿದರು.
ಬೀಳಗಿ ತಹಶೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ಏರ್ಪಡಿಸಿದ ಭಕ್ತ ಕನಕದಾಸರ ಜಯಂತ್ಯೋತ್ಸವ ಸಮಾರಂಭವನ್ನು ಶಾಸಕ ಜೆ.ಟಿ.ಪಾಟೀಲ ಕನಕದಾಸರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸುವ ಮೂಲಕ ಚಾಲನೆ ನೀಡಿದರು.   

ಬೀಳಗಿ: ‘ಸಮಾಜದಲ್ಲಿ ಶಿಕ್ಷಣವಂತರ ಪ್ರಮಾಣ ಜಾಸ್ತಿಯಾದರೆ ತನ್ನಿಂದತಾನೆ ಆರ್ಥಿಕ ಚೈತನ್ಯವಾಗುತ್ತದೆ ಜೊತೆಗೆ ವೈಯಕ್ತಿಕ ಗೌರವ ಹೆಚ್ಚುತ್ತದೆ’ ಎಂದು ಶಾಸಕ ಜೆ.ಟಿ.ಪಾಟೀಲ್ ಹೇಳಿದರು.

ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ ಬೀಳಗಿ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ದಾಸಶ್ರೇಷ್ಠ ಕನಕದಾಸರ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಸರ್ಕಾರಿ ಕಚೇರಿಗಳಲ್ಲಿರುವ ಮಧ್ಯವರ್ತಿಗಳ ಹಾವಳಿ ತಡೆಗಟ್ಟುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗುವುದು. ಜೊತೆಗೆ ಭ್ರಷ್ಟಾಚಾರ ತಡೆಗಟ್ಟಿದ ಆತ್ಮತೃಪ್ತಿ ಇರುತ್ತದೆ. ಪ್ರತಿಗ್ರಾಮಕ್ಕೆ ಗ್ರಾಮ ಆಡಳಿತಾಧಿಕಾರಿ, ಪಿಡಿಒ ಭೇಟಿ ನೀಡಿ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ ಹಾಗೂ ಮನೆಯಿಲ್ಲದವರಿಗೆ ಮನೆ ಸರ್ವೆ ಕಾರ್ಯ ಮಾಡಿ ಮತ್ತು ಲೈಸೆನ್ಸ್ ಇಲ್ಲದವರಿಗೆ ಉಚಿತ ಲೈಸೆನ್ಸ್ ನೀಡುವ ಕಾರ್ಯವನ್ನು ಡಿಸೆಂಬರ್ ತಿಂಗಳಲ್ಲಿ ಪ್ರಾರಂಭ ಮಾಡಿ’ ಎಂದರು.

ADVERTISEMENT

ಬೀಳಗಿ ಕ್ರಾಸ್‌ನ ಕನಕ ವೃತ್ತದಲ್ಲಿರುವ ಕನಕದಾಸ ಮೂರ್ತಿಗೆ ಶಾಸಕ ಜೆ.ಟಿ ಪಾಟೀಲ್, ಮಾಜಿ ಸಚಿವ ಎಸ್.ಆರ್ ಪಾಟೀಲ್ ವಿಧಾನ ಪರಿಷತ್ ಸದಸ್ಯ ಎಚ್.ಆರ್ ನಿರಾಣಿ ಹಾಗೂ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ಎನ್ ಪಾಟೀಲ್ ಮಾಲೆ ಅರ್ಪಿಸಿದರು.

ಪಟ್ಟಣದ ಬಸವೇಶ್ವರ ವೃತ್ತದಿಂದ ತಹಶೀಲ್ದಾರ್ ಕಾರ್ಯಾಲಯದವರೆಗೆ ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗಿದರು. ಗೊಂಬೆ ಕುಣಿತ ಹಾಗೂ ಕಲಾವಿದರ ವಾದ್ಯ ವೈಭವಗಳು ಮೆರವಣಿಗೆಯ ಮೆರಗು ಹೆಚ್ಚಿಸಿದವು.

ತಹಶೀಲ್ದಾರ್ ವಿನೋದ ಹತ್ತಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಆದಾಪುರ ಸ್ವಾಗತಿಸಿದರು. ಶಶಿಕಾಂತ ಪೂಜಾರಿ ಉಪನ್ಯಾಸ ನೀಡಿದರು.

ತಾಲ್ಲೂಕು ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಅಭಯಕುಮಾರ ಮೊರಬ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ದೇವಿಂದ್ರ ಧನಪಾಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬಿ.ಜಿ.ಕವಟೇಕರ, ಹಿರಿಯ ನೋಂದಣಾಧಿಕಾರಿ ಎಸ್.ಬಿ.ಮುಂಡರಗಿ, ಕೃಷಿ ಇಲಾಖೆಯ ಎಸ್.ಎಸ್.ಪಾಟೀಲ್, ಹಾಲುಮತ ಸಮಾಜದ ತಾಲ್ಲೂಕು ಅಧ್ಯಕ್ಷ ಪಡಿಯಪ್ಪ ಕರಿಗಾರ, ಸತ್ಯಪ್ಪ ಮೆಲ್ನಾಡ, ಹನುಮಂತ ಕಾಕಂಡಕಿ, ಕೆಎಂಎಫ್ ನಿರ್ದೇಶಕ ಸಿದ್ದಪ್ಪ ಕಡಪಟ್ಟಿ, ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ಅಣವೀರಯ್ಯ ಪ್ಯಾಟಿಮಠ, ಅಶೋಕ ಜೋಶಿ, ಕಿರಣ ಬಾಳಾಗೋಳ, ಶ್ರೀಶೈಲ ಅಂಟಿನ, ಮಹಾದೇವ ಹಾದಿಮನಿ ಇದ್ದರು.

ವಿ.ಆರ್. ಹಿರೇನಿಂಗಪ್ಪನವರ ನಿರೂಪಿಸಿದರು, ಸಂಗಮೇಶ ಪಾನಶೆಟ್ಟಿ ತಂಡದವರು ನಾಡಗೀತೆ ಹಾಡಿದರು.

ಕಬ್ಬಿನ ಟ್ರ್ಯಾಕ್ಟರ್‌ಗಳಿಗೆ ಕಠಿಣ ನಿಯಮ

ಕಬ್ಬು ತುಂಬಿಕೊಂಡು ಹೋಗುವ ವಾಹನಗಳಿಗೆ ಹಿಂಬದಿಯಲ್ಲಿ ಕಡ್ಡಾಯವಾಗಿ ರಿಫ್ಲೆಕ್ಟರ್ ಅಳವಡಿಸಬೇಕು. ವಾಹನಗಳಲ್ಲಿ ಧ್ವನಿವರ್ಧಕ ಅಳವಡಿಸುವಂತಿಲ್ಲ. ನಿಯಮಗಳನ್ನು ಉಲ್ಲಂಘನೆ ಮಾಡುವ ಟ್ರ್ಯಾಕ್ಟರ್‌ಗಳ ಧ್ವನಿವರ್ಧಕಗಳನ್ನು ಸಂಗ್ರಹಿಸಿ ಆ ವಾಹನದ ಮೇಲೆ ಕೇಸ್ ಬುಕ್ ಮಾಡಿ ಧ್ವನಿವರ್ಧಕಗಳನ್ನು ಸುಟ್ಟುಬಿಡುವಂತೆ ಪೊಲೀಸ್ ಇಲಾಖೆಗೆ ಶಾಸಕ ಜೆ.ಟಿ.ಪಾಟೀಲ್ ಸೂಚಿಸಿದರು. ಈ ವಿಷಯದ ಕುರಿತು ಆದೇಶ ಹೊರಡಿಸಲು ತಹಶೀಲ್ದಾರ್ ವಿನೋದ್ ಹತ್ತಳ್ಳಿ ಅವರಿಗೆ ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.