ADVERTISEMENT

ಬಾಗಲಕೋಟೆ | ನನಸಾಗದ ಸರ್ಕಾರಿ ವೈದ್ಯಕೀಯ ಕಾಲೇಜು: ನಿರಾಸೆ ಮೂಡಿಸಿದ ಬಜೆಟ್

ಯುಕೆಪಿ 3ನೇ ಹಂತ ಜಾರಿಗಿಲ್ಲ ಸ್ಪಷ್ಟತೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2024, 8:30 IST
Last Updated 17 ಫೆಬ್ರುವರಿ 2024, 8:30 IST
<div class="paragraphs"><p>ರಾಜ್ಯ ಬಜೆಟ್‌ </p></div>

ರಾಜ್ಯ ಬಜೆಟ್‌

   

ಬಾಗಲಕೋಟೆ: ಘೋಷಣೆಯಾಗಿ ದಶ ವರ್ಷ ಪೂರೈಸಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಈ ವರ್ಷವೂ ಅನುದಾನ ದೊರೆತಿಲ್ಲ. ಜಿಲ್ಲೆಯ ಜೀವನಾಡಿಯಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಉಪಯೋಜನೆಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಲಾಗುವುದು ಎಂದು ಹೇಳಲಾಗಿದೆ. ಆದರೆ, ಅನುದಾನದ ಬಗ್ಗೆ ಸ್ಪಷ್ಟತೆ ಇಲ್ಲ.

2014ದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಘೋಷಿಸಿರುವ ಯೋಜನೆಗೆ ಈ ವರ್ಷ ಅನುದಾನ ಸಿಗಲಿದೆ ಎಂದೇ ಕಾಂಗ್ರೆಸ್‌ ನಾಯಕರು ಹೇಳಿದ್ದರೆ. ಆದರೆ, ಬಜೆಟ್‌ನಲ್ಲಿ ಈ ಬಗ್ಗೆ ಪ್ರಸ್ತಾಪವೇ ಆಗಿಲ್ಲ. ಇದು ಜಿಲ್ಲೆಯ ಜನರಲ್ಲಿ ತೀವ್ರ ನಿರಾಸೆಯುಂಟು ಮಾಡಿದೆ.

ADVERTISEMENT

ಕರ್ನಾಟಕ ನೀರಾವರಿ ನಿಗಮದಿಂದ ಜಿಲ್ಲೆಯ ಮೆಳ್ಳಿಗೇರಿ-ಹಲಗಲಿ, ಸಸಾಲಟ್ಟಿ-ಶಿವಲಿಂಗೇಶ್ವರ, ಶಿರೂರು,‌ ಅನವಾಲ ಏತ‌ ನೀರಾವರಿ ಸೇರಿದಂತೆ‌ ರಾಜ್ಯದ ವಿವಿಧ ಏತ ನೀರಾವರಿಗಳಿಗೆ ₹ 7,280 ಕೋಟಿ ಘೋಷಿಸಲಾಗಿದೆ.

ಕೃಷ್ಣಾ‌ಭಾಗ್ಯ ಜಲ ನಿಗಮದಿಂದ ಜಿಲ್ಲೆಯ ಕೆರೂರು ಸೇರಿದಂತೆ ರಾಜ್ಯದ ಏತ ನೀರಾವರಿಗೆ ₹ 3,779 ಕೋಟಿ ಘೋಷಿಸಲಾಗಿದೆ. ಆದರೆ, ಜಿಲ್ಲೆಯ ಯೋಜನೆಗಳಿಗೆ ಎಷ್ಟು ಸಿಗಲಿದೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಯೋಜನೆ ಪೂರ್ಣಗೊಳ್ಳುವಷ್ಟು ಅನುದಾನ ದೊರೆತರೆ ಜನತೆಗೆ ಒಂದಷ್ಟು ಅನುಕೂಲ ಆಗಲಿದೆ.

ಸಕ್ಕರೆ ಕಾರ್ಖಾನೆಗಳಲ್ಲಿ ಎಪಿಎಂಸಿ‌ ವತಿಯಿಂದ ತೂಕದ ಯಂತ್ರ ಅಳವಡಿಕೆ ಮಾಡುವುದರಿಂದ ತೂಕದಲ್ಲಿ ಮೋಸ‌ ಆಗುತ್ತದೆ ಎಂದು ದೂರುತ್ತಿದ್ದ ರೈತರಿಗೆ ಒಂದಷ್ಟು ನಿರಾಳ ಆಗಬಹುದು.

ಜಿಲ್ಲಾ ಆಸ್ಪತ್ರೆಯಲ್ಲಿ ಸಂಯೋಜಿತ‌ ಮತ್ತು ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ, ಹುನಗುಂದದಲ್ಲಿ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ. ಜಿಲ್ಲೆಯಲ್ಲಿ ವಿಮುಕ್ತ ದೇವದಾಸಿಯರು ಹೆಚ್ಚಿದ್ದಾರೆ. ಅವರ ಮಾಸಾಶನವನ್ನು ₹1,500 ರಿಂದ ₹ 2,000ಕ್ಕೆ ಹೆಚ್ಚಳ ಮಾಡಲಾಗಿದೆ.

2024-29ರವರೆಗೆ ರೂಪಿಸಿರುವ ಹೊಸ ಜವಳಿ ನೀತಿಯಡಿ ₹10 ಸಾವಿರ ಕೋಟಿ ಬಂಡವಾಳ ಹೂಡಲಾಗುತ್ತಿದ್ದು, 2 ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ ನೇಕಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅದರ ಲಾಭ ಎಷ್ಟು ಸಿಗುವುದೋ ಗೊತ್ತಿಲ್ಲ. ರಾಜ್ಯದ ವಿವಿಧೆಡೆ ಜವಳಿ ಪಾರ್ಕ್, 25 ಮಿನಿ ಜವಳಿ ಪಾರ್ಕ್ ಸ್ಥಾಪನೆ ಬಗ್ಗೆ ಉಲ್ಲೇಖಿಸಲಾಗಿದೆ. ಸ್ಥಳಗಳ ಉಲ್ಲೇಖವಿಲ್ಲ.

ಕೆಎಸ್‌ಟಿಡಿಸಿ ವತಿಯಿಂದ ಐಹೊಳೆಯಲ್ಲಿ ಹೋಟೆಲ್ ನಿರ್ಮಾಣ ಮಾಡಲಾಗುವುದು ಎಂದು ಘೋಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.