ಬಾಗಲಕೋಟೆ: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾ ಘಟಕದಿಂದ ಜು.26ರಂದು ಕಾರ್ಗಿಲ್ ವಿಜಯ ದಿವಸದ ರಜತ ಮಹೋತ್ಸವದ ಪ್ರಯುಕ್ತ ಬೃಹತ್ ಕಾರ್ಯಕ್ರಮ ಹಾಗೂ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸುಬೇದಾರ ಮೇಜರ್ ಗದಿಗೆಪ್ಪ ಅರಕೇರಿ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 11ಕ್ಕೆ ನವನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಲಿದ್ದು, ಶಾಸಕ ಎಚ್.ವೈ.ಮೇಟಿ ಉದ್ಘಾಟಿಸಲಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಪಿ.ಸಿ.ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣ ಭಾಂಡಗೆ, ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮತ್ತಿತರರು ಭಾಗವಹಿಸಲಿದ್ದಾರೆ. ಗುಳೇದಗುಡ್ಡದ ಇಂಜನವಾರಿ ಒಪ್ಪತ್ತೇಶ್ವರಮಠದ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.
ಉಪನ್ಯಾಸಕ ಚಂದ್ರಶೇಖರ ಕಾಳನ್ನವರ ಉಪನ್ಯಾಸ ನೀಡಲಿದ್ದು, ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಶಾಂತ ಸಬರದ ಮತ್ತಿತರರು ಭಾಗವಹಿಸಲಿದ್ದಾರೆ. ಯುದ್ಧದಲ್ಲಿ ಗಾಯಗೊಂಡ ಸಿಪಾಯಿ ರಂಗಪ್ಪ ಆಲೂರ, ಸಿಪಾಯಿ ರಮೇಶ ಹರಿಜನ, ಹವಾಲ್ದಾರ ಅರ್ಜುನ ಹೊಸಹಳ್ಳಿ, ನಾಯಕ ಸುಭಾಸ ಗದಗಿನ ಅವರನ್ನು ಸನ್ಮಾನಿಸಲಾಗುವುದು ಎಂದರು.
ಹುತಾತ್ಮ ವೀರರ ಕುಟುಂಬದ ಚೊಳಚಗುಡ್ಡದ ನಿರ್ಮಲಾ ಕುಲಕರ್ಣಿ, ಬೀಳಗಿಯ ಮಯಾದೇವಿ ಪೋತರಾಜ, ಇಳಕಲ್ಲಿನ ಲಕ್ಷ್ಮಿಬಾಯಿ ಜಾಧವ, ಮಾಚಕನೂರಿನ ರುಕ್ಷ್ಮಿಣಿ ಮಿರ್ಜಿ, ಶಾಂತಾಬಾಯಿ ತೇಲಿ ಅವರನ್ನೂ ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಸಂಘದ ಗೌರವಾಧ್ಯಕ್ಷ ಕ್ಯಾಪ್ಟನ್ ಅರ್ಜುನ ಕೋರಿ ಮಾತನಾಡಿ, ನಗರದಲ್ಲಿರುವ ಕೇಂದ್ರಿಯ ವಿದ್ಯಾಲಯದಲ್ಲಿ 10ನೇ ತರರಗತಿವರೆಗೆ ಮಾತ್ರವೇ ಕಲಿಯಲು ಅವಕಾಶವಿದ್ದು, ದ್ವಿತೀಯ ಪಿಯುಸಿವರೆಗೆ ಕಾಲೇಜು ಆರಂಭಿಸಬೇಕು. ಬಾಗಲಕೋಟೆಯಿಂದ ದೆಹಲಿಗೆ ನಿರಂತರ ರೈಲು ಆರಂಭಿಸಬೇಕು, ಮಾಜಿ ಸೈನಿಕ ಕಲ್ಯಾಣ ಮಂಟಪಕ್ಕೆ ಜಾಗ ಒದಗಿಸಬೇಕು ಎಂದು ಮನವಿ ಮಾಡಿದರು.
ಪ್ರಶಾಂತ ಸಬರದ, ಮಹಾಂತೇಶ ಗಸ್ತಿಮಠ, ಮಲ್ಲಪ್ಪ ಕೋಮಾರ, ವಿಠ್ಠಲ ತೆಗ್ಗಿ ಇದ್ದರು .
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.